ಉತ್ತರ ಕೊರಿಯಾದಲ್ಲಿ ಬಾಳೆಹಣ್ಣಿಗೆ 3,336 ರೂ. ಕಾಫಿಗೆ 7,381 ರೂ! ಗೊಬ್ಬರಕ್ಕಾಗಿ ನಿತ್ಯ 2 ಲೀಟರ್ ಮೂತ್ರ ದೇಣಿಗೆ ನೀಡಲು ಸೂಚನೆ

| Updated By: Skanda

Updated on: Jun 21, 2021 | 1:07 PM

North Korea: ದೇಶದಲ್ಲಿ ರಸಗೊಬ್ಬರ ಉತ್ಪಾದನೆಯ ಕೊರತೆಯೂ ಉಂಟಾಗಿರುವ ಕಾರಣ ಕಿಮ್​ ಜಾಂಗ್​ ಉನ್ ಹೊಸ ಆದೇಶ ಹೊರಡಿಸಿದ್ದು, ಉತ್ತಮ ಗೊಬ್ಬರ ಉತ್ಪಾದನೆಗೆ ಅನುವಾಗಲು ಅಲ್ಲಿನ ಪ್ರತಿ ರೈತರೂ ದಿನಕ್ಕೆ ಎರಡು ಲೀಟರ್ ಮೂತ್ರ ದೇಣಿಗೆ ಕೊಡಬೇಕೆಂದು ಹೇಳಿದ್ದಾರಂತೆ.

ಉತ್ತರ ಕೊರಿಯಾದಲ್ಲಿ ಬಾಳೆಹಣ್ಣಿಗೆ 3,336 ರೂ. ಕಾಫಿಗೆ 7,381 ರೂ! ಗೊಬ್ಬರಕ್ಕಾಗಿ ನಿತ್ಯ 2 ಲೀಟರ್ ಮೂತ್ರ ದೇಣಿಗೆ ನೀಡಲು ಸೂಚನೆ
ಕಿಮ್​ ಜಾಂಗ್​ ಉನ್​
Follow us on

ಉತ್ತರ ಕೊರಿಯಾ ದೇಶದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್ ಯಾವಾಗಲೂ ವಿಚಿತ್ರ ಕಾರಣಗಳಿಗೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಕೆಲದಿನಗಳ ಅಜ್ಞಾತ ವಾಸದ ನಂತರ ಪ್ರತ್ಯಕ್ಷರಾದ ಅವರು ದಕ್ಷಿಣ ಕೊರಿಯಾದ ಖ್ಯಾತ ಕೊರಿಯನ್​ ಪಾಪ್​ ಸಂಗೀತವನ್ನು ತಮ್ಮ ದೇಶದಲ್ಲಿ ನಿರ್ಬಂಧಿಸುತ್ತಿರುವುದಾಗಿ ಹೇಳಿಕೆ ನೀಡಿ ಸದ್ದು ಮಾಡಿದ್ದರು. ಇದೀಗ ಉತ್ತರ ಕೊರಿಯಾ ದೇಶವೇ ಮತ್ತೊಂದು ಬೆಳವಣಿಗೆಯಲ್ಲಿ ಸಂಚಲನ ಮೂಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ಉತ್ತರ ಕೊರಿಯಾ ತೀವ್ರ ಪ್ರಮಾಣದ ಆಹಾರ ಕೊರತೆ ಎದುರಿಸುತ್ತಿದೆ. ಅದು ಯಾವ ಮಟ್ಟಿಗೆ ತಾರಕಕ್ಕೇರಿದೆ ಎಂದರೆ ಅಲ್ಲಿ ಒಂದು ಕೆಜಿ ಬಾಳೆಹಣ್ಣಿನ ಬೆಲೆಯನ್ನು ಭಾರತೀಯ ರೂಪಾಯಿಯಲ್ಲಿ ಅಳೆದರೆ ಅದರ ಬೆಲೆ 3,336 ರೂಪಾಯಿ ಆಗುತ್ತದೆ.

ಆಹಾರದ ಅಭಾವ ಸೃಷ್ಟಿಯಾದ ಕಾರಣ ಉತ್ತರ ಕೊರಿಯಾದಲ್ಲಿ ದಿನನಿತ್ಯ ಬಳಸುವ ಪದಾರ್ಥಗಳ ಬೆಲೆಯೂ ಗಗನಕ್ಕೇರಿದ್ದು, ಈ ಬಗ್ಗೆ ಎನ್​ಕೆ ನ್ಯೂಸ್ ಎಂಬ ಮಾಧ್ಯಮ ಸುದ್ದಿ ಮಾಡಿದೆ. ಆ ವರದಿಯ ಪ್ರಕಾರ ಅಲ್ಲಿ ಒಂದು ಕೆಜಿ ಬಾಳೆಹಣ್ಣಿನ ಬೆಲೆ 3,336 ರೂಪಾಯಿ, ಒಂದು ಪೊಟ್ಟಣ ಬ್ಲ್ಯಾಕ್ ಟೀ ಪುಡಿ ಬೆಲೆ 5,167 ರೂಪಾಯಿ, ಕಾಫಿ ಬೆಲೆ 7,381ರೂಪಾಯಿಯ ಆಸುಪಾಸಿಗೆ ಹೋಗಿ ತಲುಪಿದೆ. ಅಂತೆಯೇ ಒಂದು ಕೆಜಿ ಜೋಳ ಸುಮಾರು 204.81ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ.

