ಇಸ್ಲಾಮಾಬಾದ್: ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ (Gulzar Ahmed) ಅವರನ್ನು ಉಸ್ತುವಾರಿ ಪ್ರಧಾನಿ ಹುದ್ದೆಗೆ ಇಮ್ರಾನ್ ಖಾನ್ (Imran Khan) ಸೋಮವಾರ ನಾಮನಿರ್ದೇಶನ ಮಾಡಿದ್ದಾರೆ. ಮಾಜಿ ಮಾಹಿತಿ ಸಚಿವ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಹಿರಿಯ ನಾಯಕ ಫವಾದ್ ಚೌಧರಿ (Fawad Chaudhry) ಅವರು ಪಕ್ಷದ ಕೋರ್ ಕಮಿಟಿಯ ಅನುಮೋದನೆಯ ನಂತರ ಪ್ರಧಾನಿ ಈ ನಿರ್ಧಾರವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಧ್ಯಕ್ಷ ಆರಿಫ್ ಅಲ್ವಿ ಅವರು ಸೋಮವಾರ ಪ್ರಧಾನಿ ಖಾನ್ ಮತ್ತು ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರಿಗೆ ಹಂಗಾಮಿ ಪ್ರಧಾನಿ ನೇಮಕಕ್ಕೆ ಸಲಹೆಗಳನ್ನು ಕೋರಿ ಪತ್ರಗಳನ್ನು ಕಳುಹಿಸಿದ ನಂತರ ಈ ಪ್ರಕಟಣೆ ಬಂದಿದೆ. “ಅಧ್ಯಕ್ಷರ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಪಿಟಿಐ ಕೋರ್ ಕಮಿಟಿಯ ಸಮಾಲೋಚನೆ ಮತ್ತು ಅನುಮೋದನೆಯ ನಂತರ, ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಹಂಗಾಮಿ ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ” ಎಂದು ಚೌಧರಿ ಹೇಳಿದರು. ಸಂಸತ್ ವಿಸರ್ಜನೆಯ ಮೂರು ದಿನಗಳೊಳಗೆ ನೇಮಕಾತಿಯನ್ನು ಒಪ್ಪದಿದ್ದರೆ, ಹೊರಹೋಗುವ ವಿಧಾನಸಭೆಯ ಎಂಟು ಸದಸ್ಯರನ್ನು ಒಳಗೊಂಡ ಸ್ಪೀಕರ್ ರಚಿಸುವ ಸಮಿತಿ ಅಥವಾ ಸೆನೆಟ್ ತಲಾ ಇಬ್ಬರು ನಾಮನಿರ್ದೇಶಿತರನ್ನು ಕಳುಹಿಸಬೇಕು ಎಂದು ಅಧ್ಯಕ್ಷ ಅಲ್ವಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಹೊರಹೋಗುವ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ಹಂಗಾಮಿ ಪ್ರಧಾನಿಯನ್ನು ನೇಮಿಸಲು ಸಂವಿಧಾನವು ಅಧ್ಯಕ್ಷರಿಗೆ ಅಧಿಕಾರ ನೀಡಿದೆ ಎಂದು ಅಧ್ಯಕ್ಷರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
Prime Minister @ImranKhanPTI has proposed the name of former Chief Justice of Pakistan, Justice (R) Gulzar Ahmed, as Caretaker Prime Minister pic.twitter.com/rFLSPj81im
— PTV World (@WorldPTV) April 4, 2022
ಪಾಕಿಸ್ತಾನದ ಸಂವಿಧಾನದ 224-A(1) ವಿಧಿಯ ಅಡಿಯಲ್ಲಿ, ದೇಶದಲ್ಲಿ ಚುನಾವಣೆಗಳನ್ನು ಆಯೋಜಿಸಲು ಉಸ್ತುವಾರಿ ಸರ್ಕಾರವನ್ನು ಸ್ಥಾಪಿಸಲಾಗಿದೆ. ಹಂಗಾಮಿ ಪ್ರಧಾನಿ ನೇಮಕವಾಗುವವರೆಗೆ ಖಾನ್ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಇಲ್ಲಿಯವರೆಗೆ ಶೆಹಬಾಜ್ ಷರೀಫ್ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ, ಇದು ಕಾನೂನುಬಾಹಿರ ಎಂದು ಅವರು ಬಣ್ಣಿಸಿದ್ದಾರೆ.
1957 ರಲ್ಲಿ ಜನಿಸಿದ ನ್ಯಾಯಮೂರ್ತಿ ಅಹ್ಮದ್ ಅವರು ಡಿಸೆಂಬರ್, 2019 ರಿಂದ ಫೆಬ್ರವರಿ 2022 ರಲ್ಲಿ ನಿವೃತ್ತರಾಗುವವರೆಗೆ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು.
ಇದನ್ನೂ ಓದಿ: ಬಿಕ್ಕಟ್ಟಿನ ಕುರಿತು ಸುಪ್ರೀಂಕೋರ್ಟ್ ಸಮಂಜಸ ಆದೇಶ ನೀಡಲಿದೆ ಎಂದ ಪಾಕ್ ಸಿಜೆಪಿ; ಪಿಟಿಐ ಸಭೆ ಕರೆದ ಇಮ್ರಾನ್ ಖಾನ್