ತಲೆ ಕೂದಲನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳುತ್ತಿರುವ ಉಕ್ರೇನ್ ಯುವತಿಯರು; ಅತ್ಯಾಚಾರದಿಂದ ಪಾರಾಗಲು ಈ ನಿರ್ಧಾರ
ಇಲ್ಲಿನ ಹಳ್ಳಿಯೊಂದರಲ್ಲಿ ಇಬ್ಬರು ಯುವತಿಯರನ್ನು ರಷ್ಯಾ ಸೈನಿಕರು ರೇಪ್ ಮಾಡಿದ್ದಾರೆ. ಅವರಿಬ್ಬರೂ ಸಹೋದರಿಯರಾಗಿದ್ದು ಒಬ್ಬಳಿಗೆ 15 ವರ್ಷ, ಮತ್ತೊಬ್ಬಾಕೆಗೆ 16 ವರ್ಷ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಶುರು ಮಾಡಿ ತಿಂಗಳ ಮೇಲಾಯಿತು. ಉಕ್ರೇನ್ನಲ್ಲಿ ಒಟ್ಟಾರೆ ಪರಿಸ್ಥಿತಿ ಹದಗೆಟ್ಟಿದೆ. ಇತ್ತ ರಷ್ಯಾದ ಆರ್ಥಿಕ ಸ್ಥಿತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತರ ದೇಶಗಳೊಂದಿಗಿನ ಸ್ನೇಹ ಕುಂದುತ್ತ ಬರುತ್ತಿದೆ. ಇಷ್ಟಾದರೂ ರಷ್ಯಾ ಯುದ್ಧ ನಿಲ್ಲಿಸುತ್ತಿಲ್ಲ. ಇನ್ನೊಂದೆಡೆ ಉಕ್ರೇನ್ ಪುಟ್ಟ ದೇಶವಾದರೂ ರಷ್ಯಾಕ್ಕೆ ತೀವ್ರ ಪೈಪೋಟಿ ಒಡ್ಡುತ್ತಿದೆ. ರಷ್ಯಾ ಸರಿಯಾಗಿ ಯುದ್ಧಮಾಡುತ್ತಿಲ್ಲ. ಯುದ್ಧಾಪರಾಧಗಳನ್ನು ಎಸಗುತ್ತಿದೆ ಎಂಬ ಆರೋಪವನ್ನು ಗಟ್ಟಿಧ್ವನಿಯಲ್ಲಿ ಮಾಡುತ್ತಿದೆ. ಅದರಲ್ಲೂ ರಷ್ಯಾ ಸೈನಿಕರು ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಉಕ್ರೇನ್ನ ರಾಜಧಾನಿ ಕೀವ್ನಿಂದ 50 ಮೈಲುಗಳಷ್ಟು ದೂರದಲ್ಲಿ ಇವಾಂಕಿವ್ ಎಂಬ ನಗರವಿದೆ. ಅಲ್ಲಂತೂ ಹದಿಹರೆಯದ ಯುವತಿಯರೆಲ್ಲ ತಮ್ಮ ತಲೆಕೂದಲನ್ನು ತುಂಬ ಸಣ್ಣದಾಗಿ ಕತ್ತರಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಕೇಳಿದರೆ ಮನ ಮಿಡಿಯದೆ ಇರದು. ಇಂಥದ್ದೊಂದು ಕೆಟ್ಟ ಸನ್ನಿವೇಶದಲ್ಲಿ ಅವರೆಲ್ಲ ಸಿಲುಕಿದ್ದಾರಾ ಎಂದು ಅನ್ನಿಸುತ್ತದೆ. ‘ನಮ್ಮ ನಗರದಲ್ಲಿ ಯುವತಿಯರು ಕೂದಲನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳುತ್ತಿದ್ದಾರೆ. ಕಾರಣ ಕೇಳಿದರೆ, ರಷ್ಯಾದ ಸೈನಿಕರು ಚೆಂದನೆಯ ಹುಡುಗಿಯರು, ಮಹಿಳೆಯರನ್ನು ಯಾರನ್ನೂ ಬಿಡದೆ ಅತ್ಯಾಚಾರ ಮಾಡುತ್ತಿದ್ದಾರೆ. ನಾವೂ ಅಂದವಾಗಿ ಕಂಡರೆ ನಮ್ಮನ್ನೂ ಬಿಡುವುದಿಲ್ಲ. ಹೀಗಾಗಿ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ನಮ್ಮನ್ನು ನಾವು ಕುರೂಪಗೊಳಿಸಿಕೊಳ್ಳುತ್ತಿದ್ದೇವೆ’ ಎಂಬುದಾಗಿ ಹೇಳುತ್ತಿದ್ದಾರೆ ಎಂದು ಇವಾಂಕಿವ್ನ ಮೇಯರ್ ಮರೀನಾ ಬೆಸ್ಚಾಸ್ಟ್ನಾ ತಿಳಿಸಿದ್ದಾರೆ.
