ಒಬ್ಬ ವ್ಯಕ್ತಿಗೆ ಏಕಕಾಲಕ್ಕೆ ಡೆಲ್ಟಾ ಮತ್ತು ಒಮಿಕ್ರಾನ್ ಸೋಂಕು ತಗುಲಿದರೆ ಏನಾಗುತ್ತದೆ? ಆರೋಗ್ಯ ತಜ್ಞರು ನೀಡಿದ ಉತ್ತರ ಭಯಹುಟ್ಟಿಸುವಂತಿದೆ !
ಒಂದೊಮ್ಮೆ ಒಬ್ಬ ವ್ಯಕ್ತಿಗೆ ಡೆಲ್ಟಾ ಮತ್ತು ಒಮಿಕ್ರಾನ್ ಎರಡೂ ತಳಿಗಳು ತಗುಲಿದರೆ, ಆತನ ದೇಹದಲ್ಲಿ ಇವೆರಡೂ ತಮ್ಮ ಜೀನ್ಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಕೊರೊನಾದ ವಿವಿಧ ತಳಿಗಳು ಈಗಾಗಲೇ ವಿಶ್ವವನ್ನು ಬಾಧಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಡೆಲ್ಟಾ (Delta Variant) ಮತ್ತು ಒಮಿಕ್ರಾನ್ (Omicron Variant) ದೊಡ್ಡ ತಲೆನೋವು ಸೃಷ್ಟಿಸಿದ ತಳಿಗಳು. ಇತ್ತೀಚೆಗಷ್ಟೇ ಪತ್ತೆಯಾದ ಒಮಿಕ್ರಾನ್ ಸೋಂಕಿನ ಪ್ರಸರಣದ ಪ್ರಮಾಣ ಹೆಚ್ಚಾಗಿದೆ. ಹೀಗಿರುವಾಗ ಒಬ್ಬ ವ್ಯಕ್ತಿಗೆ ಒಂದೇ ಬಾರಿಗೆ ಡೆಲ್ಟಾ ಮತ್ತು ಒಮಿಕ್ರಾನ್ ಎರಡೂ ವೈರಾಣು ತಗುಲಿದರೆ ಏನಾಗಲಿದೆ ಎಂಬ ಪ್ರಶ್ನೆಯೊಂದು ಎದ್ದಿದ್ದು, ಅದಕ್ಕೆ ಆರೋಗ್ಯ ತಜ್ಞರು (Health Experts) ಉತ್ತರ ನೀಡಿದ್ದಾರೆ. ಒಬ್ಬ ವ್ಯಕ್ತಿಗೆ ಏಕಕಾಲಕ್ಕೆ ಒಮಿಕ್ರಾನ್ ಮತ್ತು ಡೆಲ್ಟಾ ವೈರಾಣುಗಳು ತಗುಲಿದರೆ, ಆ ವ್ಯಕ್ತಿಯಲ್ಲಿ ಕೊವಿಡ್ 19 ವೈರಸ್ನ ಇನ್ನೊಂದು ಸೂಪರ್ ವೇರಿಯಂಟ್ (ಹೊಸ ತಳಿ)ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮಾಡೆರ್ನಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಪಾಲ್ ಬರ್ಟನ್ ಕಳೆದ ವಾರ ಯುಕೆ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ ಎದುರು ಹೇಳಿದ್ದಾರೆ.
