#NRIappealDay: ನಮ್ಮ ಬೇಡಿಕೆಯನ್ನು ಈಡೇರಿಸಿ; ರಾಜ್ಯ ಸರ್ಕಾರಕ್ಕೆ ಅನಿವಾಸಿ ಕನ್ನಡಿಗರ ಒಕ್ಕೊರಲಿನ ಕೂಗು

|

Updated on: Jan 02, 2021 | 7:31 PM

ಇದೇ ಮೊದಲ ಬಾರಿಗೆ ವಿಶ್ವದಾದ್ಯಂತವಿರುವ 30ಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ದಿನ ಒಂದೇ ಧ್ವನಿಯೊಂದಿಗೆ ಟ್ವಿಟರ್ ಮತ್ತು ಇ-ಮೇಲ್ ಮೂಲಕ ಕರ್ನಾಟಕ ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನು ಈಡೇರಿಸಲು ಅಭಿಯಾನ ಆರಂಭಿಸಿದ್ದಾರೆ.

#NRIappealDay: ನಮ್ಮ ಬೇಡಿಕೆಯನ್ನು ಈಡೇರಿಸಿ; ರಾಜ್ಯ ಸರ್ಕಾರಕ್ಕೆ ಅನಿವಾಸಿ ಕನ್ನಡಿಗರ ಒಕ್ಕೊರಲಿನ ಕೂಗು
‘ಸರ್ಕಾರ ಅನಿವಾಸಿ ಕನ್ನಡಿಗರ ಈ ಕೂಗನ್ನು ಆಲಿಸಬೇಕು’
Follow us on

ಬೆಂಗಳೂರು: 30ಕ್ಕೂ ಹೆಚ್ಚಿನ ದೇಶಗಳ ಅನಿವಾಸಿ ಕನ್ನಡಿಗರಿಂದ ಜನವರಿ 2ರಂದು NRI ಅಪೀಲ್ ಡೇ ಅಭಿಯಾನ ದಿನ ಎಂದು ಆಚರಿಸಲಾಯಿತು. ಇದೇ ಮೊದಲ ಬಾರಿಗೆ ವಿಶ್ವದಾದ್ಯಂತವಿರುವ 30ಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ದಿನ ಒಂದೇ ಧ್ವನಿಯೊಂದಿಗೆ ಟ್ವಿಟರ್ ಮತ್ತು ಇ-ಮೇಲ್ ಮೂಲಕ ಕರ್ನಾಟಕ ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನು ಈಡೇರಿಸಲು ಅಭಿಯಾನ ಆರಂಭಿಸಿದ್ದಾರೆ.

NRIಅಪೀಲ್ ಡೇ (#NRIappealDay) ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಅಂತಾರಾಷ್ಟ್ರೀಯ ಅನಿವಾಸಿ ಕನ್ನಡಿಗರ ಮನವಿ ದಿನವಾಗಿ ಆಚರಿಸಲು ಮುಂದಾಗಿದ್ದಾರೆ. ಅನಿವಾಸಿ ಕನ್ನಡಿಗರಿಗಾಗಿಯೇ ಕರ್ನಾಟಕ ಸರ್ಕಾರ ಅನಿವಾಸಿ ಭಾರತೀಯ ಸಮಿತಿ ಸ್ಥಾಪಿಸಿದೆ (KNRI ಫೋರಂ). ಇದಕ್ಕೆ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳಿಗೆ ಅಭಿಯಾನದ ಮೂಲಕ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಅನಿವಾಸಿ ಕನ್ನಡಿಗರು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಇತರ ಮಹತ್ತರ ಜವಾಬ್ದಾರಿಗಳಿರುವ ಕಾರಣ KNRI ಸಮಿತಿಯಲ್ಲಿ ಉಪಾಧ್ಯಕ್ಷರಿಗೇ ಹೆಚ್ಚಿನ ಜವಾಬ್ದಾರಿ ನೀಡಬೇಕಿದೆ. ಆದರೆ, ಕಳೆದ 3ವರ್ಷಗಳ ಹಿಂದೆ ತೆರವುಗೊಂಡ ಉಪಾಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಯಾರನ್ನೂ ನೇಮಕ ಮಾಡಿಲ್ಲ. ಹಲವಾರು ಕನ್ನಡ ಪರ ಸಂಘಟನೆಗಳು ಈ ಕುರಿತು ಸರ್ಕಾರದ ಗಮನ ಸೆಳೆದಿದ್ದರೂ ಯಾರೂ ಸ್ಪಂದಿಸುವ ಗೋಜಿಗೆ ಹೋಗಿರಲಿಲ್ಲ. ಇದೀಗ, ತಮ್ಮ ಬೇಡಿಕೆಯನ್ನು ಈಡೇರಿಸಲು ಅಭಿಯಾನದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

