ಇಸ್ಲಾಮಾಬಾದ್​ ಜಾಥಾ ಕೈಬಿಟ್ಟ ಇಮ್ರಾನ್ ಖಾನ್: ಪಾಕಿಸ್ತಾನದಲ್ಲಿ ಅರಾಜಕತೆಗೆ ನಾನು ಕಾರಣವಾಗಲಾರೆ ಎಂದ ಮಾಜಿ ಪ್ರಧಾನಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 27, 2022 | 9:38 AM

‘ಈ ಸರ್ಕಾರದ ಭಾಗವಾಗಲು ನಮಗೆ ಇಷ್ಟವಿಲ್ಲ. ಎಲ್ಲ ವಿಧಾನಸಭೆಗಳಿಂದ ನಾವು ಹೊರಬರುತ್ತಿದ್ದೇವೆ‘ ಎಂದು ಇಮ್ರಾನ್ ಖಾನ್ ಹೇಳಿದರು.

ಇಸ್ಲಾಮಾಬಾದ್​ ಜಾಥಾ ಕೈಬಿಟ್ಟ ಇಮ್ರಾನ್ ಖಾನ್: ಪಾಕಿಸ್ತಾನದಲ್ಲಿ ಅರಾಜಕತೆಗೆ ನಾನು ಕಾರಣವಾಗಲಾರೆ ಎಂದ ಮಾಜಿ ಪ್ರಧಾನಿ
ಸಾರ್ವಜನಿಕ ಜಾಥಾದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
Follow us on

ಇಸ್ಲಾಮಾಬಾದ್: ಗುಂಡು ಹಾರಿಸಿ ತಮ್ಮನ್ನು ಕೊಲ್ಲುವ ಯತ್ನ ನಡೆದ ನಂತರದ ಮೊದಲ ಪ್ರತಿಭಟನಾ ಜಾಥಾದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಹತ್ವದ ಘೋಷಣೆ ಮಾಡಿದ್ದಾರೆ. ಪಾಕಿಸ್ತಾನದ ಸಂಸತ್ತು ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿರುವ ತಮ್ಮ ಪಕ್ಷದ ಎಲ್ಲ ಸದಸ್ಯರಿಗೂ ರಾಜೀನಾಮೆ ನೀಡಲು ಸೂಚಿಸಿದ್ದಾರೆ. ಪಾಕಿಸ್ತಾನದ ಮುಖ್ಯ ನಗರ ರಾವಲ್​ಪಿಂಡಿಯಲ್ಲಿ ಇಮ್ರಾನ್ ಖಾನ್ ಅವರ ಪಕ್ಷ ಪಿಟಿಐ (ಪಾಕಿಸ್ತಾನ್ ತೆಹ್​ರೀಕ್-ಎ-ಇನ್​ಸಾಫ್) ಆಯೋಜಿಸಿದ್ದ ಬೃಹತ್ ಜಾಥಾದಲ್ಲಿ ದೊಡ್ಡಪ್ರಮಾಣದಲ್ಲಿ ಜನರು ಸೇರಿದ್ದರು. ಇಸ್ಲಾಮಾಬಾದ್​ವರೆಗೆ ನಡೆಸಲು ಉದ್ದೇಶಿಸಿದ್ದ ಜಾಥಾವನ್ನು ಅರ್ಧಕ್ಕೆ ಕೈಬಿಡಲು ಇಮ್ರಾನ್ ಖಾನ್ ನಿರ್ಧರಿಸಿದರು. ಇದು ಜಾಗತಿಕ ಮಾಧ್ಯಮಗಳ ಗಮನ ಸೆಳೆದ ದೊಡ್ಡ ಸುದ್ದಿಯಾಯಿತು.

ತಮ್ಮ ಪಕ್ಷದ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ, ‘ಈ ಸರ್ಕಾರದ ಭಾಗವಾಗಲು ನಮಗೆ ಇಷ್ಟವಿಲ್ಲ. ನಾನು ನಮ್ಮ ಎಲ್ಲ ಮುಖ್ಯಮಂತ್ರಿಗಳು ಮತ್ತು ಶಾಸಕಾಂಗ ಪಕ್ಷದ ನಾಯಕರನ್ನು ಸಂಪರ್ಕಿಸುತ್ತೇನೆ. ಎಲ್ಲ ವಿಧಾನಸಭೆಗಳಿಂದ ನಾವು ಹೊರಬರುತ್ತಿದ್ದೇವೆ. ನಮ್ಮದೇ ದೇಶವನ್ನು ನಾವು ಹಿಂಸಾಚಾರ, ಅಸ್ಥಿರತೆಗೆ ದೂಡುವ ಬದಲು ಈ ಭ್ರಷ್ಟ ಸರ್ಕಾರದಿಂದ ಹೊರಬರುವುದು ಒಳ್ಳೆಯದು’ ಎಂದು ಇಮ್ರಾನ್ ಖಾನ್ ಹೇಳಿದರು.

70 ವರ್ಷದ ನಾಯಕ ಇಮ್ರಾನ್ ಖಾನ್ ತಾವು ಅಧಿಕಾರ ಕಳೆದುಕೊಂಡ ನಂತರ ಹೊಸದಾಗಿ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹಾಲಿ ಪ್ರಧಾನಿ ಶೆಹ್​ಬಾಜ್ ಷರೀಫ್ ಮತ್ತು ಅವರ ಮಿತ್ರಪಕ್ಷಗಳ ನಾಯಕರನ್ನು ಭ್ರಷ್ಟರು ಎಂದು ಆರೋಪ ಮಾಡುವುದನ್ನು ಮುಂದುವರಿಸುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ ಇಮ್ರಾನ್ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಸ್ವತಃ ಇಮ್ರಾನ್ ಖಾನ್​ಗೂ ಗಾಯಗಳಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಇಮ್ರಾನ್ ಖಾನ್ ಚೇತರಿಸಿಕೊಂಡಿದ್ದರು. ‘ಭಯವೂ ಇಡೀ ದೇಶವನ್ನು ಗುಲಾಮಗಿರಿಗೆ ತಳ್ಳುತ್ತದೆ. ನಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ನಾವು ವಿಫಲರಾದೆವು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರ ಭಾಷಣ ಮುಂದುವರಿಯಿತು. ತಮ್ಮ ಭಾಷಣದಲ್ಲಿ ಸೂಫಿ ತತ್ವಜ್ಞಾನಿ ರೂಮಿ, ಶಿಯಾ ನಾಯಕ ಇಮ್ರಾನ್ ಹುಸೇನ್ ಮತ್ತು ಸೋವಿಯತ್ ಒಕ್ಕೂಟ ಛಿದ್ರಗೊಂಡ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಇಸ್ಲಾಮಾಬಾದ್​ವರೆಗಿನ ಜಾಥಾವನ್ನು ನಿರ್ವಹಿಸಲು ಅವರಿಗೆ ಆಗುವುದಿಲ್ಲ. ಅವರು ತಮ್ಮ ಮನಸ್ಸಿಗೆ ಬಂದಷ್ಟು ಪೊಲೀಸರನ್ನು ನಿಯೋಜಿಸಬಹುದು. ಆದರೆ ಇಸ್ಲಾಮಾಬಾದ್ ಪ್ರವೇಶಿಸಲಿರುವ ಸಾವಿರಾರು ಮಂದಿಯನ್ನು ನಿಭಾಯಿಸಲು, ತಡೆಯಲು ಅವರಿಂದ ಸಾಧ್ಯವಿಲ್ಲ. ಶ್ರೀಲಂಕಾದಂಥ ಪರಿಸ್ಥಿತಿಯನ್ನು ನಾವು ಇಲ್ಲಿಯೂ ನಿರ್ಮಿಸಬಹುದಿತ್ತು. ಆದರೆ ದೇಶದಲ್ಲಿ ಅರಾಜಕತೆ ಉಂಟಾಗಬಾರದು ಎನ್ನುವ ಕಾರಣಕ್ಕೆ ನಾವು ಇಸ್ಲಾಮಾಬಾದ್​ವರೆಗಿನ ಪಾದಯಾತ್ರೆಯನ್ನು ಮುಂದೂಡಿದೆ ಎಂದು ಅವರು ಹೇಳಿದರು. ನಮ್ಮ ದೇಶಕ್ಕೆ ಯಾವುದೇ ಹಾನಿ ಉಂಟಾಗುವುದು ನನಗೆ ಇಷ್ಟವಿಲ್ಲ ಎಂದರು.