ಬೆಲ್ಜಿಯನ್ ಪ್ರಾಧಿಕಾರವೊಂದರ ಆದೇಶದಂತೆ ಕಿಂಡರ್ ಚಾಕೊಲೇಟ್ ತಯಾರಿಕಾ ಘಟಕ ಮುಚ್ಚಿದ ಫೆರೆರೊ ಕಂಪನಿ
ಕಂಪನಿಯು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಸಾಲ್ಮೊನೆಲ್ಲಾ ಪ್ರಕಣಗಳ ಹೆಚ್ಚುತ್ತಿರುವ ಬಗ್ಗೆ ಕ್ಷಮಾಪಣೆ ಯಾಚಿಸಿದೆ ಮತ್ತು ಅರ್ಲಾನ್ ನಗರದ ಆಗ್ನೇಯ ಭಾಗಕ್ಕಿರುವ ತನ್ನ ಕಂಪನಿಯನ್ನು ಮುಚ್ಚಬೇಕೆನ್ನುವ ಪ್ರಾಧಿಕಾರದ ಆದೇಶವನ್ನು ಅಂಗೀಕರಿಸಿದೆ.

ಯುಎಸ್ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಸಾಲ್ಮೊನೆಲ್ಲಾ (Salmonella) ಸೋಂಕಿನ ಪ್ರಕರಣಗಳಿಗೆ ಕಿಂಡರ್ ಚಾಕೊಲೇಟ್ (Kinder chocolate) ಕಾರಣವಾಗುತ್ತಿರುವ ಶಂಕೆಯ ಹಿನ್ನೆಲೆಯ್ಲಲಿ ಸದರಿ ಚಾಕೊಲೇಟ್ ಫ್ಯಾಕ್ಟರಿಯನ್ನು ಮುಚ್ಚುವಂತೆ ಬೆಲ್ಜಿಯನ್ ಪ್ರಾಧಿಕಾರವೊಂದು ಶುಕ್ರವಾರ ಆದೇಶ ಹೊರಡಿಸಿದೆ. ಈ ನಿರ್ಣಯ ಮತ್ತು ಜನರ ಅರೋಗ್ಯದ ಬಗ್ಗೆ ವ್ಯಕ್ತವಾಗುತ್ತಿರುವ ಕಳವಳಕಾರಿ ಆಂಶಗಳು ಇಟಲಿ ಮೂಲದ ದೈತ್ಯ ಕಾನ್ಫೆಕ್ಷನರಿ ಕಂಪನಿ ಫೆರೆರೊಗೆ (Ferrero) ಭಾರಿ ಹೊಡೆತ ಬಿದ್ದಿದೆ. ಈಸ್ಟರ್ ಹಬ್ಬಕ್ಕೆ ಕೆಲವೇ ದಿನ ಬಾಕಿಯಿದೆ ಮತ್ತು ಹಬ್ಬದ ಸಂದರ್ಭದಲ್ಲಿ ಕಿಂಡರ್ ಚಾಕೊಲೇಟ್ ಗಳಿಗೆ ವಿಶ್ವದಾದ್ಯಂತ ಸೂಪರ್ ಮಾರ್ಕೆಟ್ ಗಳಲ್ಲಿ ಬಹಳ ಬೇಡಿಕೆ ಇರುವುದರಿಂದ ಪ್ರಾಧಿಕಾರದ ನಿರ್ಣಯ ಕಂಪನಿಯನ್ನು ಆಘಾತಕ್ಕೊಳಪಡಿಸಿದೆ.
ಕಂಪನಿಯು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಸಾಲ್ಮೊನೆಲ್ಲಾ ಪ್ರಕಣಗಳ ಹೆಚ್ಚುತ್ತಿರುವ ಬಗ್ಗೆ ಕ್ಷಮಾಪಣೆ ಯಾಚಿಸಿದೆ ಮತ್ತು ಅರ್ಲಾನ್ ನಗರದ ಆಗ್ನೇಯ ಭಾಗಕ್ಕಿರುವ ತನ್ನ ಕಂಪನಿಯನ್ನು ಮುಚ್ಚಬೇಕೆನ್ನುವ ಪ್ರಾಧಿಕಾರದ ಆದೇಶವನ್ನು ಅಂಗೀಕರಿಸಿದೆ.