ಒಮಿಕ್ರಾನ್ ಪ್ರಾರಂಭವಾದ ತಕ್ಷಣವೇ ದಕ್ಷಿಣ ಆಫ್ರಿಕಾ ಈ ಬಗ್ಗೆ ಹೇಳಿದೆ. ಹಾಗೇ, ಅಲ್ಲಿನ ಆರೋಗ್ಯ ತಜ್ಞರು ಹೀಗೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರೋಗ ನಿರೋಧಕ ಶಕ್ತಿಯನ್ನು ತುಂಬ ಕಡಿಮೆ ಪ್ರಮಾಣದಲ್ಲಿ ಹೊಂದಿರುವ ಜನರು ನಿಸ್ಸಂಶಯವಾಗಿಯೂ ಎರಡೂ (ಡೆಲ್ಟಾ ಮತ್ತು ಒಮಿಕ್ರಾನ್) ವಿಧದ ವೈರಾಣುಗಳಿಗೆ ತುತ್ತಾಗಬಹುದು ಎಂದು ಹೇಳಿದ್ದಾರೆ ಎಂದು ಡಾ. ಬರ್ಟನ್ ತಿಳಿಸಿದ್ದಾರೆ. ಸದ್ಯ ಬ್ರಿಟನ್ನಲ್ಲಿ ಡೆಲ್ಟಾ ಮತ್ತು ಒಮಿಕ್ರಾನ್ ಎರಡೂ ವೈರಸ್ಗಳು ಹೆಚ್ಚಿನ ಪ್ರಮಾಣದಲ್ಲಿಯೇ ಹಬ್ಬುತ್ತಿವೆ. ಒಮಿಕ್ರಾನ್ ಮತ್ತು ಡೆಲ್ಟಾ ಪ್ರಕರಣಗಳು ಪ್ರತಿದಿನವೂ ಪತ್ತೆಯಾಗುತ್ತಿವೆ. ಅದರಲ್ಲೂ ಶುಕ್ರವಾರ ಒಂದೇ ದಿನ 3201 ಒಮಿಕ್ರಾನ್ ಕೇಸ್ಗಳು ದಾಖಲಾಗಿವೆ ಎಂದೂ ಮಾಹಿತಿ ನೀಡಿದ್ದಾರೆ.
ಒಂದೊಮ್ಮೆ ಒಬ್ಬ ವ್ಯಕ್ತಿಗೆ ಡೆಲ್ಟಾ ಮತ್ತು ಒಮಿಕ್ರಾನ್ ಎರಡೂ ತಳಿಗಳು ತಗುಲಿದರೆ, ಆತನ ದೇಹದಲ್ಲಿ ಇವೆರಡೂ ತಮ್ಮ ಜೀನ್ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಆಗ ಅತ್ಯಂತ ಹೆಚ್ಚು ಅಪಾಯಕಾರಿಯಾದ ರೂಪಾಂತರ ಸೃಷ್ಟಿಯಾಗಬಹುದು. ಇಂಥ ಮರುಸಂಯೋಜನೆ ಅತ್ಯಂತ ಅಪರೂಪವಾದರೂ, ಆಗುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಬರ್ಟನ್ ಸೇರಿ ಇನ್ನಿತರ ಕೆಲವು ಸಂಶೋಧಕರು ಹೇಳಿದ್ದಾಗಿ ಡೇಲಿ ಮೇಲ್ ಕೂಡ ವರದಿ ಮಾಡಿದೆ. ನ್ಯೂ ಸೌತ್ ವೇಲ್ಸ್ನ ಯೂನಿವರ್ಸಿಟಿಯ ವೈರಾಣುಶಾಸ್ತ್ರಜ್ಞ ಪೀಟರ್ ವೈಟ್ ಕೂಡ ಇದೇ ಎಚ್ಚರಿಕೆ ನೀಡಿದ್ದಾರೆ. ಬ್ಲೂಮ್ಬರ್ಗ್ನೊಂದಿಗೆ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ವಿವಿಧ ತಳಿಗಳ ಮರುಸಂಯೋಜನೆ ಆಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಜನಪ್ರತಿನಿಧಿಗಳೇ ಎಚ್ಚರವಿರಲಿ : ಯಾವುದೋ ಗಂಡು ಸುಮ್ಮನೆ ಸವರಿಹೋದರೂ ಸಾಕು ಆ ಅಸಾಧ್ಯ ಸಂಕಟ ನಿಮಗೇನು ಗೊತ್ತು?