Kannada News World Pakistan PM Imran Khan Calls Cabinet Meet at his Residence at 9 PM Pak Supreme Court Order Challenged 10 Facts
Pakistan Crisis: ಅವಿಶ್ವಾಸ ನಿರ್ಣಯದ ನಡುವೆ ತನ್ನ ನಿವಾಸದಲ್ಲಿ ಸಚಿವ ಸಂಪುಟ ಸಭೆ ಕರೆದ ಪಾಕ್ ಪ್ರಧಾನಿ ಇಮ್ರಾನ್ ಖಾನ್
Pakistan Political Crisis: ಇಂದು ರಾತ್ರಿ ಸುಮಾರು 8.30ರೊಳಗೆ ಪಾಕಿಸ್ತಾನದ ಸಂಸತ್ನಲ್ಲಿ ಅವಿಶ್ವಾಸ ನಿರ್ಣಯ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಇಮ್ರಾನ್ ಖಾನ್ ಅವರು ಅಧಿಕಾರದಲ್ಲಿ ಉಳಿಯುವ ಸಾಧ್ಯತೆ ಕಡಿಮೆ. ಆದರೂ ಅವರು ರಾತ್ರಿ 9 ಗಂಟೆಗೆ ಸಂಪುಟ ಸಭೆ ಕರೆದಿರುವುದು ಅಚ್ಚರಿ ಮೂಡಿಸಿದೆ.
ಇಮ್ರಾನ್ ಖಾನ್
Follow us on
ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಇಂದು ರಾತ್ರಿ 9 ಗಂಟೆಗೆ (ಸ್ಥಳೀಯ ಕಾಲಮಾನದ ಪ್ರಕಾರ) ತಮ್ಮ ನಿವಾಸದಲ್ಲಿ ಸಂಪುಟ ಸಚಿವರ ಸಭೆಯನ್ನು ಕರೆದಿದ್ದಾರೆ. ಆದರೆ. ಅದಕ್ಕೂ ಮೊದಲು ನಡೆಯಲಿರುವ ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್ ಖಾನ್ ಸರ್ಕಾರವು ಸೋಲನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಈ ಮೂಲಕ ಇಮ್ರಾನ್ ಖಾನ್ ಪಾಕಿಸ್ತಾನದ ಇತಿಹಾಸದಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವ ಮೊದಲ ಪ್ರಧಾನಿಯಾಗಲಿದ್ದಾರೆ. 342 ಸದಸ್ಯ ಬಲದ ಪಾಕಿಸ್ತಾನದ ಸಂಸತ್ನಲ್ಲಿ (Pakistan Assembly) 172 ಸದಸ್ಯರು ಇಮ್ರಾನ್ ಖಾನ್ ಅವರ ಪದಚ್ಯುತಿಗೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಇಮ್ರಾನ್ ಖಾನ್ ವಿಶ್ವಾಸಮತಯಾಚನೆ ಬಳಿಕ ಅಧಿಕಾರದಿಂದ ಕೆಳಗಿಳಿಯುವುದು ಖಚಿತ ಎನ್ನಲಾಗಿದೆ. ಈ ಕುರಿತ 10 ಪ್ರಮುಖ ವಿದ್ಯಮಾನಗಳು ಹೀಗಿವೆ.
ಇಂದು ರಾತ್ರಿ ಸುಮಾರು 8.30ರೊಳಗೆ ಪಾಕಿಸ್ತಾನದ ಸಂಸತ್ನಲ್ಲಿ ಅವಿಶ್ವಾಸ ನಿರ್ಣಯ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಇಮ್ರಾನ್ ಖಾನ್ ಅವರು ಅಧಿಕಾರದಲ್ಲಿ ಉಳಿಯುವ ಸಾಧ್ಯತೆ ಕಡಿಮೆ ಇದೆ. ಆದರೂ ಅವರು ರಾತ್ರಿ 9 ಗಂಟೆಗೆ ಸಂಪುಟ ಸಭೆಯನ್ನು ಕರೆದಿರುವುದು ಅಚ್ಚರಿ ಮೂಡಿಸಿದೆ.
ಇನ್ನೊಂದೆಡೆ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸರ್ಕಾರವು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ. ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಅಸಂವಿಧಾನಿಕ ಎಂದು ವಜಾಗೊಳಿಸಿದ ಉಪ ಸ್ಪೀಕರ್ ತೀರ್ಪನ್ನು ಘೋಷಿಸುವ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.
ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷವು ಈ ತಿಂಗಳ ಆರಂಭದಲ್ಲಿ ಅಸೆಂಬ್ಲಿಯಲ್ಲಿ ಬಹುಮತವನ್ನು ಕಳೆದುಕೊಂಡಿತು. ಪ್ರಮುಖ ಒಕ್ಕೂಟದ ಪಾಲುದಾರರಾದ ಏಳು ಶಾಸಕರು ಇಮ್ರಾನ್ ಖಾನ್ ವಿರುದ್ಧ ಮತ ಚಲಾಯಿಸುವುದಾಗಿ ಘೋಷಿಸಿದ್ದಾರೆ. ಆಡಳಿತ ಪಕ್ಷದ ಹತ್ತಕ್ಕೂ ಹೆಚ್ಚು ಶಾಸಕರು ಅಡ್ಡಗಾಲು ಹಾಕುವ ಸೂಚನೆ ನೀಡಿದ್ದಾರೆ.
