ವಿವಾದದ ಬೆನ್ನಲ್ಲೇ ಕರ್ತಾರಪುರ ಗುರುದ್ವಾರದಲ್ಲಿ ತೆಗೆದಿದ್ದ ಫೋಟೋ ಡಿಲೀಟ್​ ಮಾಡಿದ ಪಾಕಿಸ್ತಾನಿ ಮಾಡೆಲ್​; ನನ್ನನ್ನು ಕ್ಷಮಿಸಿ ಎಂದ ರೂಪದರ್ಶಿ

| Updated By: Lakshmi Hegde

Updated on: Nov 30, 2021 | 11:59 AM

ಗುರುದ್ವಾರದ ಆವರಣದಲ್ಲಿ ಮಹಿಳೆಯರು ತಲೆಯ ಮೇಲೆ ಸೆರಗು ಹೊದ್ದು ಹೋಗುತ್ತಾರೆ. ಆದರೆ ಲಾಹೋರ್​​ನ ಈ ರೂಪದರ್ಶಿ ಆ ನಿಯಮ ಪಾಲನೆ ಮಾಡಲಿಲ್ಲ ಎಂದು ಸಿಖ್ಖರು ಆರೋಪಿಸಿದ್ದರು.

ವಿವಾದದ ಬೆನ್ನಲ್ಲೇ ಕರ್ತಾರಪುರ ಗುರುದ್ವಾರದಲ್ಲಿ ತೆಗೆದಿದ್ದ ಫೋಟೋ ಡಿಲೀಟ್​ ಮಾಡಿದ ಪಾಕಿಸ್ತಾನಿ ಮಾಡೆಲ್​; ನನ್ನನ್ನು ಕ್ಷಮಿಸಿ ಎಂದ ರೂಪದರ್ಶಿ
ವಿವಾದ ಸೃಷ್ಟಿಸಿದ್ದ ಪಾಕಿಸ್ತಾನದ ರೂಪದರ್ಶಿ
Follow us on

ದೆಹಲಿ: ಕರ್ತಾರಪುರದ ಗುರುದ್ವಾರ ದರ್ಬಾರ್​ ಸಾಹೀಬ್​​ ಎದುರು ಫೋಟೋಶೂಟ್​ ಮಾಡಿಸಿ ವಿವಾದ ಸೃಷ್ಟಿಸಿದ್ದ ಪಾಕಿಸ್ತಾನದ ರೂಪದರ್ಶಿ ಸೌಲೇಹಾ ಇದೀಗ ಕ್ಷಮೆ ಕೋರಿದ್ದಾರೆ. ಕರ್ತಾರಪುರದ ಗುರುದ್ವಾರ ದರ್ಬಾರ್​ ಸಾಹೀಬ್​ ಸಿಖ್ಖರ ಪವಿತ್ರ ಯಾತ್ರಾಸ್ಥಳ. ಆದರೆ ಅಲ್ಲಿ ಪಾಕ್​ನ ಮಾಡೆಲ್​ ಸೌಲೇಹಾ ಎಂಬುವವರು ವಿವಿಧ ಪೋಸ್​ ಕೊಟ್ಟು ಫೋಟೋಶೂಟ್​ ಮಾಡಿಸಿಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ಆ ಫೋಟೋ ನೋಡಿ ನೆಟ್ಟಿಗರು, ಅದರಲ್ಲೂ ಸಿಖ್​ ಸಮುದಾಯದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈಕೆ ತಲೆಯ ಮೇಲೆ ಏನೂ ಹೊದ್ದುಕೊಳ್ಳದೆ, ಹೇಗೆಂದರೆ ಹಾಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಮೂಲಕ ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪ ವ್ಯಕ್ತವಾಗಿತ್ತು.

