ಬರ್ಲಿನ್: ವಿಶ್ವದಾದ್ಯಂತ ತೆರಿಗೆ ವಂಚನೆ ಮತ್ತು ಭ್ರಷ್ಟಾಚಾರವನ್ನು ಬಯಲಿಗೆಳೆದ ’ಪನಾಮಾ ಪೇಪರ್ಸ್’ (Panama Papers) ರೂವಾರಿ, ರಷ್ಯಾ ತನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಬಗ್ಗೆ ಭಯವಿದೆ ಅಂತ ಜರ್ಮನಿಯ (Germany) ಡರ್ ಸ್ಪೀಗೆಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಶನಿವಾರ ಪ್ರಕಟವಾಗಿದೆ.
ರಷ್ಯಾದ ಉನ್ನತ ಅಧಿಕಾರಿಗಳು ಮತ್ತು ಅವರ ಸ್ನೇಹಿತರು ಹಣಕಾಸಿನ ದುರ್ವ್ಯವಹಾರದಲ್ಲಿ ಭಾಗಿಯಾಗಿದ್ದು ಅವರಿಂದ ಸಂಗ್ರಹಿಸಿದ ಹಣ ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಬಳಕೆಯಾಗುತ್ತಿರುವ ಬಗ್ಗೆ ತಮ್ಮಲ್ಲಿ ಬಲವಾದ ಸಾಕ್ಷ್ಯವಿದೆ ಎಂದು ಜಾನ್ ಡೋ ಎಂಬ ನಕಲಿ ಹೆಸರಿನಿಂದ ಗುರುತಿಸಿಕೊಳ್ಳುವ ಅವರು ಹೇಳಿರುವರೆಂದು ಪತ್ರಿಕೆಯಲ್ಲಿ ಉಲ್ಲೇಖವಾಗಿದೆ.
ನಿಮಗೆ ಜೀವ ಬೆದರಿಕೆ ಇದೆಯೇ ಅಂತ ಪತ್ರಿಕೆ ಕೇಳಿದಾಗ, ‘ನನ್ನ ಬದುಕಿಗೆ ಇರುವ ಗಂಡಾಂತರವೇ ಅದು, ರಷ್ಯಾ ನನ್ನ ಸಾವು ನೋಡಬಯಸುತ್ತಿದೆ ಎಂದು ಗೊತ್ತಾದ ಮೇಲೆ ಭಯವಿರೋದು ಸಹಜ ತಾನೆ?’ ಎಂದು ಹೇಳಿದ್ದಾರೆ.
ನಿರಂಕುಶ ಪ್ರಭುತ್ವದ ದೇಶಗಳಲ್ಲಿನ ಪ್ರಬಲ ಮತ್ತು ಪ್ರಮುಖ ವ್ಯಕ್ತಿಗಳು ತೆರಿಗೆ ವಂಚನೆಯನ್ನು ಮುಚ್ಚಿಡುವ ಬಗ್ಗೆ ಕೇಳಿದಾಗ, ರಷ್ಯಾದ ವ್ಯವಹಾರಗಳಲ್ಲಿ ಅವರು ನಿರ್ವಹಿಸುವ ಪಾತ್ರಗಳ ಬಗ್ಗೆ ಅವರು ಹೇಳಿದ್ದಾರೆಮ ಆದರೆ ರಷ್ಯಾ ಮಾತ್ರ ಯಾವುದೇ ಅಕ್ರಮ ನಡೆದಿಲ್ಲ ಅಂತ ಹೇಳುತ್ತಿರುತ್ತದೆ ಎಂದಿದ್ದಾರೆ.
ಅಮೆರಿಕಾಗೆ ಜರ್ಮಿನಿಯ ಹಿಟ್ಲರ್ ಗಿಂತ ಹೆಚ್ಚು ಅಪಾಯ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಿಂದ ಇದೆ. ಬಾಂಬ್ ತಯಾರಿಸುವ ಕಂಪನಿಗಳ ಜೊತೆ ಪುಟಿನ್ ಗೆ ಭಾರೀ ದೋಸ್ತಿಯಿದೆ ಎಂದು ಜಾನ್ ಡೋ ಹೇಳಿದ್ದಾರೆ.
ಉಕ್ರೇನಲ್ಲಿ ಅಮಾಯಕ ನಾಗರಿಕರನ್ನು ಕೊಲ್ಲುತ್ತಿರುವ ರಷ್ಯನ್ ಸೇನೆಗೆ ಬಾಂಬ್ ತಯಾರಿಸುವ ಕಂಪನಿಗಳು ಆರ್ಥಿಕ ನೆರವು ಒದಗಿಸುತ್ತವೆ, ಪುಟಿನ್ ಕ್ಷಿಪಣಿಗಳು ಉಕ್ರೇನಿನ ಶಾಪಿಂಗ್ ಮಾಲ್ ಗಳ ಮೇಲೆ ದಾಳಿ ಮಾಡುತ್ತಿವೆ,’ ಎಂದು ಡೋ ಹೇಳಿದ್ದಾರೆ.
