ಅಫ್ಘಾನ್ ಮೇಲೆ ದಾಳಿ ನಡೆಸಿ 10 ಜನರನ್ನು ಕೊಂದ ಪಾಕಿಸ್ತಾನ; ತಾಲಿಬಾನ್​​ನಿಂದ ಪ್ರತೀಕಾರದ ಎಚ್ಚರಿಕೆ

ಪಾಕಿಸ್ತಾನದಿಂದ ಅಫ್ಘಾನಿಸ್ತಾನದ 3 ಪ್ರಾಂತ್ಯದ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ. ಕದನವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಮತ್ತೊಮ್ಮೆ ಅಫ್ಘಾನ್ ಮೇಲೆ ದಾಳಿ ನಡೆಸಿ, 9 ಮಕ್ಕಳು ಹಾಗೂ ಓರ್ವ ಮಹಿಳೆಯನ್ನು ಹತ್ಯೆ ಮಾಡಿದೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ತಾಲಿಬಾನ್ ಎಚ್ಚರಿಕೆ ನೀಡಿದೆ. ಮುಗ್ಧ ಮಕ್ಕಳ ಹತ್ಯೆಗೆ ಪಾಕಿಸ್ತಾನಕ್ಕೆ ತಕ್ಕ ಪ್ರತೀಕಾರ ನೀಡುತ್ತೇವೆ ಎಂದು ಪಾಕ್ ಸೇನೆಗೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಎಚ್ಚರಿಕೆ ನೀಡಿದೆ.

ಅಫ್ಘಾನ್ ಮೇಲೆ ದಾಳಿ ನಡೆಸಿ 10 ಜನರನ್ನು ಕೊಂದ ಪಾಕಿಸ್ತಾನ; ತಾಲಿಬಾನ್​​ನಿಂದ ಪ್ರತೀಕಾರದ ಎಚ್ಚರಿಕೆ
Airstrike On Afghanistan

Updated on: Nov 25, 2025 | 4:22 PM

ಕಾಬೂಲ್, ನವೆಂಬರ್ 25: ಪಾಕಿಸ್ತಾನ ಅಫ್ಘಾನಿಸ್ತಾನದ (Afghanistan) ಖೋಸ್ಟ್, ಕುನಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ನಿನ್ನೆ ರಾತ್ರಿಯಿಡೀ ವೈಮಾನಿಕ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ (Taliban Government) ಆರೋಪಿಸಿದೆ. ಇದು ಎರಡು ನೆರೆಹೊರೆಯವರ ನಡುವಿನ ಉದ್ವಿಗ್ನತೆಯ ಸಂಕೇತವಾಗಿದೆ. ಇದರ ಪರಿಣಾಮವಾಗಿ 9 ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಅಫ್ಘಾನಿಸ್ತಾನದ 10 ನಾಗರಿಕರು ಸಾವನ್ನಪ್ಪಿದ್ದಾರೆ. 9 ಮಕ್ಕಳ ಮೃತದೇಹಗಳು ನೆಲಲ ಮೇಲೆ ಬಿದ್ದಿರುವ ಅಮಾನವೀಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪಾಕಿಸ್ತಾನವು ಖೋಸ್ಟ್ ಪ್ರಾಂತ್ಯದ ನಾಗರಿಕನ ಮನೆಯ ಮೇಲೆ ಬಾಂಬ್ ದಾಳಿ ಮಾಡಿ 9 ಮಕ್ಕಳು ಮತ್ತು ಒಬ್ಬ ಮಹಿಳೆಯನ್ನು ಕೊಂದಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಇಂದು ಎಕ್ಸ್​​ನಲ್ಲಿ ಹೇಳಿದೆ. ಕುನಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ಹೆಚ್ಚುವರಿ ದಾಳಿಗಳನ್ನು ನಡೆಸಲಾಯಿತು. ಇದರಿಂದ ಇತರ ನಾಲ್ವರು ಗಾಯಗೊಂಡರು.


ಇದನ್ನೂ ಓದಿ: ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ಭಾರತದ ಮೇಲೆ ದಾಳಿ ನಡೆಸಿದ್ದೇವೆ; ಕೊನೆಗೂ ಒಪ್ಪಿಕೊಂಡ ಪಾಕಿಸ್ತಾನ!

ಅಕ್ಟೋಬರ್‌ನಲ್ಲಿ ಕತಾರ್ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ಪಾಕ್ ಹಾಗೂ ಅಫ್ಘಾನ್ ಎರಡೂ ದೇಶಗಳ ನಡುವೆ ಕದನ ವಿರಾಮ ನಡೆದಿತ್ತು. ಆದರೂ ಅಫ್ಘಾನಿಸ್ತಾನದೊಳಗೆ ಪಾಕಿಸ್ತಾನ ರಾತ್ರಿಯಿಡೀ ದಾಳಿ ನಡೆಸಿದೆ. ಈ ಬಗ್ಗೆ ಕತಾರ್ ಮತ್ತು ಟರ್ಕಿಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಇತ್ತೀಚಿನ ವಾರಗಳಲ್ಲಿ ಇರಾನ್ ಕೂಡ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಪಾತ್ರ ವಹಿಸಲು ಮುಂದಾಗಿದೆ.


ಈ ದಾಳಿಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ಸರ್ಕಾರ, 9 ಮಕ್ಕಳು ಸೇರಿದಂತೆ 10 ಜನರ ಹತ್ಯೆಗೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಪಾಕಿಸ್ತಾನದ ಅರೆಸೇನಾ ಪಡೆಯ ಪ್ರಧಾನ ಕಚೇರಿ ಮೇಲೆ ಭೀಕರ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 6 ಮಂದಿ ಸಾವು

ಪೇಶಾವರದಲ್ಲಿರುವ ಪಾಕಿಸ್ತಾನದ ಅರೆಸೈನಿಕ ಫೆಡರಲ್ ಕಾನ್‌ಸ್ಟಾಬ್ಯುಲರಿ ಪಡೆಯ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆದ ಒಂದು ದಿನದ ನಂತರ ಅಫ್ಘಾನಿಸ್ತಾನದಲ್ಲಿ ಬಾಂಬ್ ದಾಳಿ ನಡೆದಿದೆ. 2021ರಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಸಂಬಂಧಗಳು ಹದಗೆಟ್ಟಿತ್ತು. ಅಕ್ಟೋಬರ್‌ನಲ್ಲಿ ಎರಡೂ ಕಡೆಗಳಲ್ಲಿ ಗಡಿ ಘರ್ಷಣೆಯಲ್ಲಿ ಸುಮಾರು 70 ಜನರು ಸಾವನ್ನಪ್ಪಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