ಪಾಕಿಸ್ತಾನದ ಅರೆಸೇನಾ ಪಡೆಯ ಪ್ರಧಾನ ಕಚೇರಿ ಮೇಲೆ ಭೀಕರ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 6 ಮಂದಿ ಸಾವು
Peshawar Blast: ಪಾಕಿಸ್ತಾನದ ಪೇಶಾವರದಲ್ಲಿ ಅರೆಸೇನಾ ಪಡೆಯ ಪ್ರಧಾನ ಕಚೇರಿ ಮೇಲೆ ಭೀಕರ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ಮೂವರು ಉಗ್ರರು ಹಾಗೂ ಮೂವರು ಭದ್ರತಾ ಸಿಬ್ಬಂದಿ ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಬಣವಾದ ಜಮಾತುಲ್ ಅಹ್ರಾರ್ ದಾಳಿಯ ಹೊಣೆ ಹೊತ್ತುಕೊಂಡಿದೆ.

ಇಸ್ಲಾಮಾಬಾದ್, ನವೆಂಬರ್ 24: ಪಾಕಿಸ್ತಾನದ (Pakistan) ಪೇಶಾವರದಲ್ಲಿರುವ ಅರೆಸೇನಾ ಪಡೆಯ ಪ್ರಧಾನ ಕಚೇರಿಯ ಮೇಲೆ ಸೋಮವಾರ ಭೀಕರ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ಹಾಗೂ ನಂತರ ನಡೆದ ಕಾರ್ಯಾ ಕಾರ್ಯಾಚರಣೆಯಲ್ಲಿ ಒಟ್ಟು 6 ಮಂದಿ ಮತಪಟ್ಟಿದ್ದಾರೆ. ಮೃತರಲ್ಲಿ ಮೂವರು ಉಗ್ರರು ಹಾಗೂ ಮೂವರು ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಮೊದಲಿಗೆ ಪ್ಯಾರಾಮಿಲಿಟರಿ ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ (ಎಫ್‌ಸಿ) ಪ್ರಧಾನ ಕಚೇರಿಯ ಮುಖ್ಯ ದ್ವಾರದ ಮೇಲೆ ಒಬ್ಬ ಆತ್ಮಾಹುತಿ ದಾಳಿಕೋರ ದಾಳಿ ನಡೆಸಿದ್ದಾನೆ. ನಂತರ ಇನ್ನೊಬ್ಬನು ಕಾಂಪೌಂಡ್ ಒಳ ಪ್ರವೇಶಿಸಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಸದ್ಯ ಸೇನೆ ಮತ್ತು ಪೊಲೀಸರು ಘಟನಾ ಸ್ಥಳವನ್ನು ಸುತ್ತುವರೆದಿದ್ದಾರೆ. ಕೆಲವು ಮಂದಿ ಭಯೋತ್ಪಾದಕರು ಪ್ರಧಾನ ಕಚೇರಿಯೊಳಗೆ ಅಡಗಿರುವ ಶಂಕೆ ಇದ್ದು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆತ್ಮಾಹುತಿ ದಾಳಿ ಸಂದರ್ಭದ ವಿಡಿಯೋ
Peshawar FC Chowk Main sadar blast pic.twitter.com/VRxzfZqEbP
— Abbas Kham (@Abbaskh68764192) November 24, 2025
ಪೇಶಾವರ ಆತ್ಮಾಹುತಿ ದಾಳಿ ಬಗ್ಗೆ ಪೊಲೀಸರು ಹೇಳಿದ್ದೇನು?
ಅರೆಸೇನಾ ಪಡೆಯ ಪ್ರಧಾನ ಕಚೇರಿಯ ಮೇಲೆ ನಡೆದ ದಾಳಿಯ ಬಗ್ಗೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಜುಲ್ಫಿಕರ್ ಹಮೀದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಎರಡು ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ ಎಂದಿದ್ದಾರೆ. ಒಂದು ಮುಖ್ಯ ದ್ವಾರದಲ್ಲಿ ಮತ್ತು ಎರಡನೆಯದು ಪ್ರಧಾನ ಕಚೇರಿ ಸಂಕೀರ್ಣದ ಮೋಟಾರ್‌ಸೈಕಲ್ ಸ್ಟ್ಯಾಂಡ್ ಬಳಿ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ದಾಳಿಯ ಹೊಣೆ ಹೊತ್ತ ತೆಹ್ರೀಕ್-ಇ-ತಾಲಿಬಾನ್
ಪೇಶಾವರದಲ್ಲಿರುವ ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ ಪ್ರಧಾನ ಕಚೇರಿಯ ಮೇಲಿನ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನ ಒಂದು ಬಣವಾದ ಜಮಾತುಲ್ ಅಹ್ರಾರ್ ಹೊತ್ತುಕೊಂಡಿದೆ.
ಇದನ್ನೂ ಓದಿ: ನೈಜೀರಿಯಾ ಶಾಲೆಯ ಮೇಲೆ ಬಂಧೂಕುದಾರಿಗಳ ದಾಳಿ, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, 12 ಶಿಕ್ಷಕರ ಅಪಹರಣ
ಈ ಹಿಂದೆಯೂ ಪಾಕಿಸ್ತಾನದ ಅರೆಸೇನಾಪಡೆಯ ಪ್ರಧಾನ ಕಚೇರಿಯ ಹೊರಗೆ ದಾಳಿಗಳು ನಡೆದಿವೆ. ಈ ವರ್ಷದ ಆರಂಭದಲ್ಲಿ, ಕ್ವೆಟ್ಟಾದಲ್ಲಿರುವ ಪ್ಯಾರಾಮಿಲಿಟರಿ ಪ್ರಧಾನ ಕಚೇರಿಯ ಹೊರಗೆ ಕಾರ್ ಬಾಂಬ್ ಸ್ಫೋಟಗೊಂಡಿತ್ತು. ಸ್ಫೋಟದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು. ಸೆಪ್ಟೆಂಬರ್ 3 ರಂದು ಕ್ವೆಟ್ಟಾದಲ್ಲಿ ರಾಜಕೀಯ ಸಮಾವೇಶದ ಸಂದರ್ಭದ ನಡೆದಿದ್ದ ಆತ್ಮಹತ್ಯಾ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದರು ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




