ಇಸ್ಲಮಾಬಾದ್: ಆಗಸ್ಟ್ನಲ್ಲಿ ತಾಲಿಬಾನಿಗಳ ಆಡಳಿತಕ್ಕೆ ಒಳಪಟ್ಟ ಅಫ್ಘಾನಿಸ್ತಾನ (Afghanistan)ದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಅಲ್ಲಿನ ಜನರಿಗೆ ಮಾನವೀಯ ನೆರವು ನೀಡಿ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಬಿಲಿಯನೇರ್ ಬಿಲ್ಗೇಟ್ಸ್ರನ್ನು ಒತ್ತಾಯಿಸಿದ್ದಾರೆ. ಬಿಲ್ ಆ್ಯಂಡ್ ಮೆಲಿಂದಾ ಗೇಟ್ಸ್ ಫೌಂಡೇಶನ್ (BMGF)ನ ಸಹ ಅಧ್ಯಕ್ಷರೂ ಆಗಿರುವ ಬಿಲ್ಗೇಟ್ಸ್ ಬಳಿ ಇಮ್ರಾನ್ ಖಾನ್ ಮಂಗಳವಾರವೇ ಈ ಸಂಬಂಧ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಪೋಲಿಯೋ ನಿರ್ಮೂಲನಾ ಪ್ರಯತ್ನಗಳು ಮತ್ತು ಪೌಷ್ಟಿಕಾಂಶಗಳ ಅಭಿವೃದ್ಧಿಗಾಗಿ ಬಿಎಂಜಿಎಫ್ನ ಸಹಕಾರವನ್ನೂ ಅವರು ಕೇಳಿದ್ದಾರೆ. ಇದೇ ಹೊತ್ತಲ್ಲಿ ಅಫ್ಘಾನಿಸ್ತಾನಕ್ಕೂ ಆರ್ಥಿಕ ನೆರವು ನೀಡಲು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಜನರು ಬಡತನ ರೇಖೆಗಿಂತ ಕೆಳಗಿನ ಮಟ್ಟದ ಜೀವನ ನಡೆಸುತ್ತಿದ್ದಾರೆ. ಆ ದೇಶದ ಜನರಿಗೆ ಈಗ ಹಣಕಾಸಿನ ನೆರವು ತುಂಬ ಅಗತ್ಯ ಇದೆ. ಹೀಗಾಗಿ ನೀವು ಮಾನವೀಯತೆಯ ನೆರವೆಂದು ಪರಿಗಣಿಸಿ ಅವರಿಗೆ ಹಣಕಾಸಿನ ಸಹಾಯ ಮಾಡಿ ಎಂದು ಇಮ್ರಾನ್ ಖಾನ್ ಬಿಲ್ಗೇಟ್ಸ್ ಬಳಿ ಕೇಳಿದ್ದಾಗಿ ಪಾಕ್ ಪ್ರಧಾನಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಪಾಕಿಸ್ತಾನದಲ್ಲಿ ಪೋಲಿಯೋ ಲಸಿಕೆ ನೀಡುವ ತಂಡದ ಮೇಲೆ ಭಯೋತ್ಪಾದಕರು ಪದೇಪದೆ ದಾಳಿ ನಡೆಸುತ್ತಿದ್ದಾರೆ. ಈ ಲಸಿಕೆ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ಬಲವಾಗಿ ನಂಬಿರುವ ಅವರು, ಲಸಿಕೆ ಹಾಕಲು ಬಿಡುತ್ತಿಲ್ಲ. ಪೋಲಿಯೋ ಲಸಿಕೆ ಹಾಕುವ ತಂಡವನ್ನು ಗುರಿಯಾಗಿಸಿ ಪದೇಪದೆ ದಾಳಿಯನ್ನೂ ನಡೆಸುತ್ತಿದ್ದಾರೆ. ಈ ಮಧ್ಯೆ ಇಮ್ರಾನ್ ಖಾನ್, ಪೋಲಿಯೋ ಲಸಿಕಾ ಅಭಿಯಾನಕ್ಕೆ ಬಿಲ್ಗೇಟ್ಸ್ರ ಫೌಂಡೇಶನ್ನಿಂದ ಇನ್ನಷ್ಟು ಸಹಕಾರವನ್ನೂ ಕೋರಿದ್ದಾರೆ.
ಇನ್ನು ಬಿಲ್ಗೇಟ್ಸ್ ಅಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆ ಯಾವ ಪ್ರತಿಕ್ರಿಯೆ ನೀಡಿದ್ದಾರೆಂದು ಗೊತ್ತಾಗಲಿಲ್ಲ. ಆದರೆ ಪಾಕಿಸ್ತಾನಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ತಮ್ಮ ಫೌಂಡೇಶನ್ನಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ. ಯಾವುದೇ ಮಕ್ಕಳು ಪೋಲಿಯೋ ವೈರಸ್ನಿಂದ ಪಾರ್ಶ್ವವಾಯುವಿಗೆ ತುತ್ತಾಗದಂತೆ ಕಾಪಾಡಲು ಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಮಂತಾ ದೇಹದ ಮೇಲಿರುವ ಟ್ಯಾಟೂ ಗತಿಯೇನು? ಅದರಲ್ಲಿದೆ ನಾಗ ಚೈತನ್ಯ ನೆನಪು
‘ಆ ದೃಶ್ಯಕ್ಕಾಗಿ ನಾನು ತುಂಬಾ ಟೇಕ್ ತೆಗೆದುಕೊಂಡಿದ್ದೆ’; ಧನ್ಯಾ ರಾಮ್ಕುಮಾರ್