ಅನಾಮಧೇಯ ಸಂಸ್ಥೆಗಳು ‘ಸಮಾಜದಿಂದ ಹೊಣೆಗಾರಿಕೆಯನ್ನು ತೆಗೆದುಹಾಕುವ ಮೂಲಕ ಇಂಥ ಭಯಾನಕತೆ ಸಾಧ್ಯವಾಗಿಸುತ್ತವೆ ಮತ್ತು ಹೆಚ್ಚಿಸುತ್ತವೆ. ಆದರೆ ಹೊಣೆಗಾರಿಕೆಯಿಲ್ಲದೆ ಸಮಾಜ ಕಾರ್ಯಶೀಲವಾಗಿರುವುದು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ರಷ್ಯಾ ಸರ್ಕಾರದ ಪ್ರಾಯೋಜಿತ ಚ್ಯಾನೆಲ್ ಆಗಿರುವ ಆರ್ ಟಿ ಪನಾಮ ಪೇಪರ್ಸ್ ಡಾಕ್ಯುಡ್ರಾಮಾವನ್ನ ಎರಡು ಭಾಗಗಳಲ್ಲಿ ಬಿತ್ತರಿಸಿದ್ದು ಓಪನಿಂಗ್ ಕ್ರೆಡಿಟ್ಸ್ ನಲ್ಲಿ ಜಾನ್ ಡೋ ಪಾತ್ರವನ್ನು ಅರೆಹುಚ್ಚನಂತೆ ತೋರಿಸಲಾಗಿದೆ.
‘ಇದು ನಿಜಕ್ಕೂ ವಿಲಕ್ಷಣ ಮತ್ತು ವಿಕೃತಿ, ಅದರಲ್ಲಿ ಸೂಕ್ಷ್ಮತೆಯ ಅಂಶವೇ ಇಲ್ಲ,’ ಎಂದು ಡೋ ಹೇಳಿದ್ದಾರೆ.
ಮಾಲ್ಟಾ ಮತ್ತು ಸ್ಲೋವಾಕಿಯಾದಲ್ಲಿ ಹತ್ಯೆಗೊಳಗಾದ ತನಿಖಾ ವರದಿಗಾರರನ್ನು ಉಲ್ಲೇಖಿಸಿ ಡೋ ಅವರು ‘ದಾಫ್ನೆ ಕರುವಾನಾ ಗಲಿಜಿಯಾ ಮತ್ತು ಜಾನ್ ಕುಸಿಯಾಕ್ ಬದುಕು ದುರಂತದಲ್ಲಿ ಕೊನೆಗೊಂಡಿದ್ದನ್ನು ನಾವು ನೋಡಿದ್ದೇವೆ, ಬೇರೆ ದೇಶಗಳಲ್ಲಿ ಖಾತೆಗಳು ಮತ್ತು ತೆರಿಗೆ ವಂಚನೆ ಜೊತೆ ಸಂಬಂಧ ಹೊಂದಿರುವ ಇತರರು ಕೊಲೆ ಮಾಡಿಸಲು ಹೇಸಲಾರರು ಅಂತ ನಾವು ನೋಡಿದ್ದೇವೆ,’ ಎಂದು ಹೇಳಿದರು.
2016 ರ ನಂತರ ಡೋ ಮೊದಲ ಬಾರಿಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನ ಇದಾಗಿದ್ದು ಅವರು ತಮಗೆ ನಕಲಿ ನಾಮಧೇಯದಿಂದ ಹೊರಬರುವ ಯೋಚನೆ ಇಲ್ಲ ಎಂದು ಹೇಳಿದ್ದಾರೆ.
‘ಪನಾಮಾ ಪೇಪರ್ಸ್ ಹಗರಣ ಬೇರೆ ಬೇರೆ ದೇಶಗಳ ಕ್ರಿಮಿನಲ್ ಸಂಸ್ಥೆಗಳನ್ನು ಒಳಗೊಂಡಿದೆ ಮತ್ತು ಅವುಗಳ ಪೈಕಿ ಕೆಲವು ಸರ್ಕಾರಗಳೊಂದಿಗೆ ಸಂಬಂಧ ಇಟ್ಟುಕೊಂಡಿವೆ. ಹಾಗಾಗೇ ನನ್ನ ನೈಜ್ಯ ಗುರುತನ್ನು ಬಹಿರಂಗಪಡಿಸಲಾರೆ, ಅದು ಬಹಳ ಅಪಾಯಕಾರಿ,’ ಎಂದು ಡೋ ಹೇಳಿದ್ದಾರೆ.
ಇಂಟರ್ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ಐಸಿಐಜೆ) ಯಿಂದ ಹಲವಾರು ಹಣಕಾಸು ದಾಖಲೆಗಳ ಸೋರಿಕೆಗಳ ಪೈಕಿ ಪನಾಮ ಪೇಪರ್ಸ್ ಒಂದಾಗಿದೆ.
ಅವುಗಳಲ್ಲಿ ಬಹಿರಂಗಗೊಂಡ ವಿಷಯಗಳಿಂದ ಐಸ್ ಲ್ಯಾಂಡ್ ಪ್ರಧಾನ ಮಂತ್ರಿ ರಾಜೀನಾಮೆ ಸಲ್ಲಿಸಬೇಕಾಯಿತು ಮತ್ತು ಪಾಕಿಸ್ತಾನದ ಒಬ್ಬ ನಾಯಕ ದೇಶದಿಂದ ಪಲಾಯನ ಮಾಡುವಂತಾಯಿತು.