ಅಫ್ಘಾನಿಸ್ತಾನದ (Afghanistan) ಬಗ್ಗೆ ವಿಶ್ವದ ಇತರ ರಾಷ್ಟ್ರಗಳು ಬಹುತೇಕ ಮರೆತೇ ಹೋದವೇನೋ ಎಂಬಂತಾಗಿದೆ. ಆದರೆ ವಿಶ್ವಸಂಸ್ಥೆಯ ವರದಿಯೊಂದು ಮತ್ತೆ ಕಿವಿ, ಕಣ್ಣುಗಳು ತೆರೆದಿಡುವಂತೆ ಮಾಡುತ್ತಿದೆ. ಅಸಲಿಗೆ ಈಗ ಮತ್ತೆ ಅಫ್ಘಾನಿಸ್ತಾನ ಪ್ರಸ್ತಾವ ಏಕೆ ಅಂದರೆ, ಒಂದು ಕಡೆ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದ್ದರೆ ದೂರದ ಅಫ್ಘಾನಿಸ್ತಾನದಲ್ಲಿ ಜನ ದಿಕ್ಕಾಪಾಲಾಗಿ ಚದುರಿ ಹೋಗುತ್ತಿದ್ದರು. ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದ ತಾಲಿಬಾನಿಗಳು ಆ ದೇಶದ ಸಿಂಹಾಸನದ ಮೇಲೆ ಕೂತು ರಾಜ್ಯಭಾರ ಆರಂಭಿಸಿದರು. ಆದರೆ ಅದು ಖಜಾನೆ ಬರಿದಾದ ದೇಶದಿಂದ ಹಾಗೂ ಆ ದೇಶದ ಅಲ್ಪಸ್ವಲ್ಪ ಆಸ್ತಿಯನ್ನೂ ತನ್ನ ಬಳಿ ಇರಿಸಿಕೊಂಡಿದ್ದ ಅಮೆರಿಕದಿಂದ ಏನನ್ನೂ ಪಡೆದುಕೊಳ್ಳಲು ಈ ತಾಲಿಬಾನಿಗಳಿಗೆ ಆಗಲಿಲ್ಲ. ಇವೆಲ್ಲ ಅಂಗೈ ಗೆರೆಯಷ್ಟು ಸುಸ್ಪಷ್ಟವಾಗಿ ಇಡೀ ಜಗತ್ತಿಗೆ ಗೊತ್ತಿರುವ ಸತ್ಯ. ಆದರೆ ವಿಶ್ವಸಂಸ್ಥೆ ಈಗ ಹೇಳುತ್ತಿರುವ ವರದಿಯಂತೆ, ಅಮೆರಿಕದಿಂದ ಹತನಾದ ಉಗ್ರ ಒಸಾಮ ಬಿನ್ ಲಾಡೆನ್ನ ಮಗ ಅಬ್ದುಲ್ಲಾ ಕಳೆದ ಅಕ್ಟೋಬರ್ನಲ್ಲಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದನಂತೆ. ಅದು ಕೂಡ “ತಾಲಿಬಾನ್ ಜತೆ ಚರ್ಚಿಸುವ” ಸಲುವಾಗಿ.