‘ಕಳೆದ ಕೆಲವು ಗಂಟೆಗಳ ಸಂಶೋಧನೆಗಳನ್ನು ಆಧರಿಸಿ ಫೆರೆರೊ ಸಂಸ್ಥೆ ಒದಗಿಸಿದ ಮಾಹಿತಿಯು ಅಪೂರ್ಣವಾಗಿದೆ, ಹಾಗಾಗಿ ಸ್ಥಾವರವನ್ನು ಮುಚ್ಚಲು ಆದೇಶಿಸಲಾಗಿದೆ,’ ಎಂದು ಬೆಲ್ಜಿಯಂನ ಆಹಾರ ಸುರಕ್ಷತಾ ಪ್ರಾಧಿಕಾರ, ಎ ಎಫ್ ಎಸ್ ಸಿ ಎ ಹೇಳಿಕೆಯೊಂದರಲ್ಲಿ ತಿಳಿಸಿದೆ
ಕಂಪನಿಯ ಜನಪ್ರಿಯ ಕಿಂಡರ್ ಬ್ರ್ಯಾಂಡ್‌ನ ಒಟ್ಟಾರೆ ಉತ್ಪಾದನೆಯನ್ನು ಸ್ಥಗೊಳಿಸುವಂತೆ ಎ ಎಫ್ ಎಸ್ ಸಿ ಎ ತನ್ನ ಆದೇಶದಲ್ಲಿ ಫೆರೆರೊ ಕಂಪನಿಗೆ ಹೇಳಿದೆ. ‘ಫೆರೆರೊ ಕಂಪನಿಯು ಆಹಾರ ಸುರಕ್ಷತೆ ಎಲ್ಲಾ ನಿಯಮಗಳನ್ನು ಪಾಲಿಸುವ ಮತ್ತು ಅಗತ್ಯ ಕ್ರಮಗಳನ್ನು ಅನುಸರಿಸುವ ತೀರ್ಮಾನ ತೆಗೆದುಕೊಂಡಲ್ಲಿ ಮಾತ್ರ ಉತ್ಪಾದನಾ ಘಟಕ ಪುನರಾರಂಭಿಸಲು ಅನುಮತಿ ನೀಡಲಾಗುತ್ತದೆ,’ ಎಂದು ಪ್ರಾಧಿಕಾರದ ಹೇಳಿಕೆಯಲ್ಲಿ ತಿಳಿಸಿಲಾಗಿದೆ.
ಬೆಲ್ಜಿಯಂ ಕೃಷಿ ಸಚಿವ ಡೇವಿಡ್ ಕಾರ್ನಿವಾಲ್ ಅವರು, ‘ಇಂಥ ನಿರ್ಣಯಗಳನ್ನು ಸುಲಭವಾಗಿ ತೆಗದುಕೊಳ್ಳಲು ಬರೋದಿಲ್ಲ, ಆದರೆ ಪ್ರಸಕ್ತ ವಿದ್ಯಮಾನಗಳು ಆ ಅನಿವಾರ್ಯತೆಯನ್ನ ಸೃಷ್ಟಿಸಿವೆ. ನಮ್ಮ ದೇಶದ ನಾಗರಿಕರ ಆಹಾರ ಸುರಕ್ಷತೆಯನ್ನು ಯಾವತ್ತೂ ಕಡೆಗಣಿಸಲಾಗದು,’ ಅಂತ ಹೇಳಿದ್ದಾರೆ.
‘ಸಕಾಲದಲ್ಲಿ ಮಾಹಿತಿಯನ್ನು ಪಡೆದು ಅದನ್ನು ಹಂಚಿಕೊಳ್ಳುವಲ್ಲಿ ಆಗಿರುವ ವಿಳಂಬಕ್ಕೆ ಆಂತರಿಕ ಅಸಾಮರ್ಥ್ಯ ಕಾರಣ ಎಂದು ಒಪ್ಪಿಕೊಳ್ಳುತ್ತೇವೆ,’ ಎಂದು ಫೆರೆರೊ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ತಕ್ಷಣದಿಂದ ಜಾರಿಗೆ ಬರುವ,’ ಹಾಗೆ ಸಂಸ್ಥೆಯ ಕಿಂಡರ್ ಸರ್ಪ್ರೈಸ್, ಕಿಂಡರ್ ಮಿನಿ ಎಗ್ಸ್, ಕಿಂಡರ್ ಸರ್ಪ್ರೈಸ್ ಮ್ಯಾಕ್ಸಿ 100 ಗ್ರಾಂ ಮತ್ತು ಕಿಂಡರ್ ಸ್ಕೋಕೋ-ಬಾನ್ಸ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
‘ತಲೆದೋರಿರುವ ಸಮಸ್ಯೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಈ ಸಂದರ್ಭದಲ್ಲಿ ನಮ್ಮೆಲ್ಲ ಗ್ರಾಹಕರಿಗೆ ಮತ್ತು ನಮ್ಮ ಬಿಸಿನೆಸ್ ಪಾಲುದಾರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಹಾಗೂ ಆಹಾರ ಸುರಕ್ಷತಾ ಪ್ರಾಧಿಕಾರ ನೀಡಿರುವ ಅಮೂಲ್ಯ ಮಾರ್ಗದರ್ಶನಕ್ಕೆ ಕೃತಜ್ಞತೆಯುಳ್ಳವರಾಗಿದ್ದೇವೆ,’ ಎಂದು ಫೆರೆರೊ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನ್ಯುಟೆಲ್ಲಾ ಮತ್ತು ಟಿಕ್ ಟಾಕ್ ಕ್ಯಾಂಡಿಗಳನ್ನೂ ಉತ್ಪಾದಿಸುವ ಕಂಪನಿಯು ಬೆಲ್ಜಿಯಂನಲ್ಲಿ ತಯಾರಿಸಲ್ಪಟ್ಟು ಯುಎಸ್ ಗೆ ರಫ್ತಾಗಿದ್ದ ಕಿಂಡರ್ ಚಾಕೊಲೇಟ್ ಗಳ ಕೆಲವು ವೆರೈಟಿಗಳನ್ನು ವಾಪಸ್ಸು ತರಿಸಿಕೊಂಡಿದೆ.
