Keir Starmer: ರಿಷಿ ಸುನಕ್ರನ್ನು ಸೋಲಿಸಿ ಬ್ರಿಟನ್ ಪ್ರಧಾನಿಯಾಗುವತ್ತ ಹೆಜ್ಜೆ ಹಾಕುತ್ತಿರುವ ಕೀರ್ ಸ್ಟಾರ್ಮರ್ ಯಾರು?
United Kingdom Elections 2024:ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಜುಲೈ 4 ರಂದು ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆದಿತ್ತು. ಮತದಾನದ ನಂತರ ಬಿಡುಗಡೆಯಾದ ಎಕ್ಸಿಟ್ ಪೋಲ್‌ಗಳಲ್ಲಿ, ಲೇಬರ್ ಪಕ್ಷವು ಐತಿಹಾಸಿಕ ಬಹುಮತವನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ, ಅದು ಸರಿಯಾಗಿದೆ ಎಂದು ಸಾಬೀತಾಯಿತು. ಹಾಗಾದರೆ ರಿಷಿ ಸುನಕ್ ಅವರನ್ನು ಸೋಲಿಸಿ ಪ್ರಧಾನಿ ಹುದ್ದೆಯತ್ತ ಹೆಜ್ಜೆ ಇಟ್ಟಿರುವ ಕೀರ್ ಸ್ಟಾರ್ಮರ್ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲಿದೆ ಅದಕ್ಕೆ ಉತ್ತರ ಇಲ್ಲಿದೆ.
ಬ್ರಿಟನ್(Britain)ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ರಿಷಿ ಸುನಕ್Rishi Sunak) ಸೋಲನ್ನು ಒಪ್ಪಿಕೊಂಡಿದ್ದಾರೆ. ಇದೀಗ ಕೀರ್ ಸ್ಟಾರ್ಮರ್(Keir Starmer) ಬ್ರಿಟನ್ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. ಬ್ರಿಟನ್‌ನ ಕಳೆದ 50 ವರ್ಷಗಳ ಇತಿಹಾಸದಲ್ಲಿ 60 ವರ್ಷ ಮೇಲ್ಪಟ್ಟ ವ್ಯಕ್ತಿಯೊಬ್ಬರು ದೇಶದ ಪ್ರಧಾನಿಯಾಗುತ್ತಿರುವುದು ಇದೇ ಮೊದಲು. 61 ವರ್ಷದ ಕೀರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿಯಾದರೆ, ಬ್ರಿಟನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದ 9 ವರ್ಷಗಳ ನಂತರ ಕೀರ್ ಸ್ಟಾರ್ಮರ್ ಈ ಹುದ್ದೆ ಅಲಂಕರಿಸಲಿದ್ದಾರೆ.
ಕೀರ್ ಸ್ಟಾರ್ಮರ್ ಬ್ರಿಟನ್‌ನ ಲೇಬರ್ ಪಾರ್ಟಿಯ ಹಿರಿಯ ನಾಯಕರಲ್ಲಿ ಒಬ್ಬರು. ಸ್ಟಾರ್ಮರ್ ಈ ಹಿಂದೆ ಮಾನವ ಹಕ್ಕುಗಳ ವಕೀಲರಾಗಿ ಮತ್ತು ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಸಂಸದರಾಗುವ ಮೊದಲು, ಸ್ಟಾರ್ಮರ್ ಸುದೀರ್ಘ ಮತ್ತು ವಿಶಿಷ್ಟವಾದ ವೃತ್ತಿಜೀವನವನ್ನು ಹೊಂದಿದ್ದರು, ಅವರ ಕಾರ್ಯಗಳು ಸಿದ್ಧಾಂತಕ್ಕಿಂತ ಹೆಚ್ಚಾಗಿ ವಾಸ್ತವಿಕವಾದವನ್ನು ಆಧರಿಸಿವೆ.
ನಾವು ರಾಜಕೀಯವನ್ನು ಸೇವೆಯನ್ನಾಗಿ ಪರಿವರ್ತಿಸಬೇಕು. ಕಳೆದ 14 ವರ್ಷಗಳ ಆಡಳಿತದಲ್ಲಿ ಕನ್ಸರ್ವೇಟಿವ್ ಪಕ್ಷದಿಂದ 5 ಜನ ಪ್ರಧಾನಿಗಳಾಗಿದ್ದು, ಇದೊಂದು ಅರಾಜಕ ಆಡಳಿತ ಎಂದಿದ್ದಾರೆ. ಸ್ಟಾರ್ಮರ್ ದೇಶಕ್ಕೆ ಮೊದಲ ಸ್ಥಾನ, ಪಕ್ಷಕ್ಕೆ ಎರಡನೇ ಸ್ಥಾನ ಎಂದು ಭರವಸೆ ನೀಡಿದ್ದಾರೆ.
