ಅಫ್ಘಾನ್ನ 100ಕ್ಕೂ ಹೆಚ್ಚು ಮಾಜಿ ಪೊಲೀಸ್, ಗುಪ್ತಚರ ಇಲಾಖೆ ಅಧಿಕಾರಿಗಳನ್ನು ನಿಗೂಢವಾಗಿ ಕಣ್ಮರೆ ಮಾಡಿದ ತಾಲಿಬಾನಿಗಳು !
ಅಶ್ರಫ್ ಘನಿ ಸರ್ಕಾರ ಹಾಗೆಯೇ ಬಿಟ್ಟು ಹೋದ ದಾಖಲೆಗಳನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ತಮ್ಮ ಗುಪ್ತಚರ ದಳದ ಮೂಲಕ ಹಿಂದಿನ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರಲ್ಲಿ ಒಂದಷ್ಟು ಜನರನ್ನು ಬಂಧಿಸಿ, ಕಣ್ಮರೆಯಾಗಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಆಗಸ್ಟ್ 15ರಿಂದ ತಾಲಿಬಾನ್ ಆಡಳಿತ ಶುರುವಾಗಿದೆ. ಆಗಿನಿಂದಲೂ ತಾಲಿಬಾನಿಗಳು ಮಾಜಿ ಪೊಲೀಸ್ ಅಧಿಕಾರಿಗಳು ಗುಪ್ತಚರ ಇಲಾಖೆ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಒಟ್ಟು 34 ಪ್ರಾಂತ್ಯಗಳಲ್ಲಿ ನಾಲ್ಕು ಪ್ರಾಂತ್ಯಗಳ ಸುಮಾರು 100 ಮಾಜಿ ಪೊಲೀಸ್ ಅಧಿಕಾರಿಗಳು, ಗುಪ್ತಚರ ಇಲಾಖೆ ಅಧಿಕಾರಿಗಳನ್ನು ಬಲವಂತವಾಗಿ ಕಣ್ಮರೆ ಮಾಡಿದ್ದಾರೆ ಅಥವಾ ನೇಣಿಗೇರಿಸಿದ್ದಾರೆ ಎಂದು ಹ್ಯೂಮನ್ ರೈಟ್ಸ್ ವಾಚ್ (ನ್ಯೂಯಾರ್ಕ್ನಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಎನ್ಜಿಒ-HRW) ವರದಿ ಮಾಡಿದೆ.
ತಾಲಿಬಾನ್ ಆಡಳಿತ ಬರುವುದಕ್ಕೂ ಮೊದಲು ಇಲ್ಲಿ ಅಶ್ರಫ್ ಘನಿ ಸರ್ಕಾರವಿತ್ತು. ಆ ಸರ್ಕಾರದಲ್ಲಿದ್ದ ಅಧಿಕಾರಿಗಳಿಗೆ ತಾಲಿಬಾನ್ ಕ್ಷಮಾದಾನ ನೀಡಿತ್ತು. ಆದರೆ ಅಶ್ರಫ್ ಘನಿ ಸರ್ಕಾರ ಹಾಗೆಯೇ ಬಿಟ್ಟು ಹೋದ ದಾಖಲೆಗಳನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ತಮ್ಮ ಗುಪ್ತಚರ ದಳದ ಮೂಲಕ ಹಿಂದಿನ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರಲ್ಲಿ ಒಂದಷ್ಟು ಜನರನ್ನು ಬಂಧಿಸಿ, ಕಣ್ಮರೆಯಾಗಿಸಿದ್ದಾರೆ. ಇನ್ನೂ ಹಲವರನ್ನು ಗುಪ್ತವಾಗಿಯೇ ನೇಣಿಗೇರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಅಶ್ರಫ್ ಘನಿ ಸರ್ಕಾರ ಇಲ್ಲಿ ಪತನವಾದ ನಂತರ ಅಫ್ಘಾನ್ ರಾಷ್ಟ್ರೀಯ ಭದ್ರತಾ ಪಡೆಗಳ ಸಿಬ್ಬಂದಿ ಕೂಡ ತಾಲಿಬಾನ್ ನಾಯಕತ್ವಕ್ಕೆ ಶರಣಾಗತೊಡಗಿದರು. ಹೀಗೆ ಶರಣಾಗುವವರ ಬಳಿ ತಾಲಿಬಾನಿಗಳು, ನೀವು ನಮ್ಮ ಸೇನೆಗೆ ನೋಂದಣಿ ಮಾಡಿಕೊಳ್ಳಿ. ಹಾಗೇ, ನಮ್ಮಿಂದ ನಿಮ್ಮ ಸುರಕ್ಷತಾ ಪತ್ರ ಪಡೆದುಕೊಳ್ಳಿ ಎಂದು ಹೇಳಿದ್ದಾರೆ. ಅದರಂತೆ ಮಾಡಿಕೊಂಡವರನ್ನು ಕಣ್ಗಾವಲಿನಲ್ಲಿ ಇಟ್ಟು, ಹಲವರನ್ನು ಬಂಧಿಸಿದ್ದಾರೆ. ಒಂದಷ್ಟು ಜನರನ್ನು ನೇಣಿಗೇರಿಸಿದ್ದಾರೆ ಎಂದು ಹೇಳಲಾಗಿದೆ. ಕೇವಲ ನಾಲ್ಕು ಪ್ರಾಂತ್ಯಗಳಿಂದ 100ಕ್ಕೂ ಹೆಚ್ಚು ಮಾಜಿ ಪೊಲೀಸ್, ಗುಪ್ತಚರ ಇಲಾಖೆ ಅಧಿಕಾರಿಗಳನ್ನು ತಾಲಿಬಾನಿಗಳು ಕಣ್ಮರೆ ಮಾಡಿದ್ದಾರೆ ಎಂದರೆ ಒಟ್ಟು 34 ಪ್ರಾಂತ್ಯಗಳಿಂದ ಇನ್ನೆಷ್ಟು ಮಂದಿ ಇವರ ಕ್ರೌರ್ಯಕ್ಕೆ ಬಲಿಯಾಗಿರಬಹುದು ಎಂಬ ಆತಂಕವೂ ಶುರುವಾಗಿದೆ.
ಇದನ್ನೂ ಓದಿ: ಮೆರಿಟ್ ಲಿಸ್ಟ್ ಪ್ರಕಾರ ಕೌನ್ಸೆಲಿಂಗ್ ನಡೆಯದ ಆರೋಪ; ಬೆಂಗಳೂರು ಉತ್ತರ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ
Published On - 3:43 pm, Wed, 1 December 21