ಕಾರ್ಖಾನೆಯ ಉತ್ಪನ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಯುನೈಟೆಡ್ ಕಿಂಗ್‌ಡಮ್ ಮತ್ತು ಹಲವಾರು ಯುರೋಪಿಯನ್ ದೇಶಗಳಿಂದ ದಾಸ್ತಾನನ್ನು ವಾಪಸ್ಸು ತರಿಸಿಕೊಂಡ ಬಳಿಕ ಯುಎಸ್ ನಿಂದಲೂ ಹಿಂಪಡೆಯಲಾಗಿದೆ
ಸಾಲ್ಮೊನೆಲ್ಲಾ ಒಂದು ರೀತಿಯ ಬ್ಯಾಕ್ಟೀರಿಯಾವಾಗಿದ್ದು ಅದು ಅತಿಸಾರ, ಜ್ವರ ಮತ್ತು ಮಾನವರಲ್ಲಿ ಹೊಟ್ಟೆ ಸೆಳೆತ ಮೊದಲಾದ ರೋಗಲಕ್ಷಣಗಳನ್ನು ಉಂಟುಮಾಡಬಹುದಾಗಿದೆ ಮತ್ತು ಇದು ಆಹಾರದಿಂದ ಹರಡುವ ಸಾಮಾನ್ಯ ಸೋಂಕುಗಳಲ್ಲಿ ಒಂದಾಗಿದೆ.
ಯುನೈಟೆಡ್ ಕಿಂಗ್ಡಮ್ನಾದ್ಯಂತ ಒಟ್ಟು 63 ಸಾಲ್ಮೊನೆಲ್ಲಾ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಬ್ರಿಟನ್ನಿನ ಆಹಾರ ಗುಣಮಟ್ಟ ಸಂಸ್ಥೆ ಹೇಳಿದೆ.
ಫ್ರೆಂಚ್ ಸಾರ್ವಜನಿಕ ಅರೋಗ್ಯ ಸೇವಾ ಸಂಸ್ಥೆಯು, ಫ್ರಾನ್ಸ್ನಲ್ಲಿ ಕನಿಷ್ಟ 21 ಸಾಲ್ಮೊನೆಲ್ಲಾ ಪ್ರಕರಣಗಳು ಪತ್ತೆಯಾಗಿವೆ ಮತ್ತು ಅದರಲ್ಲಿ 15 ಜನ ಫೆರೆರೊ ಕಂಪನಿಯು ಈಗ ವಾಪಸ್ಸು ತರಿಸಿಕೊಂಡಿರುವ ಕಿಂಡರ್ ಉತ್ಪಾದನೆಗಳನ್ನು ಸೇವಿಸಿದ್ದರು ಅಂತ ಹೇಳಿದೆ.
ಇದನ್ನೂ ಓದಿ: ಇನ್ನಿಲ್ಲ ಜನಸಂಖ್ಯಾ ಸ್ಫೋಟ; ಶುರುವಾಗಲಿದೆ ಜನಸಂಖ್ಯಾ ಕುಸಿತ? ಜಾಗತಿಕ ಮಟ್ಟದಲ್ಲಿ ಏನೇನು ಬದಲಾವಣೆ? ಇಲ್ಲಿದೆ ಸಂಪೂರ್ಣ ವಿವರ




