ನವದೆಹಲಿ, ನವೆಂಬರ್ 22: ಜಾಗತಿಕವಾಗಿ ಇಂದು ಎದುರಾಗುತ್ತಿರುವ ವಿವಿಧ ಸಮಸ್ಯೆಗಳ ವಿರುದ್ಧ ಹೋರಾಡಲು ಜಾಗತಿಕ ಸಹಕಾರ ಬಹಳ ಮುಖ್ಯ. ಹಾಗೆಯೇ, ಸುಸ್ಥಿರವೆನಿಸುವ ಅಭಿವೃದ್ಧಿಯೂ ಬಹಳ ಮುಖ್ಯ ಎಂದು ಜರ್ಮನಿಯ ಆಹಾರ ಮತ್ತು ಕೃಷಿ ಸಚಿವ ಸೆಮ್ ಆಜೆಮಿರ್ (Cem Ozdemir) ಅಭಿಪ್ರಾಯಪಟ್ಟಿದ್ದಾರೆ. ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನಡೆಯುತ್ತಿರುವ ನ್ಯೂಸ್9 ಜಾಗತಿಕ ಶೃಂಗಸಭೆಯ ಎರಡನೇ ದಿನದಂದು ಮಾತನಾಡಿದ ಅವರು ವಿಶ್ವಾದ್ಯಂತ ನೈಸರ್ಗಿಕ ವಿಕೋಪಗಳಿಗೆ ಕಾರಣವಾದ ಹವಾಮಾನ ಬದಲಾವಣೆಯ ಸಮಸ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಹವಾಮಾನ ಬದಲಾವಣೆ ಮಾತ್ರವಲ್ಲ, ಈ ವಿಶ್ವವನ್ನು ಬಾಧಿಸುತ್ತಿರುವ ರಾಜಕೀಯ ಮತ್ತಿತರ ಬಿಕ್ಕಟ್ಟುಗಳನ್ನೂ ಅವರು ಪ್ರಸ್ತಾಪಿಸಿದರು.
‘ನಮ್ಮ ಪ್ರಪಂಚ ಬಿಕ್ಕಟ್ಟಿನಲ್ಲಿರುವಂತೆ ಭಾಸವಾಗುತ್ತಿದೆ. ದುರದೃಷ್ಟಕ್ಕೆ ಸಶಸ್ತ್ರ ಸಂಘರ್ಷಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗೆಯೇ, ಜಾಗತಿಕ ಉಷ್ಣಾಂಶವೂ ಹೆಚ್ಚುತ್ತಿದೆ. ಹವಾಮಾನ ಸಮಸ್ಯೆಯಿಂದ ಬಾಧಿತರಾಗದೇ ಉಳಿದ ಯಾವ ದೇಶವೂ ಈಗ ಇಲ್ಲ ಅನಿಸುತ್ತದೆ,’ ಎಂದು ಭೂ ಗ್ರಹದ ಜೀವಿಗಳಿಗೆ ತಂದಿರುವ ಗಂಭೀರ ಅಪಾಯದ ಬಗ್ಗೆ ಸೆಮ್ ಆಜ್ಡೆಮಿರ್ ಅವರು ಎಚ್ಚರಿಸುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: ಹವಾಮಾನ ಬದಲಾವಣೆ, ಎಐ ಈ ಜಗತ್ತನ್ನು ವೇಗವಾಗಿ ಆವರಿಸುತ್ತಿರುವ ವಿಷಯ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್
‘ಹಸಿರುಮನೆ ಅನಿಲಗಳು (ಕಾರ್ಬನ್ ಡೈ ಆಕ್ಸೈಡ್ ಇತ್ಯಾದಿ ಗ್ರೀನ್ಹೌಸ್ ಗ್ಯಾಸ್) 1990ರಲ್ಲಿ ಇದ್ದುದಕ್ಕಿಂತ ಶೇ. 50ರಷ್ಟು ಹೆಚ್ಚಾಗಿವೆ. ಹವಾಮಾನ ಸಂಬಂಧಿತ ಅವಘಡಗಳಿಂದ ಜಾಗತಿಕವಾಗಿ ಆಗುತ್ತಿರುವ ಸರಾಸರಿ ವಾರ್ಷಿಕ ಆರ್ಥಿಕ ನಷ್ಟ ನೂರಾರು ಬಿಲಿಯನ್ ಡಾಲರ್ಗಳಷ್ಟಾಗುತ್ತದೆ’ ಎಂದು ಸಮಸ್ಯೆಯ ಗಂಭೀರತೆ ಮೇಲೆ ಜರ್ಮನಿಯ ಸಚಿವರು ಬೆಳಕು ಚೆಲ್ಲಿದರು.
