ಜೋ ಬಿಡೆನ್ ಅಧಿಕಾರ ಕೇಂದ್ರಕ್ಕೆ ಮತ್ತೊರ್ವ ಭಾರತೀಯ ಮೂಲದ ಮಹಿಳೆಯ ಆಯ್ಕೆ ಸಾಧ್ಯತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 30, 2020 | 3:17 PM

ಅಧ್ಯಕ್ಷರ ಸಲಹಾ ಮಂಡಳಿಯಲ್ಲಿ ವಿಭಿನ್ನ ಚಿಂತನೆಗಳಿರುವ ವ್ಯಕ್ತಿಗಳಿರಬೇಕು ಎಂಬ ತಮ್ಮ ನಿಲುವಿಗೆ ಬಿಡೆನ್ ಬದ್ಧತೆ ತೋರಿಸುತ್ತಿದ್ದಾರೆ. ದೇಶದ ಆರ್ಥಿಕ ನೀತಿಗಳನ್ನು ಉದಾರವಾದಿ ಚಿಂತಕರಿಂದ ಮರರೂಪಿಸುವ ಪ್ರಯತ್ನಗಳಿಗೆ ಮುಂದಾಗಿದ್ದಾರೆ.

ಜೋ ಬಿಡೆನ್ ಅಧಿಕಾರ ಕೇಂದ್ರಕ್ಕೆ ಮತ್ತೊರ್ವ ಭಾರತೀಯ ಮೂಲದ ಮಹಿಳೆಯ ಆಯ್ಕೆ ಸಾಧ್ಯತೆ
ಜೋ ಬಿಡನ್ ನೀರಾ ಟಂಡನ್​ಗೆ ಶ್ವೇತಭವನದಲ್ಲಿ ಉನ್ನತ ಹಂತದ ಹುದ್ದೆ ನೀಡುವ ನಿರೀಕ್ಷೆ ಇದೆ.
Follow us on

ವಾಷಿಂಗ್​ಟನ್: ಕಮಲಾ ಹ್ಯಾರಿಸ್ ನಂತರ ಈಗ ಮತ್ತೊರ್ವ ಭಾರತೀಯ ಮೂಲದ ಮಹಿಳೆಗೆ ಅಮೆರಿಕದ ಉನ್ನತ ಹಂತದ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ನೀರಾ ಟಂಡನ್​ಗೆ ಶ್ವೇತಭವನದಲ್ಲಿ ಬಜೆಟ್ ಮತ್ತು ಆಡಳಿತ ನಿರ್ವಹಣೆಯ ಉನ್ನತ ಹಂತದ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ ಎಂದು ಅಮೆರಿಕದ ಸ್ಥಳೀಯ ಮಾಧ್ಯಮಗಳು ಹೇಳಿವೆ.

ಅಮೆರಿಕಾದ ಸೆನೆಟ್ ಈ ವಿಚಾರವನ್ನು ಅನುಮೋದಿಸಬೇಕಿದೆ. ಒಂದು ವೇಳೆ ಸೆನೆಟ್ ಅನುಮೋದನೆ ಸಿಕ್ಕರೆ, 50 ವರ್ಷದ ಟಂಡನ್ ಶ್ವೇತಭವನದ ಪ್ರಭಾವಿ ಸ್ಥಾನವಾದ ಆಡಳಿತ ನಿರ್ವಹಣೆ ಮತ್ತು ಬಜೆಟ್ ನಿರ್ವಹಣಾ ಕಚೇರಿಯ ಮೊದಲ ಮಹಿಳಾ ಮುಖ್ಯಸ್ಥರಾಗುತ್ತಾರೆ.