‘ಸರ್ಕಾರ ಅನಿವಾಸಿ ಕನ್ನಡಿಗರ ಈ ಕೂಗನ್ನು ಆಲಿಸಬೇಕು’
ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಕರೆಕೊಟ್ಟಿರುವ ಈ ಅಭಿಯಾನಕ್ಕೆ ಈಗಾಗಲೇ ಅಮೆರಿಕ, UAE, ಬ್ರಿಟನ್, ಆಸ್ಟ್ರೇಲಿಯಾ, ಕತಾರ್, ಕುವೈಟ್, ಇಟಲಿ, ಜರ್ಮನಿ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ, ಇಥಿಯೋಪಿಯ, ಡೆನ್ಮಾರ್ಕ್, ನೈಜೀರಿಯಾ, ಹಾಲೆಂಡ್, ಓಮನ್, ಬಹರೈನ್, ಇಂಡೋನೇಷಿಯಾ, ಸೌದಿ ಅರೇಬಿಯಾ, ಇಸ್ರೇಲ್, ಈಜಿಪ್ಟ್, ಸ್ವಿಜರ್ಲ್ಯಾಂಡ್, ಘಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಸಿಂಗಪೂರ್, ಸ್ಕಾಟ್ಲ್ಯಾಂಡ್, ನಾರ್ವೆ, ನೆದರ್ಲ್ಯಾಂಡ್, ಸೌತ್ ಕೊರಿಯಾ ಸೇರಿದಂತೆ ಇನ್ನಿತರ ದೇಶಗಳ ನೂರಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ತಮ್ಮ ಬೆಂಬಲ ಘೋಷಿಸಿದೆ.

ಸರ್ಕಾರ ಅನಿವಾಸಿ ಕನ್ನಡಿಗರ ಈ ಕೂಗನ್ನು ಆಲಿಸಬೇಕು. ರಾಜ್ಯ ಸರ್ಕಾರ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ತಕ್ಷಣವೇ ನೇಮಿಸಿ, ಸರ್ಕಾರ ಮತ್ತು ಅನಿವಾಸಿ ಕನ್ನಡಿಗರ ನಡುವಿನ ಸಂಬಂಧ, ಸಂವಹನವನ್ನು ಹೆಚ್ಚು ಮಾಡಬೇಕು ಎಂದು ವಿನಂತಿಸಿದ್ದಾರೆ. ಸದ್ಯ, ಅಭಿಯಾನದಲ್ಲಿ ಸಾಗರೋತ್ತರ ಕನ್ನಡಿಗರ ವೇದಿಕೆ ಅಧ್ಯಕ್ಷ ಚಂದ್ರಶೇಖರ್‌ ಲಿಂಗದಳ್ಳಿ, ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, ಇಟಲಿ ಕನ್ನಡ ಸಂಘ ಅಧ್ಯಕ್ಷ ಹೇಮೇಗೌಡ ಮಧು, ಕತಾರ್​ನ ತುಳು ಕೂಟದ ಪೋಷಕರು ಮತ್ತು ಮಾಜಿ ಅಧ್ಯಕ್ಷರು ರವಿ ಶೆಟ್ಟಿ ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

Photo Gallery | ಬದುಕಿನ ಬಣ್ಣವೇ ’ಬಾದಲ್‘​ ಆದರೆ..