ಕೀಳುಮಟ್ಟದ ಪ್ರತೀಕಾರ; ಪಾಕಿಸ್ತಾನದಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಪೇಪರ್, ಗ್ಯಾಸ್, ನೀರಿಲ್ಲ!

ಆಪರೇಷನ್ ಸಿಂಧೂರದ ಬಳಿಕ ಭಾರತದ ಬಳಿ ತಾನೇ ಕದನವಿರಾಮವನ್ನು ಬೇಡಿ ಬಂದಿದ್ದ ಪಾಕಿಸ್ತಾನ ತನ್ನ ದೇಶದಲ್ಲಿ ಮಾತ್ರ ಕೀಳುಮಟ್ಟದ ಪ್ರತೀಕಾರಕ್ಕೆ ಇಳಿದಿದೆ. ಇಸ್ಲಮಾಬಾದ್​​ನಲ್ಲಿರುವ ಭಾರತೀಯ ಹೈಕಮಿಷನ್ ಸಿಬ್ಬಂದಿಗೆ ನ್ಯೂಸ್ ಪೇಪರ್, ಗ್ಯಾಸ್ ಮತ್ತು ನೀರು ಸರಬರಾಜನ್ನು ನಿರ್ಬಂಧಿಸುವ ಮೂಲಕ ಪಾಕಿಸ್ತಾನ ತುಚ್ಛವಾಗಿ ವರ್ತಿಸುತ್ತಿದೆ.

ಕೀಳುಮಟ್ಟದ ಪ್ರತೀಕಾರ; ಪಾಕಿಸ್ತಾನದಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಪೇಪರ್, ಗ್ಯಾಸ್, ನೀರಿಲ್ಲ!
Pakistan-India

Updated on: Aug 12, 2025 | 6:59 PM

ನವದೆಹಲಿ, ಆಗಸ್ಟ್ 11: ಭಾರತ ಮತ್ತು ಪಾಕಿಸ್ತಾನದ (Pakistan) ನಡುವಿನ ಸಂಬಂಧ ಹಳಸಿ ಎಷ್ಟೋ ವರ್ಷಗಳಾಗಿವೆ. ಆದರೆ, ಪಹಲ್ಗಾಮ್ ದಾಳಿಯ (Pahalgam Attack) ನಂತರ ಈ ಎರಡು ದೇಶಗಳ ನಡುವಿನ ಬಿರುಕು ಮತ್ತಷ್ಟು ಹೆಚ್ಚಾಯಿತು. ಭಾರತ ಆಪರೇಷನ್ ಸಿಂಧೂರ್ (Operation Sindoor) ನಡೆಸಿದ ಬಳಿಕ ಕದನವಿರಾಮ ಘೋಷಿಸಿದ್ದರೂ ಪಾಕಿಸ್ತಾನ ಮಾತ್ರ ಬೇರೆ ಬೇರೆ ರೀತಿಯಲ್ಲಿ ತನ್ನ ಸೇಡನ್ನು ತೀರಿಸಿಕೊಳ್ಳುತ್ತಲೇ ಇದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಹೆಚ್ಚಳದ ನಡುವೆ, ಇಸ್ಲಾಮಾಬಾದ್ ಭಾರತೀಯ ಹೈಕಮಿಷನ್ ಸಿಬ್ಬಂದಿಗೆ ಮೂಲಭೂತ ಸೌಕರ್ಯಗಳ ಮೇಲೂ ಪಾಕಿಸ್ತಾನ ನಿರ್ಬಂಧಗಳನ್ನು ವಿಧಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಈ ಬಗ್ಗೆ ನ್ಯೂಸ್​18 ವರದಿ ಮಾಡಿದ್ದು, ಭಾರತೀಯ ಹೈಕಮಿಷನ್ ಮತ್ತು ಭಾರತೀಯ ರಾಜತಾಂತ್ರಿಕರ ನಿವಾಸಗಳಿಗೆ ನ್ಯೂಸ್ ಪೇಪರ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರತೀಯ ರಾಜತಾಂತ್ರಿಕ ನಿವಾಸಗಳು ಮತ್ತು ಕಚೇರಿಗಳಿಗೆ ಅನಧಿಕೃತ ಪ್ರವೇಶಗಳನ್ನು ಮಾಡಲಾಗತ್ತಿದೆ. ಪಾಕಿಸ್ತಾನಿ ಅಧಿಕಾರಿಗಳ ಆಕ್ರಮಣಕಾರಿ ಕಣ್ಗಾವಲು ಜಾರಿಯಲ್ಲಿದ್ದು, ಅಲ್ಲಿರುವ ರಾಜತಾಂತ್ರಿಕರ ನೆಮ್ಮದಿಯನ್ನೇ ಕಿತ್ತುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಭಾರತ ಮರ್ಸಿಡಿಸ್, ಪಾಕಿಸ್ತಾನ ಡಂಪ್ ಟ್ರಕ್; ತಮ್ಮದೇ ಹೋಲಿಕೆಗೆ ಟ್ರೋಲ್ ಆದ ಅಸಿಮ್ ಮುನೀರ್

ಪಾಕಿಸ್ತಾನದ 9 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಿರ್ನಾಮ ಮಾಡಿದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಕಿರುಕುಳವನ್ನು ತೀವ್ರಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಭಾರತೀಯ ರಾಜತಾಂತ್ರಿಕರು ಗ್ಯಾಸ್ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಪಾಕಿಸ್ತಾನದ ಅಧಿಕಾರಿಗಳು ಸ್ಥಳೀಯ ಮಾರಾಟಗಾರರಿಗೆ ಭಾರತೀಯ ಅಧಿಕಾರಿಗಳೊಂದಿಗೆ ಸಹಕರಿಸಬಾರದು, ಅವರಿಗೆ ವಸ್ತುಗಳನ್ನು ಪೂರೈಸಬಾರದು ಎಂದು ನಿರ್ದೇಶಿಸಿದ್ದಾರೆ. ಪಾಕಿಸ್ತಾನದ ಅಧಿಕಾರಿಗಳು ಸ್ಥಳೀಯ ಅನಿಲ ಸಿಲಿಂಡರ್ ಮಾರಾಟಗಾರರಿಗೆ ಭಾರತೀಯ ಸಿಬ್ಬಂದಿಗೆ ಸರಬರಾಜು ಮಾಡದಂತೆ ತಿಳಿಸಿದ್ದಾರೆ.

ಈ ಹಿಂದೆ 2019ರಲ್ಲಿ ಪುಲ್ವಾಮಾ ದಾಳಿಯ ನಂತರ ಭಾರತ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನಡೆಸಿದ ಸಂದರ್ಭದಲ್ಲೂ ಹೈಕಮಿಷನ್ ಸಿಬ್ಬಂದಿಗೆ ಈ ರೀತಿಯಲ್ಲೇ ಕಿರುಕುಳ ನೀಡಲಾಗಿತ್ತು. ಆ ಸಮಯದಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಇದೇ ರೀತಿಯಾಗಿ ಕಿರುಕುಳ ನೀಡಲಾಗಿತ್ತು. ನಾಯಿ ಬಾಲ ಡೊಂಕು ಎನ್ನುವಂತೆ ಪಾಕಿಸ್ತಾನ ಮತ್ತೆ ತನ್ನ ಕೀಳು ಬುದ್ಧಿಯನ್ನು ತೋರಿಸುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:40 pm, Mon, 11 August 25