ಸದ್ಯ ಟಂಡನ್ ಅವರು ಎಡಪಂಥೀಯ ಒಲವಿರುವ ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಿಯಾಗಿದ್ದಾರೆ. ಇದು ಸಾರ್ವಜನಿಕ ನೀತಿ ಸಂಶೋಧನಾ ಸಂಸ್ಥೆಯಾಗಿದ್ದು, ಆರ್ಥಿಕ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಉದಾರವಾದಿ ದೃಷ್ಟಿಕೋನ ಹೊಂದಿದೆ.

ವಾಲ್​ಸ್ಟ್ರೀಟ್ ಜನರಲ್​ನ ಪ್ರಕಾರ, ಅಮೆರಿಕಾದ ಖಜಾನೆ ಕಾರ್ಯದರ್ಶಿ ಜಾನೆಟ್ ಎಲೆನ್ ಜೊತೆಗೆ ಉದಾರವಾದಿ ಆರ್ಥಿಕ ಸಲಹೆಗಾರ ತಂಡವನ್ನು ಕಟ್ಟುವ ಯೋಜನೆಯ ಭಾಗವಾಗಿ ಬಿಡೆನ್ ನೀರಾ ಟಂಡನ್ ಅವರನ್ನು ನೇಮಕ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಜಾನೆಟ್ ಎಲ್.ಯೆಲ್ಲೆನ್ ಅವರನ್ನು ಖಜಾನೆ ಕಾರ್ಯದರ್ಶಿಯಾಗಿ ಘೋಷಿಸಲು ಬಿಡೆನ್ ಮುಂದಾಗಿದ್ದಾರೆ. ಆರ್ಥಿಕ ಸಲಹಾ ಮಂಡಳಿಗೆ ಕಪ್ಪು ಜನಾಂಗದ ಮಹಿಳೆಯನ್ನು ಇದೇ ಮೊದಲ ಬಾರಿಗೆ ನೇಮಿಸಲಾಗಿದೆ. ದೇಶದ ಆರ್ಥಿಕ ನೀತಿ ರೂಪಿಸುವ ಮತ್ತು ಹಣಕಾಸು ಸ್ಥಿತಿಗತಿಯ ಮೇಲೆ ಹಿಡಿತವಿರುವ ಮಹತ್ವದ ಸ್ಥಾನಗಳನ್ನು ಮಹಿಳೆಯರಿಗೆ ನೀಡಲು ಬಿಡೆನ್ ಮುಂದಾಗಿದ್ದಾರೆ ಎಂದು ನ್ಯೂಯಾರ್ಕ್​ ಟೈಮ್ಸ್​ ವರದಿ ಮಾಡಿದೆ.

‘ಅಧ್ಯಕ್ಷರ ಸಲಹಾ ಮಂಡಳಿಯಲ್ಲಿ ವಿಭಿನ್ನ ಚಿಂತನೆಗಳಿರುವ ವ್ಯಕ್ತಿಗಳಿರಬೇಕು ಎಂಬ ತಮ್ಮ ನಿಲುವಿಗೆ ಬಿಡೆನ್ ಬದ್ಧತೆ ತೋರಿಸುತ್ತಿದ್ದಾರೆ. ದೇಶದ ಆರ್ಥಿಕ ನೀತಿಗಳನ್ನು ಉದಾರವಾದಿ ಚಿಂತಕರಿಂದ ಮರರೂಪಿಸುವ ಪ್ರಯತ್ನಗಳಿಗೆ ಮುಂದಾಗಿದ್ದಾರೆ’ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

ಇನ್ನಷ್ಟು..
ಮಹಿಳೆಯರಿಗೆ ಸಂವಹನದ ಹೊಣೆ ಒಪ್ಪಿಸಿದ ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬಿಡೆನ್
ಜೋ ಬೈಡನ್‌ಗೆ ಕರೆ ಮಾಡಿದ ಪ್ರಧಾನಿ ಮೋದಿ ಏನು ಮಾತಾನಾಡಿದ್ರು ಗೊತ್ತಾ?

 

Published On - 3:17 pm, Mon, 30 November 20