ಅಫ್ಘಾನಿಸ್ತಾನದ ಕುರಿತು ಭದ್ರತಾ ಸಂವಾದ: ಸಾಮೂಹಿಕ ಭದ್ರತೆ ಹೆಚ್ಚಿಸಲು ಹೆಚ್ಚಿನ ಸಹಕಾರಕ್ಕಾಗಿ ಕರೆ ನೀಡಿದ ಅಜಿತ್ ದೋವಲ್

TV9 Digital Desk

| Edited By: Rashmi Kallakatta

Updated on: Nov 10, 2021 | 1:49 PM

NSA Ajit Doval ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ನಾವು ಇಂದು ಸಭೆ ನಡೆಸುತ್ತಿದ್ದೇವೆ. ನಾವೆಲ್ಲರೂ ಆ ದೇಶದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇವು ಅಫ್ಘಾನಿಸ್ತಾನದ ಜನರಿಗೆ ಮಾತ್ರವಲ್ಲ, ಅದರ ನೆರೆಹೊರೆಯವರು ಮತ್ತು ಪ್ರದೇಶಕ್ಕೂ ಪ್ರಮುಖ ಪರಿಣಾಮಗಳನ್ನು ಹೊಂದಿವೆ.

ಅಫ್ಘಾನಿಸ್ತಾನದ ಕುರಿತು ಭದ್ರತಾ ಸಂವಾದ: ಸಾಮೂಹಿಕ ಭದ್ರತೆ ಹೆಚ್ಚಿಸಲು ಹೆಚ್ಚಿನ ಸಹಕಾರಕ್ಕಾಗಿ ಕರೆ ನೀಡಿದ ಅಜಿತ್ ದೋವಲ್
ಏಳು ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು

Follow us on

ದೆಹಲಿ: ತಾಲಿಬಾನ್ (Taliban) ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ (Afghanistan) ಪರಿಸ್ಥಿತಿಯನ್ನು ಚರ್ಚಿಸಲು ನವದೆಹಲಿಯಲ್ಲಿ ಒಟ್ಟುಗೂಡಿದ ಏಳು ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಉದ್ದೇಶಿಸಿ ಮಾತನಾಡಿದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (NSA Ajit Doval), ಅಫ್ಘಾನ್ ಜನರಿಗೆ ಸಹಾಯ ಮಾಡಲು ಮತ್ತು “ಸಾಮೂಹಿಕ ಭದ್ರತೆ” ಹೆಚ್ಚಿಸುವುದಕ್ಕಾಗಿ ಹೆಚ್ಚಿನ ಸಹಕಾರ ಮತ್ತು ಸಂವಹನಕ್ಕೆ ಕರೆ ನೀಡಿದರು. ಅಫ್ಘಾನಿಸ್ತಾನದ ಕುರಿತು ದೆಹಲಿಯಲ್ಲಿ ನಡೆದ  ಪ್ರಾದೇಶಿಕ ಭದ್ರತಾ ಸಂವಾದದಲ್ಲಿ (Regional Security Dialogue on Afghanistan) ಮಾತನಾಡಿದ ಅಜಿತ್ ದೋವಲ್, “ಇದು 2018 ರಲ್ಲಿ ಇರಾನ್ ಆರಂಭಿಸಿದ ಪ್ರಕ್ರಿಯೆಯ ಮೂರನೇ ಸಭೆಯಾಗಿದೆ. ನಾವು ಅಲ್ಲಿಯೂ ಎರಡನೇ ಸಭೆಯನ್ನು ನಡೆಸಿದ್ದೇವೆ. ಅದಕ್ಕಾಗಿ ನಾವು ಇರಾನ್‌ಗೆ ಆಭಾರಿಯಾಗಿದ್ದೇವೆ. ಎಲ್ಲಾ ಮಧ್ಯ ಏಷ್ಯಾದ ದೇಶಗಳು ಮತ್ತು ಈ ಕಲ್ಪನೆಯನ್ನು ಆರಂಭಿಸಿದ ರಷ್ಯಾದ ಭಾಗವಹಿಸುವಿಕೆಯೊಂದಿಗೆ ಇಂದು ಸಂವಾದವನ್ನು ಆಯೋಜಿಸುವುದು ಭಾರತದ ಸುಯೋಗ ಎಂದಿದ್ದಾರೆ. ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ನಾವು ಇಂದು ಸಭೆ ನಡೆಸುತ್ತಿದ್ದೇವೆ. ನಾವೆಲ್ಲರೂ ಆ ದೇಶದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇವು ಅಫ್ಘಾನಿಸ್ತಾನದ ಜನರಿಗೆ ಮಾತ್ರವಲ್ಲ, ಅದರ ನೆರೆಹೊರೆಯವರು ಮತ್ತು ಪ್ರದೇಶಕ್ಕೂ ಪ್ರಮುಖ ಪರಿಣಾಮಗಳನ್ನು ಹೊಂದಿವೆ. ನಮ್ಮ ನಡುವೆ ನಿಕಟ ಸಮಾಲೋಚನೆ, ಹೆಚ್ಚಿನ ಸಹಕಾರ ಮತ್ತು ಪ್ರಾದೇಶಿಕ ದೇಶಗಳ ನಡುವೆ ಸಂವಹನ ಮತ್ತು ಸಮನ್ವಯಕ್ಕೆ ಇದು ಸಮಯ. “ನಮ್ಮ ಚರ್ಚೆಗಳು ಫಲದಾಯಕ, ಉಪಯುಕ್ತ ಮತ್ತು ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಲು ಮತ್ತು ನಮ್ಮ ಸಾಮೂಹಿಕ ಭದ್ರತೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತವೆ ಎಂದು ನನಗೆ ವಿಶ್ವಾಸವಿದೆ” ಎಂದು ದೋವಲ್ ಹೇಳಿದ್ದಾರೆ.