ಹಾಗೇ, ಬೆಸ್ಚಾಟ್ನಾ ಅವರು ರಷ್ಯಾ ಸೈನಿಕರ ಕ್ರೌರ್ಯತೆಯನ್ನೂ ಬಿಚ್ಚಿಟ್ಟಿದ್ದಾರೆ. ಇಲ್ಲಿನ ಹಳ್ಳಿಯೊಂದರಲ್ಲಿ ಇಬ್ಬರು ಯುವತಿಯರನ್ನು ರಷ್ಯಾ ಸೈನಿಕರು ರೇಪ್ ಮಾಡಿದ್ದಾರೆ. ಅವರಿಬ್ಬರೂ ಸಹೋದರಿಯರಾಗಿದ್ದು ಒಬ್ಬಳಿಗೆ 15 ವರ್ಷ, ಮತ್ತೊಬ್ಬಾಕೆಗೆ 16 ವರ್ಷ. ಇವರ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಿ, ಬೇಸ್ಮೆಂಟ್ಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾರೆ. ಇದನ್ನೆಲ್ಲ ನೋಡಿ ಉಳಿದ ಯುವತಿಯರು ಹೆದರಿಹೋಗಿದ್ದಾರೆ. ತಮ್ಮ ಕೂದಲನ್ನು ಅತ್ಯಂತ ಚಿಕ್ಕದಾಗಿ ಕಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾಗಿ ITV News ವರದಿ ಮಾಡಿದೆ.
ಉಕ್ರೇನ್ನಲ್ಲಿ ಫೆ.24ರಿಂದಲೂ ರಷ್ಯಾ ಯುದ್ಧ ಮಾಡುತ್ತಿದೆ. ರಷ್ಯನ್ ದೌರ್ಜನ್ಯಕ್ಕೆ ಹೆದರಿ ಅಲ್ಲಿನ ಸುಮಾರು 4 ಮಿಲಿಯನ್ ನಾಗರಿಕರು ದೇಶ ತೊರೆದು ಹೋಗಿದ್ದಾರೆ. ಬುಚಾದಲ್ಲಂತೂ ನಾಗರಿಕರ ಹೆಣ ಬೀದಿಬೀದಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಸದ್ಯ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆದೇಶದ ಮೇರೆಗೆ ಕೀವ್ನಿಂದ ಸೇನೆ ಹಿಂದಕ್ಕೆ ಬಂದಿದೆ.
ಇದನ್ನೂ ಓದಿ: ರಷ್ಯಾದಲ್ಲಿ ಐಷಾರಾಮಿ ಬ್ರ್ಯಾಂಡ್ ವಸ್ತುಗಳ ಮಾರಾಟಕ್ಕೆ ನಿಷೇಧ; ಬ್ಯಾಗ್ ಕತ್ತರಿಸಿ ಪ್ರತಿಭಟಿಸಿದ ರಷ್ಯನ್ ಮಹಿಳೆಯರು
Published On - 5:19 pm, Sat, 9 April 22