’ಇಸ್ಲಾಂ ಶತ್ರುಗಳ ಹಿಡಿತದಲ್ಲಿರುವ ಕಾಶ್ಮೀರವನ್ನೂ ಸ್ವತಂತ್ರಗೊಳಿಸಿ’-ತಾಲಿಬಾನಿಗಳಿಗೆ ಸಲಹೆ ನೀಡಿದ ಅಲ್ ಖೈದಾ
ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುತ್ತಿದ್ದಂತೆ ಅಲ್ ಖೈದಾ ಹೇಳಿಕೆ ಬಿಡುಗಡೆ ಮಾಡಿದೆ. ತಾಲಿಬಾನ್ ಉಗ್ರರಿಗೆ ಅಭಿನಂದನೆ ಸಲ್ಲಿಸಿದೆ.
ಯುನೈಟೆಡ್ ಸ್ಟೇಟಸ್(US) ಮೇಲೆ 2001ರ ಸೆಪ್ಟೆಂಬರ್ 11ರಂದು ದಾಳಿ ನಡೆಸಿದ್ದ ಉಗ್ರ ಸಂಘಟನೆ ಅಲ್ ಖೈದಾ (Al-Qaeda) ಇದೀಗ ತಾಲಿಬಾನ್ (Taliban)ಗೆ ಅಭಿನಂದನೆ ಸಲ್ಲಿಸಿದೆ. ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ತಾಲಿಬಾನಿಗಳಿಗೆ ಶುಭ ಕೋರಿದ ಅಲ್ ಖೈದಾ, ಕಾಶ್ಮೀರಕ್ಕೂ ಹೀಗೆ ಸ್ವಾತಂತ್ರ್ಯ ಸಿಗಬೇಕು ಎಂದು ಹೇಳಿದೆ. ಆಗಸ್ಟ್ 15ರಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ (Kabul)ನ್ನು ತಾಲಿಬಾನ್ ವಶಪಡಿಸಿಕೊಂಡಿತ್ತು. ಆದರೂ ಕಾಬೂಲ್ ಏರ್ಪೋರ್ಟ್ (Kabul Airport) ಇನ್ನೂ ಅಮೆರಿಕ ಸೇನೆಯ ವಶದಲ್ಲೇ ಇತ್ತು. ಆಗಸ್ಟ್ 30ರಂದು ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನ್ನ್ನು ತೊರೆದು ಹೋಗಿದೆ. ಆ ಕ್ಷಣದಿಂದ ಕಾಬೂಲ್ ಏರ್ಪೋರ್ಟ್ ಸೇರಿ ಸಂಪೂರ್ಣ ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗಿದೆ.
ಹೀಗೆ ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುತ್ತಿದ್ದಂತೆ ಅಲ್ ಖೈದಾ ಹೇಳಿಕೆ ಬಿಡುಗಡೆ ಮಾಡಿದೆ. ಲೆವೆಂಟ್, ಸೋಮಾಲಿಯಾ, ಯೆಮೆನ್, ಕಾಶ್ಮೀರ ಮತ್ತು ಉಳಿದ ಇಸ್ಲಾಮಿಕ್ ಪ್ರದೇಶಗಳನ್ನೂ ಹೀಗೆ, ಮುಸ್ಲಿಮರ ಶತ್ರುಗಳ ಹಿಡಿತದಿಂದ ಸ್ವತಂತ್ರಗೊಳಿಸಿ ಎಂದು ತಾಲಿಬಾನ್ಗೆ ಹೇಳಿದೆ. ಹಾಗೇ, ಓ ಅಲ್ಲಾ, ಜಗತ್ತಿನಾದ್ಯಂತ ಬಂಧನಕ್ಕೆ ಒಳಗಾಗಿರುವ ಎಲ್ಲ ಮುಸ್ಲಿಂ ಕೈದಿಗಳಿಗೂ ಬಿಡುಗಡೆ ಭಾಗ್ಯ ಕಲ್ಪಿಸು ಎಂದು ಬೇಡಿಕೊಂಡಿದ್ದಾರೆ.
ಕಾಶ್ಮೀರ ನಮಗೆ ಸಂಬಂಧವಿಲ್ಲ ಎಂದಿರುವ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬರುತ್ತಿದ್ದಂತೆ ಪಾಕಿಸ್ತಾನ ಕೂಡ ಕಾಶ್ಮೀರದ ವಿಚಾರದಲ್ಲಿ ತುಂಬ ಉತ್ಸಾಹ ತೋರಿಸುತ್ತಿದೆ. ತಾಲಿಬಾನಿಗಳು ಖಂಡಿತ ನಮಗಾಗಿ ಕಾಶ್ಮೀರವನ್ನು ಗೆದ್ದುಕೊಡುತ್ತಾರೆ ಎಂದು ಅಲ್ಲಿನ ನಾಯಕರು ತುಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ತಾಲಿಬಾನ್, ಕಾಶ್ಮೀರಕ್ಕೂ ನಮಗೂ ಸಂಬಂಧವಿಲ್ಲ. ಅದು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಚಾರ ಎಂದು ಹೇಳಿದೆ. ಅಷ್ಟೇ ಅಲ್ಲ, ಪ್ರಾರಂಭದಿಂದಲೂ ಭಾರತದ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತ ಬಂದಿದೆ. ನಮ್ಮ ನೆರೆರಾಷ್ಟ್ರಗಳಲ್ಲೇ ಭಾರತ ಪ್ರಮುಖ ರಾಷ್ಟ್ರ. ಅದರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಗೆ ಬಯಸುತ್ತೇವೆ ಎಂದೂ ತಾಲಿಬಾನಿಗಳು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಎತ್ತಿನ ಗಾಡಿ ಸ್ಪರ್ಧೆಗೆ ಹೈಕೋರ್ಟ್ ಒಪ್ಪಿಗೆ, ಷರತ್ತುಬದ್ಧವಾಗಿ ಸ್ಪರ್ಧೆ ನಡೆಸಲು ಅನುಮತಿ
ಮಂಡ್ಯದಿಂದ ಸ್ಪರ್ಧೆಯೋ? ಮದ್ದೂರಿನಿಂದಲೋ?; ಚುನಾವಣೆ ಬಗ್ಗೆ ಪರೋಕ್ಷ ಸುಳಿವು ನೀಡಿದ ಅಭಿಷೇಕ್ ಅಂಬರೀಷ್
Published On - 1:19 pm, Wed, 1 September 21