“Artificial intelligence can help us pursue our common sustainable development goals in the agriculture sector,” says@cem_oezdemir
, Federal Minister of Food & Agriculture, Germany at #News9GlobalSummitGermany #IndiaGermany #News9GlobalSummit #TV9Network pic.twitter.com/1Hpnwr34KO— TV9 Kannada (@tv9kannada) November 22, 2024
ಜಾಗತಿಕವಾಗಿ ಇರುವ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಜರ್ಮನಿ ಸಹಭಾಗಿತ್ವ ಮುಖ್ಯ ಎಂದು ಆ ದೇಶದ ಆಹಾರ ಮತ್ತು ಕೃಷಿ ಸಚಿವರಾದ ಅವರು ಅಭಿಪ್ರಾಯಪಟ್ಟರು. ‘ನಮ್ಮ ಆರ್ಥಿಕತೆಗಳು ಎಷ್ಟು ಪ್ರಬಲ ಎಂಬುದನ್ನು ಹೊರತುಪಡಿಸಿ, ನಮ್ಮ ಸಹಭಾಗಿತ್ವ ಗಟ್ಟಿಯಾಗಿರಬೇಕು. ಜರ್ಮನಿ ಮತ್ತು ಭಾರತದ ಮಧ್ಯೆ ಸಹಕಾರ ಹೆಚ್ಚಿಸುವುದು ಅಜೆಂಡಾ ಆಗಬೇಕು’ ಎಂದು ಹೇಳಿದ ಆಜ್ಡೆಮಿರ್, ಭಾರತ ಮತ್ತು ಯೂರೋಪಿಯನ್ ಯೂನಿಯನ್ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮತ್ತೆ ಸಂಧಾನಗಳು ಆರಂಭಗೊಂಡಿರುವುದನ್ನು ಸ್ವಾಗತಿಸಿದರು.
ಇದನ್ನೂ ಓದಿ: ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಟ; ಯಾರದ್ದು ಯಾವ ಹೊಣೆ? ಗ್ಲೋಬಲ್ ಸಮಿಟ್ನಲ್ಲಿ ತಜ್ಞರಿಂದ ಗಂಭೀರ ಚರ್ಚೆ
ಕೃಷಿ, ಮರುಬಳಕೆ ಇಂಧ, ಸಂಶೋಧನೆ, ಶಿಕ್ಷಣ ಮೊದಲಾದ ಪ್ರಮುಖ ಕ್ಷೇತ್ರಗಳಲ್ಲಿ ಭಾರತ ಮತ್ತು ಜರ್ಮನಿ ಸಹಭಾಗಿತ್ವ ಆಗಬೇಕು. ಆಹಾರ ಭದ್ರತೆ, ಹವಾಮಾನ ಬದಲಾವಣೆ, ಸಾಮಾಜಿಕ ಭದ್ರತೆಯಂತಹ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಕೃಷಿ ಕ್ಷೇತ್ರದ ಮೇಲೆ ಗಮನ ಹರಿಸುವುದು ಮುಖ್ಯ ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Fri, 22 November 24