ಸೋಷಿಯಲ್​ ಮೀಡಿಯಾದಲ್ಲಿ ಟೀಕೆ, ವ್ಯಂಗ್ಯ, ವಿರೋಧ ವ್ಯಕ್ತವಾದ ಬೆನ್ನಲ್ಲೇ ರೂಪದರ್ಶಿ ಸೌಲೇಹಾ ತಮ್ಮ ಫೋಟೋಗಳನ್ನೆಲ್ಲ ಡಿಲೀಟ್​ ಮಾಡಿ, ಇನ್​ಸ್ಟಾಗ್ರಾಂನಲ್ಲಿ  ಕ್ಷಮೆ ಕೇಳಿದ್ದಾರೆ. ನನಗೆ ಯಾರಿಗೂ ಅವಮಾನ ಮಾಡುವ, ಯಾರ ಭಾವನೆಗೂ ಧಕ್ಕೆ ಉಂಟು ಮಾಡುವ ಉದ್ದೇಶ ಇರಲಿಲ್ಲ. ಕರ್ತಾರಪುರ ಸಾಹೀಬ್​ಗೆ ಪ್ರವಾಸಕ್ಕೆ ಹೋಗಿದ್ದೆ. ಅದರ ನೆನಪಿಗಾಗಿ ಫೋಟೋಗಳನ್ನು ತೆಗೆಸಿಕೊಂಡಿದ್ದೆ. ಕರ್ತಾರಪುರದ ಇತಿಹಾಸ, ಸಿಖ್​ ಸಮುದಾಯದ ಆಚರಣೆ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ನಾನು ಅಲ್ಲಿಗೆ ಹೋಗಿದ್ದೆ. ನಾನು ಒಂದು ಸಮುದಾಯದ ಸಂಸ್ಕೃತಿ, ನಂಬಿಕೆಗೆ ಧಕ್ಕೆ ತಂದಿದ್ದೇನೆ ಎಂದು ಹೇಳಲಾಗುತ್ತಿದೆ. ಹಾಗೆ ಭಾವಿಸಬೇಡಿ. ನನ್ನ ಮನಸಲ್ಲಿ ಅಂಥ ಭಾವನೆ ಇರಲಿಲ್ಲ, ದಯವಿಟ್ಟು ಕ್ಷಮಿಸಿ ಎಂದು ತಮ್ಮ ಇನ್​ಸ್ಟಾಗ್ರಾಂ ಪೇಜ್​​ನಲ್ಲಿ ಬರೆದುಕೊಂಡಿದ್ದಾರೆ.   ಅಂದಹಾಗೆ, ಈ ರೂಪದರ್ಶಿಯ ಫೋಟೋಗಳನ್ನು ಮನ್ನತ್​ ಕ್ಲಾಥಿಂಗ್​ ಬ್ರ್ಯಾಂಡ್​ ಕೂಡ ತನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿತ್ತು. ಆದರೆ ಸಿಖ್​ ಸಮುದಾಯದ ವಿರೋಧದ ನಂತರ ಅದೂ ಕೂಡ ಡಿಲೀಟ್​ ಮಾಡಿದೆ. ಹಾಗೇ, ಇದು ಖಂಡಿತ ಯಾವುದೇ ವಸ್ತ್ರದ ಪ್ರಮೋಶನ್​​​ಗೆ ಮಾಡಿದ ಫೋಟೋಶೂಟ್ ಆಗಿರಲಿಲ್ಲ ಎಂದೂ ಮನ್ನಥ್​ ಕ್ಲಾಥಿಂಗ್​ ಮತ್ತು ಸೌಲೇಹಾ ಇಬ್ಬರೂ ಸ್ಪಷ್ಟಪಡಿಸಿದ್ದಾರೆ.

ಗುರುದ್ವಾರದ ಆವರಣದಲ್ಲಿ ಮಹಿಳೆಯರು ತಲೆಯ ಮೇಲೆ ಸೆರಗು ಹೊದ್ದು ಹೋಗುತ್ತಾರೆ. ಇದು ನಮ್ಮ ಸಂಪ್ರದಾಯ. ಆದರೆ ಲಾಹೋರ್​​ನ ಈ ರೂಪದರ್ಶಿ ಆ ನಿಯಮ ಪಾಲನೆ ಮಾಡಲಿಲ್ಲ. ಇದು ನಮ್ಮ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಸಿಖ್​ ಸಮುದಾಯದ ಪ್ರಮುಖರು ಧ್ವನಿ ಎತ್ತಿದ್ದರು. ಅಷ್ಟೇ ಅಲ್ಲ, ಪಾಕಿಸ್ತಾನ ಪೊಲೀಸರೂ ಕೂಡ ಮನ್ನಥ್​ ಕ್ಲಾಥಿಂಗ್​ ಮತ್ತು ರೂಪದರ್ಶಿ ಸೌಲೇಹಾರ ವಿಚಾರಣೆ ಪ್ರಕ್ರಿಯೆ ನಡೆಸಿದ್ದಾರೆ.

ಇದನ್ನೂ ಓದಿ: Financial changes: ಡಿಸೆಂಬರ್ 1ರಿಂದ ಜಾರಿ ಆಗಬಹುದಾದ ಪ್ರಮುಖ ಹಣಕಾಸು ವಿಚಾರದ ಬದಲಾವಣೆಗಳಿವು

Published On - 11:57 am, Tue, 30 November 21