ಬುಧವಾರ ಏಳು ರಾಷ್ಟ್ರಗಳ ಪ್ರತಿನಿಧಿಗಳು ಅಫ್ಘಾನಿಸ್ತಾನದಲ್ಲಿ ತೆರೆದುಕೊಳ್ಳುತ್ತಿರುವ ಪರಿಸ್ಥಿತಿ ಮತ್ತು ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಚರ್ಚಿಸಲಿದ್ದಾರೆ. ರಿಯರ್ ಅಡ್ಮಿರಲ್ ಅಲಿ ಶಮ್ಖಾನಿ (ಇರಾನ್), ನಿಕೊಲಾಯ್ ಪಿ ಪಟ್ರುಶೆವ್ (ರಷ್ಯಾ), ಕರೀಮ್ ಮಾಸ್ಸಿಮೊವ್ (ಕಝಾಕಿಸ್ತಾನ್), ಮರಾಟ್ ಮುಕಾನೋವಿಚ್ ಇಮಾನ್ಕುಲೋವ್ (ಕಿರ್ಗಿಸ್ತಾನ್), ನಸ್ರುಲ್ಲೊ ರಹ್ಮಟ್ಜೋನ್ ಮಹ್ಮುದ್ಜೋಡಾ (ತಜಿಕಿಸ್ತಾನ್), ಚಾರ್ಮಿರತ್ ಕಕಲ್ಯೆವ್ವಿಚ್ ಅಮಾವೋವ್ (ತುರ್ಕಮೆನಿಸ್ತಾನ್) ಮತ್ತು ವಿಕ್ಟರ್ ಮಖ್ಮುಡೋವ್ (ಉಜ್ಬೇಕಿಸ್ತಾನ್) ಈ ಸಭೆಯಲ್ಲಿ ಭಾಗವಹಿಸಿದ್ದಾರೆ.