61 ವರ್ಷದ ಕೀರ್ ಸ್ಟಾರ್ಮರ್ ಲಂಡನ್‌ನ ಆಕ್ಸ್ಟೆಡ್‌ನಲ್ಲಿ ಜನಿಸಿದರು, ಅವರ ತಂದೆ ಟೂಲ್ ಮೇಕರ್ ಆಗಿದ್ದರು ಮತ್ತು ಅವರ ತಾಯಿ ನರ್ಸ್ ಆಗಿದ್ದರು. 2015 ರಲ್ಲಿ ಮೊದಲ ಬಾರಿಗೆ ಸಂಸದರಾದ ಕೆಲವೇ ದಿನಗಳಲ್ಲಿ ಕಿರ್ ಅವರ ತಾಯಿ ನಿಧನರಾದರು.
ಮತ್ತಷ್ಟು ಓದಿ: UK Election Result 2024: ಬ್ರಿಟನ್ ಸಾರ್ವತ್ರಿಕ ಚುನಾವಣೆ, ಸೋಲೊಪ್ಪಿಕೊಂಡ ರಿಷಿ ಸುನಕ್, ಸರ್ಕಾರ ರಚಿಸಲಿದೆ ಲೇಬರ್ ಪಕ್ಷ
ಸ್ಟಾರ್ಮರ್ ಸರ್ರೆಯ ಸಣ್ಣ ಪಟ್ಟಣದಲ್ಲಿ ಬೆಳೆದರು. ಕೀರ್‌ಗೆ ಇಬ್ಬರು ಮಕ್ಕಳಿದ್ದಾರೆ. ಅವರ ಪತ್ನಿ ವಿಕ್ಟೋರಿಯಾ ರಾಷ್ಟ್ರೀಯ ಆರೋಗ್ಯ ಸೇವೆ (NHS) ಉದ್ಯೋಗಿ. ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಅವರು ಲೇಬರ್ ಪಾರ್ಟಿ ನೇತೃತ್ವದ ಸರ್ಕಾರದಲ್ಲಿ ಪಬ್ಲಿಕ್ ಪ್ರಾಸಿಕ್ಯೂಷನ್ಸ್ (ಡಿಪಿಪಿ) ನಿರ್ದೇಶಕರಾಗಿದ್ದರು.
ಅವರು ತಮ್ಮ 50ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸಿದ್ದು ಗಮನಾರ್ಹ. ಫುಟ್‌ಬಾಲ್‌ನಲ್ಲಿ ಆರ್ಸೆನಲ್ ಕ್ಲಬ್ ಅನ್ನು ಬೆಂಬಲಿಸುವ ಕೀರ್, ಜನರು ಬದಲಾವಣೆಯನ್ನು ಬಯಸಿದರೆ ಅವರು ಲೇಬರ್ ಪಾರ್ಟಿಗೆ ಮತ ಹಾಕಬೇಕೆಂದು ಚುನಾವಣೆಯ ಮೊದಲು ಸ್ಪಷ್ಟವಾಗಿ ಹೇಳಿದ್ದರು. ನಮ್ಮ ಪಕ್ಷ ದೇಶವನ್ನು ಕೆಟ್ಟ ಪರಿಸ್ಥಿತಿಯಿಂದ ಹೊರತರಲು ಪ್ರಯತ್ನಿಸುತ್ತದೆ. ಅದರಲ್ಲೂ ದೇಶದ ಕೆಟ್ಟ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಬೇಕು ಎಂದಿದ್ದರು.
2019 ರ ನಂತರ ಲೇಬರ್ ಪಕ್ಷದ ಪ್ರಮುಖ ನಾಯಕರಾಗಿ ಹೊರಹೊಮ್ಮಿದ ಕೀರ್, ತಮ್ಮ ಸರ್ಕಾರದ ಸಂಪೂರ್ಣ ಗಮನವು ದೇಶದ ಆರ್ಥಿಕತೆ ಮತ್ತು ರಾಷ್ಟ್ರೀಯ ಆರೋಗ್ಯ ಸೇವೆಯನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
ಕೀರ್ ಸ್ಟಾರ್ಮರ್ ಪ್ರಧಾನಿಯಾದ ನಂತರ ಬ್ರಿಟನ್ ಮತ್ತು ಭಾರತದ ವಿದೇಶಾಂಗ ನೀತಿಯಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಕುರಿತು ಭಾರತ ಮತ್ತು ಬ್ರಿಟನ್ ನಡುವೆ ಮಾತುಕತೆಗಳು ನಡೆಯುತ್ತಿವೆ.
ಅವರ ವಿದೇಶಾಂಗ ನೀತಿಯು ಕನ್ಸರ್ವೇಟಿವ್ ಪಕ್ಷಕ್ಕಿಂತ ಸ್ವಲ್ಪ ಭಿನ್ನವಾಗಿರಬಹುದು. ಇಸ್ರೇಲ್-ಗಾಜಾ ಯುದ್ಧದಲ್ಲಿ ಬ್ರಿಟನ್‌ನ ನಿಲುವು ಸ್ವಲ್ಪ ವಿಭಿನ್ನವಾಗಿ ಕಾಣಿಸಬಹುದು. ಲೇಬರ್ ಪಾರ್ಟಿಯು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಮಾರಾಟವನ್ನು ನಿಲ್ಲಿಸಲು ಯೋಜಿಸುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