ಇಸ್ಲಾಮಾಬಾದ್: ಇಸ್ಲಾಮಾಬಾದ್‌ನ ಬೆಟ್ಟದ ತುದಿಯಲ್ಲಿರುವ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಖಾಸಗಿ ಅರಮನೆಯ ವೆಚ್ಚವನ್ನು ಅವರ ಪಕ್ಷ ಭರಿಸುತ್ತದೆ ಎಂಬ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮಾಜಿ ಸದಸ್ಯರೊಬ್ಬರು ಆರೋಪ ಮಾಡಿದ್ದಾರೆ. ಅವರ ಆರೋಪದ ಕುರಿತು ವರದಿ ಮಾಡಿದ್ದಕ್ಕಾಗಿ ಪಾಕಿಸ್ತಾನ ಸರ್ಕಾರ ದೇಶದ ಪ್ರಸಾರ ಮಾಧ್ಯಮಗಳಿಗೆ ಬೆದರಿಕೆ ಹಾಕಿದೆ. ಈ ವಾರದ ಆರಂಭದಲ್ಲಿ, 2016 ರಲ್ಲಿ ಪಿಟಿಐ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ವಜಿಹುದ್ದೀನ್ ಅಹ್ಮದ್ ಇಮ್ರಾನ್ ಖಾನ್ ನಿವಾಸದ ಕುರಿತು ಆರೋಪಿಸಿದ್ದರು. ಈಗಿನ ಪಿಟಿಐ ಪಕ್ಷದ ನಾಯಕರಲ್ಲೊಬ್ಬರಾದ ಜಹಾಂಗೀರ್ ತರೀನ್ ಅವರು ಇಮ್ರಾನ್ ಖಾನ್ ನಿವಾಸದ ಖರ್ಚುವೆಚ್ಚ ಭರಿಸಲೆಂದೇ ಪ್ರತಿ ತಿಂಗಳು 3 ಮಿಲಿಯನ್ ರೂಗಳನ್ನು ಇಮ್ರಾನ್ಗೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಟಿವಿ ಸಂದರ್ಶನವೊಂದರಲ್ಲಿ ಅಹ್ಮದ್ ನಂತರ ತರೀನ್ ಅವರು ಇಮ್ರಾನ್ಗೆ 5 ಮಿಲಿಯನ್ ರೂ ನೀಡುತ್ತಿದ್ದಾರೆ ಎಂದು ಮೊತ್ತವನ್ನು ಹೆಚ್ಚಿಸಿ ಆರೋಪಿಸಿದ್ದರು. ಅಹ್ಮದ್ ಪ್ರಕಾರ, ಇಮ್ರಾನ್ ಖಾನ್ ಪ್ರಾಮಾಣಿಕ ವ್ಯಕ್ತಿ ಎಂಬ ಸಾರ್ವಜನಿಕ ಗ್ರಹಿಕೆ ಸಂಪೂರ್ಣವಾಗಿ ತಪ್ಪು ಆದರೆ, ಟ್ವಿಟರ್‌ನಲ್ಲಿ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ ತರೀನ್, ಆರೋಪವನ್ನು ನಿರಾಕರಿಸಿದ್ದಾರೆ.
ಆದರೆ ವಜಿಹುದ್ದೀನ್ ಅಹ್ಮದ್ ಮಾಡಿದ ಆರೋಪ ಪ್ರಸಾರವಾದ ಕೂಡಲೇ, ಸಂದರ್ಶನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ನಂತರದಲ್ಲಿ ಅದನ್ನು ಮುಖ್ಯವಾಹಿನಿಯ ಮಾಧ್ಯಮಗಳು ಪ್ರಸಾರ ಮಾಡಿದವು. ‘‘ಕೆಲವು ಟಿವಿ ಕೇಂದ್ರಗಳು ನ್ಯಾಯಮೂರ್ತಿ ವಜಿಹುದ್ದೀನ್ ಅಹ್ಮದ್ ಅವರ ಆರೋಪಗಳನ್ನು ಪ್ರಚಾರಕ್ಕಾಗಿ ಬಳಸಿವೆ’’ ಎಂದು ಮಾಹಿತಿ ಸಚಿವ ಚೌಧರಿ ಫವಾದ್ ಹುಸೇನ್ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅಸಚಿವ ಹುಸೇನ್, ಅಹ್ಮದ್ ಅವರ ಆರೋಪಗಳನ್ನು ಪರಿಶೀಲಿಸದೇ ವರದಿ ಮಾಡಿದ ಎಲ್ಲಾ ಚಾನೆಲ್‌ಗಳ ವಿರುದ್ಧ ಸರ್ಕಾರವು ಪ್ರಕರಣವನ್ನು ದಾಖಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಹ್ಮದ್ ಅವರ ಆರೋಪಗಳಿಗೆ ಸರ್ಕಾರವು ‘ಕ್ರಿಮಿನಲ್ ಮಾನನಷ್ಟ ಮೊಕದ್ದಮೆ’ಯನ್ನು ಹೂಡಲು ನಿರ್ಧರಿಸಿದೆ ಎಂದು ಸಚಿವರು ಹೇಳಿದ್ದಾರೆ. ಸಂಸ್ಥೆಗಳ ಗೌರವವನ್ನು ಎತ್ತಿಹಿಡಿಯುವಂತೆ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರು ಮತ್ತು ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸಚಿವರು ಮನವಿ ಮಾಡಿದ್ದಾರೆ.
ಸಚಿವರ ಬೆದರಿಕೆಯ ನಂತರ ಕರಾಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಜಿಹುದ್ದೀನ್ ಅಹ್ಮದ್, ತಮ್ಮ ಹೇಳಿಕೆ ಸ್ಪಷ್ಟವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ ಮತ್ತು ಸರ್ಕಾರವು ಮಾನನಷ್ಟ ಮೊಕದ್ದಮೆ ಹೂಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆರೋಪವನ್ನು ನಿರಾಕರಿಸದೆ ತರೀನ್ ಅವರಿಗೆ ಬೇರೆ ದಾರಿಯಿಲ್ಲ. ಕಾರಣ ಈ ವೆಚ್ಚಗಳು ಪುಸ್ತಕದಿಂದ ಹೊರಗಿವೆ ಮತ್ತು ಲೆಕ್ಕಕ್ಕೆ ಸಿಗುವುದಿಲ್ಲ. ಹಾಗಾಗಿ ಅದನ್ನು ನಿರಾಕರಿಸುವುದು ಅವರಿಗೆ ಸುಲಭ ಎಂದಿದ್ಧಾರೆ.
ಇದನ್ನೂ ಓದಿ:
1966ರಲ್ಲಿ ಮೊದಲ ಬಾರಿಗೆ ವಿಶ್ವ ಸುಂದರಿಯನ್ನು ಕಂಡ ಭಾರತ ಎರಡನೇಯವರಿಗಾಗಿ 28 ವರ್ಷ ಕಾಯಬೇಕಾಯಿತು!