ಅಫ್ಘಾನಿಸ್ತಾನದ ತಾಲಿಬಾನ್ ಸ್ವಾಧೀನದಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು “ಪ್ರಾದೇಶಿಕ ಭದ್ರತಾ ಸಂರಚನೆ ವಿಕಸನಗೊಳಿಸಲು ಸಭೆಯು ಪರಿಶೀಲಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಮುಖ್ಯವಾಗಿ ಅದರ ಗಡಿಯೊಳಗೆ ಮತ್ತು ಆಚೆಗಿನ ಭಯೋತ್ಪಾದನೆ, ಮೂಲಭೂತೀಕರಣ ಮತ್ತು ಉಗ್ರವಾದ, ಗಡಿಯಾಚೆಗಿನ ಚಲನೆ, ಮಾದಕವಸ್ತು ಉತ್ಪಾದನೆ ಮತ್ತು ಕಳ್ಳಸಾಗಣೆ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಬಿಟ್ಟುಹೋದ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳ ಸಂಭಾವ್ಯ ಬಳಕೆ ಬಗ್ಗೆ ಸಭೆ ಚರ್ಚಿಸಲಿದೆ.

ಮೂಲಗಳ ಪ್ರಕಾರ ದೇಶದ ಉನ್ನತ ಭದ್ರತಾ ಸಂಸ್ಥೆಯಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್ ಸಮ್ಮೇಳನವನ್ನು ಆಯೋಜಿಸುವಲ್ಲಿ ಮುಂದಾಳತ್ವ ವಹಿಸುತ್ತಿದೆ. ಸಭೆಯು “ಸೆಕ್ಯುರಿಟಿ ಟ್ರ್ಯಾಕ್” ಆಗಿದೆ, ಇದು “ರಾಜತಾಂತ್ರಿಕ ಟ್ರ್ಯಾಕ್” ಗಿಂತ ಭಿನ್ನವಾಗಿದೆ ಮತ್ತು ಈ ದೇಶಗಳಲ್ಲಿನ “ಭದ್ರತಾ ಸಂಸ್ಥೆಗಳ ಪ್ರತಿನಿಧಿಗಳು” “ಪ್ರಾಯೋಗಿಕ ಸಹಕಾರ” ಕುರಿತು ಚರ್ಚಿಸುತ್ತಾರೆ ಎಂದು ಅವರು ಹೇಳಿದರು.

‘ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿದೆ’ -ಕಝಾಕಿಸ್ತಾನ್ ರಾಷ್ಟ್ರೀಯ ಭದ್ರತಾ ಸಮಿತಿಯ ಅಧ್ಯಕ್ಷ ಕಝಾಕಿಸ್ತಾನ್‌ನ ರಾಷ್ಟ್ರೀಯ ಭದ್ರತಾ ಸಮಿತಿಯ ಅಧ್ಯಕ್ಷ ಕರೀಮ್ ಮಾಸ್ಸಿಮೊವ್ ಅಫ್ಘಾನಿಸ್ತಾನದಲ್ಲಿ ಉಂಟಾಗುತ್ತಿರುವ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದಾರೆ.  ಎಎನ್‌ಐ ಪ್ರಕಾರ “ಅಫ್ಘಾನಿಸ್ತಾನದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ನಾವು ಕಳವಳ ಹೊಂದಿದ್ದೇವೆ” ಎಂದು ಅವರು ಹೇಳಿದರು. “ಅಫ್ಘನ್ನರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯು ಕ್ಷೀಣಿಸುತ್ತಿದೆ ಮತ್ತು ದೇಶವು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಾನವೀಯ ಸಹಾಯವನ್ನು ಹೆಚ್ಚಿಸುವ ಅಗತ್ಯವಿದ ಎಂದು ಅವರು ಹೇಳಿದ್ದಾರೆ.

