ಪಾಕಿಸ್ತಾನದಲ್ಲಿ ವಾಟ್ಸಾಪ್, ಫೇಸ್ಬುಕ್, ಟಿಕ್ಟಾಕ್, ಯೂಟ್ಯೂಬ್, ಇನ್ಸ್ಟಾಗ್ರಾಂಗೆ ನಿಷೇಧ
ಪಾಕಿಸ್ತಾನ ಸರ್ಕಾರವು ಈ ಹಿಂದೆ ನಾಲ್ಕು ತಿಂಗಳ ಕಾಲ ಎಕ್ಸ್ (ಹಿಂದಿನ ಟ್ವಿಟರ್) ಅನ್ನು ಯಶಸ್ವಿಯಾಗಿ ನಿರ್ಬಂಧಿಸಿತ್ತು. ಇದೀಗ ವಾಟ್ಸಾಪ್, ಟಿಕ್ಟಾಕ್, ಯೂಟ್ಯೂಬ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ನಿಷೇಧ ಹೇರಲು ಮುಂದಾಗಿದೆ.
ಎಕ್ಸ್(ಟ್ವಿಟ್ಟರ್)ನ್ನು ನಿಷೇಧಿಸಿರುವ ಪಾಕಿಸ್ತಾನ(Pakistan) ಸರ್ಕಾರವು ಇದೀಗ, ಸಾಮಾಜಿಕ ಮಾಧ್ಯಮಗಳಾದ ಯೂಟ್ಯೂಬ್, ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಟಿಕ್ಟಾಕ್ ನಿಷೇಧಕ್ಕೆ ಮುಂದಾಗಿದೆ. ಜುಲೈ 13ರಿಂದ 18ರವರೆಗೆ ಆರು ದಿನಗಳ ಕಾಲ ಇವುಗಳಿಗೆ ನಿಷೇಧ ಹೇರಲಾಗಿದೆ. ಮೊಹರಂ ತಿಂಗಳಿನಲ್ಲಿ ದ್ವೇಷಪೂರಿತ ಭಾಷಣವಾಗಲಿ, ತಪ್ಪು ಮಾಹಿತಿಯಾಗಲಿ ರವಾನೆಯಾಗದಂತೆ ನೋಡಿಕೊಳ್ಳಲು ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಈ ಕ್ರಮ ಕೈಗೊಂಡಿದ್ದಾರೆ.
ಪಾಕಿಸ್ತಾನ ಸರ್ಕಾರವು ಇದಕ್ಕಾಗಿ ಸಂಪೂರ್ಣವಾಗಿ ಸಿದ್ಧವಾಗಿದೆ. ಮರ್ಯಮ್ ನವಾಜ್ ಅವರ ಕಾನೂನು ಮತ್ತು ಸುವ್ಯವಸ್ಥೆಯ ಸಂಪುಟ ಸಮಿತಿಯು ಈ ಪ್ರಸ್ತಾಪವನ್ನು ಮಂಡಿಸಿದೆ. ಈ ಮೂಲಕ ಸಂಸ್ಕೃತಿಯ ಬಗ್ಗೆ ದ್ವೇಷ ಹರಡುವುದನ್ನು ಮತ್ತು ಯಾವುದೇ ಅಪಪ್ರಚಾರವನ್ನು ಪ್ರಚಾರ ಮಾಡುವುದನ್ನು ಹೆಚ್ಚಿನ ಪ್ರಮಾಣದಲ್ಲಿ ನಿಲ್ಲಿಸಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವಂತೆ ಮರ್ಯಮ್ ನವಾಜ್ ಅವರು ದೇಶದ ಪ್ರಧಾನಿ ಬಳಿ ಮನವಿ ಮಾಡಿದ್ದಾರೆ.
ಪಾಕಿಸ್ತಾನದ ಹಲವು ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳ ವಿರುದ್ಧ ಮಾತನಾಡುತ್ತಿದ್ದಾರೆ, ಅದರಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಹೆಸರೂ ಸೇರಿದೆ. ಅವರು ಸಾಮಾಜಿಕ ಮಾಧ್ಯಮವನ್ನು ಭ್ರಷ್ಟ ಮಾಧ್ಯಮ ಎಂದು ಹೆಸರಿಸಿದ್ದಾರೆ.
ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ ಟ್ವಿಟರ್ ಬ್ಯಾನ್: ಎಕ್ಸ್ನಿಂದ ನಮ್ಮ ರಾಷ್ಟ್ರೀಯ ಭದ್ರತೆಗೆ ತೊಂದರೆ
ಸೇನಾ ಮುಖ್ಯಸ್ಥರ ಹೊರತಾಗಿ, ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಅವರು ಸಾಮಾಜಿಕ ಮಾಧ್ಯಮಗಳ ಸಂಪೂರ್ಣ ನಿಷೇಧದ ಬಗ್ಗೆ ಮಾತನಾಡಿದ್ದರು, ಇಶಾಕ್ ದಾರ್ ಅವರು ಪ್ರಸ್ತುತ ವಿದೇಶಾಂಗ ಸಚಿವರ ಜವಾಬ್ದಾರಿಯನ್ನು ಹೊಂದಿದ್ದಾರೆ.
ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧಕ್ಕೂ ಮುಂಚೆಯೇ, ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶಗಳಲ್ಲಿ ಬದಲಾವಣೆಯ ಆರೋಪದ ಕಾರಣ ಪಾಕಿಸ್ತಾನದಲ್ಲಿ ಎಕ್ಸ್ ಅನ್ನು 4 ತಿಂಗಳ ಕಾಲ ಮುಚ್ಚಲಾಗಿತ್ತು. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಎಕ್ಸ್ ಅನ್ನು ನಿಷೇಧಿಸಲಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