ಸದ್ಯ ನೆರೆಹೊರೆಯ ಎಲ್ಲಾ ರಾಷ್ಟ್ರಗಳನ್ನು ಎದುರು ಹಾಕಿಕೊಂಡಿರುವ ಉತ್ತರ ಕೊರಿಯಾ ಜಾಗತಿಕ ಮಟ್ಟದಲ್ಲೂ ಚೀನಾ ದೇಶವನ್ನು ಹೊರತುಪಡಿಸಿದರೆ ಮಿಕ್ಕ ಯಾರೊಂದಿಗೂ ಉತ್ತಮ ಸಂಬಂಧ ಉಳಿಸಿಕೊಂಡಿಲ್ಲ. ಅಲ್ಲದೇ ಕೊರೊನಾ ನಂತರ ತನ್ನ ಗಡಿಯನ್ನೂ ಮುಚ್ಚಿಕೊಂಡಿರುವ ಉತ್ತರ ಕೊರಿಯಾ, ಪ್ರವಾಹದಿಂದಲೂ ಸಾಕಷ್ಟು ಹೊಡೆತ ಅನುಭವಿಸಿದೆ. ಇವೆಲ್ಲವೂ ದೇಶದ ಆಹಾರ ವ್ಯವಸ್ಥೆಯ ಮೇಲೆ ಸಾಕಷ್ಟು ಗಂಭೀರ ಪರಿಣಾಮ ಬೀರಿದ್ದು, ಚಿಕ್ಕಪುಟ್ಟ ಅಗತ್ಯ ವಸ್ತುಗಳೂ ಜೇಬಿಗೆ ಹೊರೆಯಾಗುವಷ್ಟು ದುಬಾರಿಯಾಗಿವೆ.

ಈ ಹಿಂದೆ 1990ರ ಸಂದರ್ಭದಲ್ಲೂ ಉತ್ತರ ಕೊರಿಯಾದಲ್ಲಿ ಇದೇ ರೀತಿ ಆಹಾರದ ಅಭಾವ ಸೃಷ್ಟಿಯಾಗಿ ನೂರಾರು ಜನ ಸಾವಿಗೀಡಾಗಿದ್ದರಂತೆ. ಈಗ ಅಂಥದ್ದೇ ಪರಿಸ್ಥಿತಿ ಮರುಕಳಿಸುವ ಹಂತ ತಲುಪಿದ್ದು, ಅವ್ಯವಸ್ಥೆಯ ಬಗ್ಗೆ ಸರ್ವಾಧಿಕಾರಿ ಕಿಮ್​ ಜಾಂಗ್ ಉನ್​ ಸಹ ತಲೆಕೆಡಿಸಿಕೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಅಲ್ಲದೇ, ದೇಶದಲ್ಲಿ ರಸಗೊಬ್ಬರ ಉತ್ಪಾದನೆಯ ಕೊರತೆಯೂ ಉಂಟಾಗಿರುವ ಕಾರಣ ಕಿಮ್​ ಜಾಂಗ್​ ಉನ್ ಹೊಸ ಆದೇಶ ಹೊರಡಿಸಿದ್ದು, ಉತ್ತಮ ಗೊಬ್ಬರ ಉತ್ಪಾದನೆಗೆ ಅನುವಾಗಲು ಅಲ್ಲಿನ ಪ್ರತಿ ರೈತರೂ ದಿನಕ್ಕೆ ಎರಡು ಲೀಟರ್ ಮೂತ್ರ ದೇಣಿಗೆ ಕೊಡಬೇಕೆಂದು ಹೇಳಿದ್ದಾರಂತೆ. ಹೀಗಾಗಿ ಸದ್ಯ ಉತ್ತರ ಕೊರಿಯಾ ಈ ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ.

ಇದನ್ನೂ ಓದಿ:
ಇನ್ಮುಂದೆ ಉತ್ತರ ಕೊರಿಯಾದಲ್ಲಿ ಬೆಕ್ಕು ಕೂಗೋದಿಲ್ಲ, ಪಾರಿವಾಳ ಹಾರೋದಿಲ್ಲ; ಕೊರೊನಾ ನಿಯಂತ್ರಣಕ್ಕೆ ಕಿಮ್​ ಜಾಂಗ್​ ಉನ್ ಹೊಸ ಆದೇಶ 

ಪಾಪ್​-ಸಂಗೀತದ ಮೇಲೆ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಕಣ್ಣು; ಉತ್ತರ ಕೊರಿಯಾದಲ್ಲಿ ಕೆ-ಪಾಪ್​ ನಿಷೇಧಿಸಲು ನಿರ್ಧಾರ