ಭಾರತದಿಂದ ರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ (nirav modi) ಸಂಬಂಧಿಸಿದ ಕಂಪನಿಗಳ ರತ್ನಗಳು, ಆಭರಣಗಳು ಮತ್ತು ಬ್ಯಾಂಕ್ ಠೇವಣಿ ಸೇರಿದಂತೆ 253.62 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ- ed) ಶುಕ್ರವಾರ ತಿಳಿಸಿದೆ. ಈ ಎಲ್ಲಾ ಚರ ಆಸ್ತಿಗಳನ್ನು ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಹಾಂಗ್ ಕಾಂಗ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರೀಯ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಜಾರಿ ನಿರ್ದೇಶನಾಲಯ ಹೇಳಿಕೆಯ ಪ್ರಕಾರ, ಹಾಂಗ್ ಕಾಂಗ್‌ನಲ್ಲಿರುವ ನೀರವ್ ಮೋದಿ ಗ್ರೂಪ್‌ನ ಕೆಲವು ಆಸ್ತಿಗಳನ್ನು ಖಾಸಗಿ ‘ವಾಲ್ಟ್’ಗಳಲ್ಲಿ ಇರಿಸಲಾಗಿರುವ ರತ್ನಗಳು ಮತ್ತು ಆಭರಣಗಳು ಎಂದು ಗುರುತಿಸಲಾಗಿದೆ. ಇದರೊಂದಿಗೆ ಅಲ್ಲಿನ ಬ್ಯಾಂಕ್ ಖಾತೆಗಳಲ್ಲಿ ಇಟ್ಟಿರುವ ಮೊತ್ತವೂ ಪತ್ತೆಯಾಗಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಯ ನಿಬಂಧನೆಗಳ ಅಡಿಯಲ್ಲಿ ಅವುಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ನೀರವ್ (50) ಪ್ರಸ್ತುತ ಯುಕೆ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ 2 ಬಿಲಿಯನ್ ಡಾಲರ್ ಮೊತ್ತದ ಪ್ರಮುಖ ಆರೋಪಿ. ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣದ ತನಿಖೆ ನಡೆಸುತ್ತಿದೆ.