‘ಎಲ್ಲರನ್ನು ಒಳಗೊಳ್ಳುವ ಸರ್ಕಾರವು ವಲಸೆ ಬಿಕ್ಕಟ್ಟನ್ನು ಪರಿಹರಿಸಬಹುದು’ – ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಫ್ಘಾನಿಸ್ತಾನವು ಇಂದು ಎದುರಿಸುತ್ತಿರುವ ವಲಸೆ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಾ, ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ರಿಯರ್ ಅಡ್ಮಿರಲ್ ಅಲಿ ಶಮ್ಖಾನಿ, “‘ಎಲ್ಲರನ್ನು ಒಳಗೊಳ್ಳುವ ಸರ್ಕಾರ” ಮತ್ತು ಎಲ್ಲಾ ಜನಾಂಗೀಯ ಗುಂಪುಗಳ ಭಾಗವಹಿಸುವಿಕೆಯಿಂದ ಮಾತ್ರ ಪರಿಹಾರವನ್ನು ಪಡೆಯಬಹುದು ಎಂದು ಹೇಳಿದರು.

‘ನೆರೆಯವರಾಗಿ, ನಾವು ಅಫ್ಘನ್ ಜನರಿಗೆ ಸಹಾಯ ಮಾಡಲು ಸಿದ್ಧರಿದ್ದೇವೆ’ – ತಜಕಿಸ್ತಾನ್ ಎನ್ಎಸ್ಎ ತಜಕಿಸ್ತಾನ್ ಅಫ್ಘಾನಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿರುವುದರಿಂದ, ಪೀಡಿತ ಅಫ್ಘಾನ್ ಜನರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ದೇಶವು ಸಿದ್ಧವಾಗಿದೆ ಎಂದು ತಜಕಿಸ್ತಾನದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಸ್ರುಲ್ಲೊ ರಹಮತ್ಜೋನ್ ಮಹ್ಮುದ್ಜೋಡಾ ಹೇಳಿದ್ದಾರೆ. ಆದಾಗ್ಯೂ, ಅಫ್ಘಾನಿಸ್ತಾನಕ್ಕೆ ದೇಶದ ಸಾಮೀಪ್ಯವು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಎಎನ್‌ಐ ಪ್ರಕಾರ, “ತಾಜಿಕ್-ಅಫ್ಘಾನ್ ಗಡಿಗಳಲ್ಲಿನ ಪರಿಸ್ಥಿತಿಯು ಜಟಿಲವಾಗಿದೆ” ಎಂದು ಅವರು ಹೇಳಿದರು.

‘ಅಫ್ಘಾನ್ ಭಯೋತ್ಪಾದಕ ಸಂಘಟನೆಗಳಿಂದಾಗಿ ನಮ್ಮ ಪ್ರದೇಶದಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿ’ -ಕಿರ್ಗಿಸ್ತಾನ್ ಎನ್ಎಸ್ಎ “ಇದು ನಮ್ಮ ಪ್ರದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ಬಹಳ ಕಷ್ಟಕರವಾದ ಪರಿಸ್ಥಿತಿಯಾಗಿದೆ. ಇದು ಅಫ್ಘಾನಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದೆ ಎಂದು ಕಿರ್ಗಿಸ್ತಾನ್ ಭದ್ರತಾ ಮಂಡಳಿಯ ಕಾರ್ಯದರ್ಶಿ ಮರಾತ್ ಎಂ ಇಮಾನ್ಕುಲೋವ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ಮಾತುಕತೆಯಿಂದ ಹೊರಗುಳಿದಿದ್ದವು.

ಇದನ್ನೂ ಓದಿ: ಅಫ್ಘಾನಿಸ್ತಾನ ಕುರಿತು ಎನ್ಎಸ್ಎ ಮಟ್ಟದ ಶೃಂಗಸಭೆ ಆಯೋಜಿಸಿದ ಭಾರತ; 7 ರಾಷ್ಟ್ರಗಳು ಹಾಜರು

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada