Pakistan Crisis: ಪಾಕಿಸ್ತಾನದಲ್ಲಿ ಏಕಾಏಕಿ ಗೋಧಿ ಬೆಲೆಏರಿಕೆ; ವ್ಯಾಪಾರಿಗಳ ಆಟದಿಂದ ಸಂಕಷ್ಟಕ್ಕೆ ಸಿಲುಕಿದ ಸಾಮಾನ್ಯ ಜನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 10, 2023 | 4:21 PM

ಪಾಕಿಸ್ತಾನದ ಹಲವೆಡೆ 20 ಕೆಜಿ ತೂಗುವ ಒಂದು ಗೋಧಿ ಚೀಲವನ್ನು 3,100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

Pakistan Crisis: ಪಾಕಿಸ್ತಾನದಲ್ಲಿ ಏಕಾಏಕಿ ಗೋಧಿ ಬೆಲೆಏರಿಕೆ; ವ್ಯಾಪಾರಿಗಳ ಆಟದಿಂದ ಸಂಕಷ್ಟಕ್ಕೆ ಸಿಲುಕಿದ ಸಾಮಾನ್ಯ ಜನ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಗೋಧಿ ಪಡೆಯಲು ಮುಗಿಬಿದ್ದಿರುವ ಜನ
Image Credit source: AFP
Follow us on

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಣದುಬ್ಬರ (Pakistan Inflation) ನಿಯಂತ್ರಣಕ್ಕೆ ಸಿಗದಷ್ಟು ಹೆಚ್ಚಾಗಿದೆ. ಇದೀಗ ತಾನೆ ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ದೇಶಕ್ಕೆ ಈಗಷ್ಟೇ ಜಾಗತಿಕ ನೆರವು ಹರಿದು ಬರುತ್ತಿದೆ. ಈ ನಡುವೆ ಏಕಾಏಕಿ ಗೋಧಿಹಿಟ್ಟು ಕೊರತೆ ಕಾಣಿಸಿಕೊಂಡಿದ್ದು ನಿತ್ಯ ಬಳಕೆಯ ಆಹಾರ ಸಿದ್ಧಪಡಿಸುವುದು ಕಷ್ಟವಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನಸಾಮಾನ್ಯರಲ್ಲಿ ವ್ಯಾಪಕ ಆಕ್ರೋಶ ಮಡುಗಟ್ಟಿದೆ. ಖೈಬರ್ ಪಖ್ತುನ್​ವಾ, ಸಿಂಧ್ ಮತ್ತು ಬಲೂಚಿಸ್ತಾನದಲ್ಲಿ ಗೋಧಿಹಿಟ್ಟಿಗಾಗಿ (Wheet Flour) ಜನರು ಅಂಗಡಿಗಳ ಮುಂದೆ ಮುಗಿಬಿದ್ದಾಗ ಕಾಲ್ತುಳಿತಗಳು ಸಂಭವಿಸಿವೆ. ಗೋಧಿಹಿಟ್ಟು ಹಂಚಿಕೆ, ಮಾರಾಟದ ಮೇಲೆ ಪ್ರಸ್ತುತ ಪಾಕಿಸ್ತಾನದಲ್ಲಿ ಮಿತಿ ಹೇರಲಾಗಿದೆ. ರಿಯಾಯ್ತಿ ದರದಲ್ಲಿ ಅಲ್ಲಿನ ಸರ್ಕಾರವೇ ಗೋಧಿಹಿಟ್ಟು ವಿತರಣೆ ಮಾಡುತ್ತಿದ್ದು, ಪ್ರತಿದಿನ ಅಂಗಡಿಗಳ ಮುಂದೆ ಕಾದು ನಿಲ್ಲುವುದು ಲಕ್ಷಾಂತರ ಜನರ ನಿತ್ಯದ ಕಾಯಕವಾಗಿದೆ.

ಗೋಧಿಹಿಟ್ಟು ಹಂಚಿಕೆಗೆ ಬರುವ ಮಿನಿ ಟ್ರಕ್​ಗಳಿಗೆ ಶಸ್ತ್ರಸಜ್ಜಿತ ಗಾರ್ಡ್​ಗಳ ರಕ್ಷಣೆ ಒದಗಿಸಲಾಗಿದೆ. ಆದರೂ ಜನರು ಇಂಥ ಟ್ರಕ್​ಗಳು ಬಂದ ತಕ್ಷಣದ ಅದರ ಹತ್ತಿರಕ್ಕೆ ಓಡಿ, ನೂಕಾಟ-ತಳ್ಳಾಟ ನಡೆಸುತ್ತಿದ್ದಾರೆ. ಗೋಧಿಹಿಟ್ಟು ಮಾರಾಟಗಾರರ ಮೇಲೆ ಹಲ್ಲೆಗಳು ನಡೆದ ಹಲವು ಪ್ರಕರಣಗಳು ವರದಿಯಾಗಿವೆ. ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಎನಿಸಿದ ಕರಾಚಿ ನಗರದಲ್ಲಿ ಒಂದು ಕೆಜಿ ಗೋಧಿಹಿಟ್ಟು 140ರಿಂದ 160 ರೂಪಾಯಿಗೆ (ಪಾಕಿಸ್ತಾನದ ಕರೆನ್ಸಿ) ಮಾರಾಟವಾಗುತ್ತಿದೆ. ಇಸ್ಲಾಮಾಬಾದ್ ಮತ್ತು ಪೇಷಾವರ ನಗರಗಳಲ್ಲಿ ಗೋಧಿಹಿಟ್ಟಿನ ಬೆಲೆಯು 1,50 ರೂಪಾಯಿ ಮುಟ್ಟಿದೆ. ದುರ್ಭಿಕ್ಷದಲ್ಲಿ ಲಾಭ ಪಡೆಯಲೆಂಬ ಹುನ್ನಾರ ನಡೆಸಿರುವ ಪಂಜಾಬ್ ಪ್ರಾಂತ್ಯದ ಮಿಲ್ ಮಾಲೀಕರು ಏಕಾಏಕಿ ಗೋಧಿ ಮತ್ತು ಗೋಧಿಹಿಟ್ಟಿನ ದರ ಹೆಚ್ಚಿಸಿದ್ದಾರೆ.

‘ಬಲೂಚಿಸ್ತಾನದಲ್ಲಿ ಗೋಧಿಯ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ. ತಕ್ಷಣಕ್ಕೆ 4 ಲಕ್ಷ ಚೀಲಗಳಷ್ಟು ಗೋಧಿ ಬೇಕಿದೆ. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಷಮಿಸಬಹುದು’ ಎಂದು ಬಲೂಚಿಸ್ತಾನ್ ಪ್ರಾಂತ್ಯದ ಆಹಾರ ಸಚಿವ ಝಮಾರಕ್ ಅಚಕ್​ಝೈ ಹೇಳಿದ್ದಾರೆ. ಪಾಕಿಸ್ತಾನದ ಮತ್ತೊಂದು ದೊಡ್ಡ ಪ್ರಾಂತ್ಯವಾಗಿರುವ ಖೈಬರ್-ಪಂಖ್ತುನ್​ವಾದಲ್ಲಿಯೂ ಪರಿಸ್ಥಿತಿ ಹೀಗೆಯೇ ಇದೆ. 20 ಕೆಜಿ ತೂಗುವ ಒಂದು ಗೋಧಿ ಚೀಲವನ್ನು 3,100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಗೋಧಿಯ ಕಳ್ಳದಾಸ್ತಾನು, ಅಕ್ರಮ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಿಂಧ್ ಪ್ರಾಂತ್ಯದ ಮಿರ್​ಪುರ್​ಖಾಸ್​ ಎಂಬಲ್ಲಿ ಸರ್ಕಾರವು ರಿಯಾಯ್ತಿ ದರದಲ್ಲಿ ವಿತರಿಸುತ್ತಿದ್ದ ಗೋಧಿ ಪಡೆಯಲು ಬಂದ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಕಾಲ್ತುಳಿತದಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾದರು. 200 ಚೀಲ ಗೋಧಿಗಳನ್ನು ವಿತರಿಸಲೆಂದು ತರುತ್ತಿದ್ದ ಲಾರಿಗಳಿಗೆ ಜನರು ಮುತ್ತಿಗೆ ಹಾಕಿದ್ದರಿಂದ ಈ ದುರ್ಘಟನೆ ಸಂಭವಿಸಿತು.

ಗೋಧಿ ಪಡೆಯಲೆಂದು ಟ್ರಕ್ ಏರಿದ್ದ 40 ವರ್ಷದ ಕಾರ್ಮಿಕ ಹರ್​ಸಿಂಗ್ ಕೊಹ್ಲಿ ಎನ್ನುವವರು ಟ್ರಕ್ ಮೇಲಿಂದ ಕೆಳಗೆ ಬಿದ್ದರು. ಸುತ್ತಲಿದ್ದ ಜನರು ಅವರನ್ನು ತುಳಿದಿದ್ದರಿಂದ ಅವರ ಜೀವ ಹೋಯಿತು. ಈ ಅವ್ಯವಸ್ಥೆಗೆ ಆಹಾರ ಇಲಾಖೆಯೇ ಕಾರಣ. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮೃತ ಕೊಹ್ಲಿ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ. ಸಿಂಧ್ ಪ್ರಾಂತ್ಯದ ಸಕ್ರಾಂದ್​ ಪಟ್ಟಣದಲ್ಲಿಯೂ ಗೋಧಿ ಗಿರಣಿಯೊಂದ ಮೇಲೆ ಜನರು ಮುಗಿಬಿದ್ದಿದ್ದರಿಂದ ಇಬ್ಬರು ಮಹಿಳೆಯರು ಮತ್ತು ಓರ್ವ ಅಪ್ರಾಪ್ತ ಬಾಲಕಿ ಗಾಯಗೊಂಡಿದ್ದಾರೆ. ಸರ್ಕಾರವು ರಿಯಾಯ್ತಿ ದರದಲ್ಲಿ ಗೋಧಿ ವಿತರಿಸಲು ಈ ಗಿರಣಿಗೆ ಸೂಚಿಸಿತ್ತು.

ಪ್ರವಾಹದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ದೇಶದಲ್ಲಿ ಹೊಸದಾಗಿ ಎದುರಾಗಿರುವ ಗೋಧಿ ಬಿಕ್ಕಟ್ಟಿನಿಂದ ಜನರು ಹೈರಾಣಾಗಿದ್ದಾರೆ. ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ. ಗೋಧಿ ಕೊರತೆಯಿಂದ ಕೇವಲ ಬಡವರು ಮಾತ್ರವಲ್ಲ, ಶ್ರೀಮಂತರೂ ಸಂಕಷ್ಟಕ್ಕೆ ಸಿಲುಕಿದಿದ್ದಾರೆ. ಒಬ್ಬ ವ್ಯಕ್ತಿಯು ವಾರದಲ್ಲಿ ಒಮ್ಮೆ ಮಾತ್ರ ಗೋಧಿಹಿಟ್ಟು ಖರೀದಿಸಬಹುದು ಎಂಬ ನಿಯಮವನ್ನು ಇದೀಗ ಪಾಕಿಸ್ತಾನದಲ್ಲಿ ಜಾರಿಗೊಳಿಸಲಾಗಿದೆ. ಗೋಧಿಹಿಟ್ಟಿನ ಬೆಲೆಯು ಹೆಚ್ಚಳವಾಗಿರುವುದರಿಂದ ಚಪಾತಿ, ರೊಟ್ಟಿ ಮತ್ತು ಬೇಕರಿ ಉತ್ಪನ್ನಗಳ ಬೆಲೆಗಳೂ ಹೆಚ್ಚಾಗಿವೆ. ಹಲವು ಹೊಟೆಲ್​ಗಳಲ್ಲಿ ಇದೇ ಕಾರಣಕ್ಕಾಗಿ ಪ್ರತಿದಿನ ಗ್ರಾಹಕರು ಮತ್ತು ಮಾಲೀಕರೊಂದಿಗೆ ವಾಗ್ವಾದಗಳು ನಡೆಯುತ್ತಿವೆ.

ಇದನ್ನೂ ಓದಿ: Pakistan Economic Crisis: ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು; ಮಾಲ್, ಮಾರ್ಕೆಟ್​​ಗಳನ್ನು ಬೇಗನೇ ಮುಚ್ಚಲು ಆದೇಶ

ಮತ್ತಷ್ಟು ವಿಶ್ವ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Tue, 10 January 23