ವಿಶ್ವ ಸಂಸ್ಥೆಯ ಭದ್ರತಾ ಸಮಿತಿ ಇಸ್ಲಾಮಿಕ್ ಸ್ಟೇಟ್ ಮತ್ತು ಅಲೈಕೈದಾ ಹಾಗೂ ಅದರ ಸಹವರ್ತಿಗಳ ಚಟುವಟಿಕೆಗಳ ಬಗ್ಗೆ ವರದಿ ನೀಡುತ್ತಾ ಈ ಅಂಶ ಬಹಿರಂಗ ಪಡಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಇದರ ಪ್ರಕಾರವಾಗಿ, ವಿದೇಶಗಳಲ್ಲಿ ಯಾವುದೇ “ಹೈ ಪ್ರೊಫೈಲ್” ದಾಳಿ ನಡೆಸುವ ಸಾಮರ್ಥ್ಯ ಈಗ ಅಲ್ಕೈದಾಗೆ ಇಲ್ಲ. ಈ ವರದಿಯಲ್ಲಿ ಈ ವಾರ ಬಹಿರಂಗ ಮಾಡಲಾಗಿದೆ. ಸತತವಾಗಿ ತನ್ನ ನಾಯಕರನ್ನು ಕಳೆದುಕೊಳ್ಳುತ್ತಾ ಬಂದ ಅಲ್ಕೈದಾಗೆ ಯಾವುದೇ ಹೈಪ್ರೊಫೈಲ್ ದಾಳಿ ನಡೆಸುವ ಸಾಮರ್ಥ್ಯ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರತಿ ವರ್ಷ ವಿಶ್ವ ಸಂಸ್ಥೆಯ ನಿರ್ಬಂಧ ನಿಗಾ ಸಮಿತಿಯ ತಂಡವು ಎರಡು ಬಾರಿ ಇಂಥ ವರದಿಯನ್ನು ಸಿದ್ಧಪಡಿಸುತ್ತವೆ. ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ಕೈದಾ ವಿರುದ್ಧ ಹೇರಲಾದ ನಿರ್ಬಂಧಗಳ ಅನುಷ್ಠಾನ ಪ್ರಯತ್ನದ ಭಾಗವಾಗಿ ಹೀಗೆ ಮಾಡಲಾಗುತ್ತದೆ. ಭಾರತ ಉಪಖಂಡದಲ್ಲಿ ಸದ್ಯಕ್ಕೆ ಅಲ್ಕೈದಾವನ್ನು ಮುನ್ನಡೆಸುತ್ತಿರುವುದು ಒಸಾಮ ಮೆಹಮೂದ್ ಮತ್ತು ಆತನ ನಂತರದಲ್ಲಿ ಯಾಹ್ಯಾ ಘೌರಿ. ಈ ಗುಂಪು ಈಗಲೂ ಅಫ್ಘಾನಿಸ್ತಾನದಲ್ಲಿ ಇದೆ. ಘಾಂಜಿ, ಹೆಲ್ಮಂದ್, ಕಂದಹಾರ್, ನಿಮ್ರುಜ್, ಪಕ್ತಿಕ ಮತ್ತು ಝಬುಲ್ ಪ್ರಾಂತ್ಯಗಳಲ್ಲಿ ಅಲ್ಕೈದಾ ಕಾರ್ಯ ನಿರ್ವಹಿಸುತ್ತಿದೆ. ತಾಲಿಬಾನ್ ಬೆನ್ನಿಗೆ ನಿಂತು ಪದಚ್ಯುತ ಅಶ್ರಫ್ ಘನಿ ಸರ್ಕಾರದ ವಿರುದ್ಧ ಅಲ್ಕೈದಾ ಬಡಿದಾಡಿತ್ತು.
ಭಾರತ ಉಪಖಂಡದಲ್ಲಿ 200ರಿಂದ 400 ಅಲ್ಕೈದಾ ಉಗ್ರರು ಇರುವುದಾಗಿ ವಿಶ್ವಸಂಸ್ಥೆ ವರದಿಯಲ್ಲಿ ಅಂದಾಜು ಮಾಡಿದೆ. ಮುಖ್ಯವಾಗಿ ಅಫ್ಘಾನಿಸ್ತಾನ, ಬಾಂಗ್ಲಾದೇಶ್, ಭಾರತ, ಮ್ಯಾನ್ಮಾರ್ ಮತ್ತು ಪಾಕಿಸ್ತಾನದಲ್ಲಿ ಈ ಉಗ್ರರು ಜಮೆ ಆಗಿದ್ದಾರೆ ಎಂದು ಹೇಳಲಾಗಿದೆ. ಈ ವರದಿಯಲ್ಲಿ ಇನ್ನೂ ಒಂದು ಅಂಶ ಸೇರಿಸಲಾಗಿದೆ. ವಿದೇಶೀ ಭಯೋತ್ಪಾದಕರ ಚಟುವಟಿಕೆಗಳನ್ನು ಮಿತಿಗೊಳಿಸಲು ತಾಲಿಬಾನ್ ಏನನ್ನೂ ಮಾಡಿಲ್ಲ ಎಂದು ಸಹ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ’ಇಸ್ಲಾಂ ಶತ್ರುಗಳ ಹಿಡಿತದಲ್ಲಿರುವ ಕಾಶ್ಮೀರವನ್ನೂ ಸ್ವತಂತ್ರಗೊಳಿಸಿ’-ತಾಲಿಬಾನಿಗಳಿಗೆ ಸಲಹೆ ನೀಡಿದ ಅಲ್ ಖೈದಾ