ಅಮೆರಿಕದ ಹೈಸ್ಕೂಲ್​​​ನಲ್ಲಿ ಗುಂಡಿನ ದಾಳಿ ನಡೆಸಿದ 15ವರ್ಷದ ಬಾಲಕ; 3 ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ

ಗಾಯಗೊಂಡ 8 ಮಂದಿಯಲ್ಲಿ ಒಬ್ಬರು ಶಿಕ್ಷಕರು. ಅವರಲ್ಲಿ ಆರು ಮಂದಿಯ ಸ್ಥಿತಿ ಸ್ಥಿರವಾಗಿದ್ದು, ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿದೆ ಅವರಿಗೆ ಸರ್ಜರಿ ಮಾಡಲಾಗಿದೆ. 

ಅಮೆರಿಕದ ಹೈಸ್ಕೂಲ್​​​ನಲ್ಲಿ ಗುಂಡಿನ ದಾಳಿ ನಡೆಸಿದ 15ವರ್ಷದ ಬಾಲಕ; 3 ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ
ಆತಂಕದಿಂದ ಇರುವ ಪಾಲಕರು

ಅಮೆರಿಕದ ಮಿಚಿಗನ್​​ನಲ್ಲಿರುವ ಆಕ್ಸ್​​ಫರ್ಡ್​​ ಹೈಸ್ಕೂಲ್​​ನಲ್ಲಿ 15ವರ್ಷದ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಶಿಕ್ಷಕರೂ ಸೇರಿ 8 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಓಕ್ಲ್ಯಾಂಡ್​ ಕೌಂಟಿ ಉಪ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿ ಮೈಕೆಲ್ ಜಿ ಮೆಕ್‌ಕೇಬ್​, ಮೃತ ವಿದ್ಯಾರ್ಥಿಗಳಲ್ಲಿ ಒಬ್ಬ 16 ವರ್ಷದ ಬಾಲಕ, ಇನ್ನೊಬ್ಬಾತ 14 ವರ್ಷದವನು ಮತ್ತು ಇನ್ನೊಬ್ಬಳು 17 ವರ್ಷದ ಹುಡುಗಿ ಎಂದು ಮಾಹಿತಿ ನೀಡಿದ್ದಾರೆ.  

ಇನ್ನು ಗಾಯಗೊಂಡ 8 ಮಂದಿಯಲ್ಲಿ ಒಬ್ಬರು ಶಿಕ್ಷಕರು. ಅವರಲ್ಲಿ ಆರು ಮಂದಿಯ ಸ್ಥಿತಿ ಸ್ಥಿರವಾಗಿದ್ದು, ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿದೆ ಅವರಿಗೆ ಸರ್ಜರಿ ಮಾಡಲಾಗಿದೆ.  ಆಕ್ಸ್​ಫರ್ಡ್​ ಹೈಸ್ಕೂಲ್​​ನಲ್ಲಿ ನಿಯೋಜಿಸಲಾಗಿದ್ದ ಪೊಲೀಸ್​  ಸಿಬ್ಬಂದಿ ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತನೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತನಿಂದ ಒಂದು ಹ್ಯಾಂಡ್​ಗನ್​ ಕೂಡ ವಶಪಡಿಸಿಕೊಳ್ಳಲಾಗಿದೆ. ಇನ್ನು ಶಾಲೆಯಲ್ಲಿ 15-20 ಬಾರಿ ಗುಂಡು ಹಾರಿಸಲಾಗಿದೆ ಎಂದು ಮೆಕ್​ಕೇಬ್​ ತಿಳಿಸಿದ್ದಾರೆ.

ಅಂದಹಾಗೆ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದವನು ಒಬ್ಬನೇ. ಅವನ ಜತೆ ಇನ್ಯಾರೂ ಇರಲಿಲ್ಲ ಎಂಬುದಕ್ಕೆ ಕೆಲವು ಪುರಾವೆಗಳು ಸಿಕ್ಕಿವೆ. ಆದರೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದೂ ಮೆಕ್​ಕೇಬ್​ ಹೇಳಿದ್ದಾರೆ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಶೀಘ್ರವೇ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆ ನಡೆಯಿತು. ಎಲ್ಲರನ್ನೂ ಸಮೀಪದ ದೊಡ್ಡ ಸ್ಟೋರ್​ವೊಂದಕ್ಕೆ ಸ್ಥಳಾಂತರ ಮಾಡಲಾಯಿತು. ಕೂಡಲೇ ಅಲ್ಲಿಗೆ ಅವರ ಕುಟುಂಬದವರು, ಸಂಬಂಧಿಕರನ್ನು ಕರೆಸಲಾಯಿತು. 25 ರಕ್ಷಣಾ ಏಜೆನ್ಸಿನಗಳು, 60 ಆಂಬುಲೆನ್ಸ್​ಗಳು ಸ್ಥಳಕ್ಕೆ ಬಂದವು ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಜಾನ್​ ಲೈಮನ್​ ತಿಳಿಸಿದ್ದಾರೆ.

ನಿನ್ನೆ ಯುಎಸ್​ನ ಅಲಬಾಮಾ ರಾಜಧಾನಿ ಮ್ಯಾಂಟ್ಗೋಮೆರಿಯಲ್ಲಿ ಕೇರಳದ 19ವರ್ಷದ ಯುವತಿಯನ್ನು ಹತ್ಯೆಗೈಯ್ಯಲಾಗಿದೆ. ಮರಿಯಾಮ್​ ಸುಸಾನ್​ ಮ್ಯಾಥ್ಯೂ ಎಂಬಾಕೆ ತನ್ನ ಮನೆಯಲ್ಲಿ ಮಲಗಿದ್ದಾಗ ಮೇಲ್ಮಹಡಿಯಿಂದ, ಸೀಲಿಂಗ್​ ತೂರಿಕೊಂಡ ಬಂದ ಬುಲೆಟ್​ ಇವರ ದೇಹ ಹೊಕ್ಕಿತ್ತು. ಮೇಲ್ಮಹಡಿಯ ಮನೆಯಲ್ಲಿ ವಾಸವಾಗಿದ್ದವರದ್ದೇ  ಈ ಕೆಲಸ ಎಂದು ಹೇಳಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನು ಅಮೆರಿಕದಲ್ಲಿ ಮಾಲ್​, ಶಾಲೆಗಳು, ಯೂನಿವರ್ಸಿಟಿಗಳಲ್ಲಿ ಪದೇಪದೆ ಶೂಟೌಟ್​ ನಡೆಯುತ್ತಿರುವುದು ಆತಂಕ ಮೂಡಿಸಿದೆ.

ಇದನ್ನೂ ಓದಿ: ಆಟೋ ದರ ಏರಿಕೆ ಖುಷಿಯಲ್ಲಿದ್ದ ಚಾಲಕರಿಗೆ ಶಾಕ್, ದಿಢೀರನೆ ಏರಿತು ಆಟೋ ಗ್ಯಾಸ್ ದರ! ಹಾಗಾದರೆ ಪ್ರಯಾಣ ದರ ಮತ್ತೆ ಏರುತ್ತದಾ?

Click on your DTH Provider to Add TV9 Kannada