342 ಸ್ಥಾನಗಳ ಅಸೆಂಬ್ಲಿಯಲ್ಲಿ 172ಕ್ಕೂ ಹೆಚ್ಚು ಜನರು ಇಮ್ರಾನ್ ಖಾನ್ ಅವರ ಪದಚ್ಯುತಿಗೆ ಒತ್ತಾಯಿಸಿದ್ದಾರೆ. ಆಡಳಿತಾರೂಢ ಮೈತ್ರಿಪಕ್ಷಗಳ ಸಹಾಯದಿಂದ ವಿರೋಧ ಪಕ್ಷಗಳಿಗೆ ಈಗ ಆಡಳಿತಾರೂಢ ಪಕ್ಷಕ್ಕಿಂತ ಹೆಚ್ಚಿನ ಸ್ಥಾನ ಸಿಕ್ಕಿದ್ದು ಈ ಮೂಲಕ ಪಾಕಿಸ್ತಾನ ಟೆಹ್ರೀಕ್-ಇ-ಇನ್ಸಾಫ್(PTI) ಪಕ್ಷದ 69 ವರ್ಷದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಪ್ರಧಾನಮಂತ್ರಿ ಹುದ್ದೆಯಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ.
ಪಾಕಿಸ್ತಾನದ ಸಾರ್ವಭೌಮತ್ವವನ್ನು ರಕ್ಷಿಸಲು ಪಾಕಿಸ್ತಾನದ ಜನರಿಗೆ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ. ವಿದೇಶಿ ಶಕ್ತಿಗಳು ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿವೆ ಮತ್ತು ಇದನ್ನು ಸಾಧಿಸಲು ಪಾಕಿಸ್ತಾನದ ಶಾಸಕರನ್ನು ಕುರಿಗಳಂತೆ ವ್ಯಾಪಾರ ಮಾಡಲಾಗುತ್ತಿದೆ ಎಂದು ಪಿಎಂ ಇಮ್ರಾನ್ ಖಾನ್ ಹೇಳಿದ್ದಾರೆ.
“ಅಮೆರಿಕದ ರಾಜತಾಂತ್ರಿಕರು ನಮ್ಮ ದೇಶದ ಜನರನ್ನು ಭೇಟಿಯಾಗುತ್ತಿದ್ದಾರೆ ಎಂದು ನಮಗೆ ತಿಳಿಯಿತು. ಈ ಬಗ್ಗೆ ನಾವು ಪೂರ್ಣ ಯೋಜನೆಯನ್ನು ತಿಳಿದುಕೊಂಡಿದ್ದೇವೆ” ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ವಿದೇಶಿ ಶಕ್ತಿಗಳು ವಿಧೇಯ ಪ್ರಧಾನಿಯನ್ನು ಬಯಸುತ್ತವೆ ಮತ್ತು ಅದಕ್ಕಾಗಿಯೇ ಅವರು ನನ್ನನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಪಿಎಂ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ರಾಜಕೀಯ ಪರಿಸ್ಥಿತಿಯನ್ನು ಅವರು ಪಾಕಿಸ್ತಾನದ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಕರೆದಿದ್ದಾರೆ. ನಾವು 22 ಕೋಟಿ ಜನರಿದ್ದು, ಹೊರಗಿನಿಂದ ಬಂದವರು 22 ಕೋಟಿ ಜನರಿಗೆ ಈ ಆದೇಶ ನೀಡುತ್ತಿರುವುದು ಅಪಮಾನವಾಗಿದೆ ಎಂದಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಲು ಸಂಸತ್ತಿನ ಮತದಾನವನ್ನು ತಡೆಯುವ ಪಿಎಂ ಖಾನ್ ಅವರ ನಡೆಯನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿರುವುದು ‘ಅಸಂವಿಧಾನಿಕ’ ಎಂದು ಪಾಕಿಸ್ತಾನ ಸುಪ್ರೀಂ ಕೋರ್ಟ್ ಹೇಳಿದೆ. ಹಾಗೇ ಇಂದು ಅಧಿವೇಶನವನ್ನು ಕರೆಯಲು ಸ್ಪೀಕರ್ಗೆ ಆದೇಶ ನೀಡಿತು.
ಇಮ್ರಾನ್ ಖಾನ್ ವಿಶ್ವಾಸ ಮತಯಾಚನೆ ವೇಳೆ ಸೋತರೆ, ವಿರೋಧ ಪಕ್ಷವು ತನ್ನದೇ ಆದ ಪ್ರಧಾನ ಮಂತ್ರಿಯನ್ನು ನಾಮನಿರ್ದೇಶನ ಮಾಡಬಹುದು. ಆಗಸ್ಟ್ 2023ರವರೆಗೆ ಹೊಸ ಪ್ರಧಾನಿ ಅಧಿಕಾರವನ್ನು ನಡೆಸಬಹುದು. ಆ ದಿನಾಂಕದೊಳಗೆ ಹೊಸ ಚುನಾವಣೆಗಳು ನಡೆಯಬೇಕು.
ಪಾಕಿಸ್ತಾನದ ಯಾವೊಬ್ಬ ಪ್ರಧಾನಿಯೂ ಇದುವರೆಗೆ ಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ಗಮನಾರ್ಹ.