Panjshir: ಅಮೆರಿಕ ಸೇನೆ ಅಫ್ಘಾನ್​ ತೊರೆದ ಬೆನ್ನಲ್ಲೇ ಪಂಜ್​ಶೀರ್​​ ಮೇಲೆ ದಾಳಿ; 7-8 ತಾಲಿಬಾನ್ ಉಗ್ರರ ಹತ್ಯೆ

| Updated By: ಸುಷ್ಮಾ ಚಕ್ರೆ

Updated on: Aug 31, 2021 | 2:33 PM

Taliban in Afghanistan | ಅಫ್ಘಾನಿಸ್ತಾನದಲ್ಲಿ ಬಹುತೇಕ ಎಲ್ಲ ಪ್ರದೇಶಗಳನ್ನೂ ವಶಕ್ಕೆ ಪಡೆದಿರುವ ತಾಲಿಬಾನ್​ಗೆ ಇದುವರೆಗೂ ಪಂಜ್​ಶೀರ್​ ಅನ್ನು ತನ್ನ ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಈ ಪ್ರಾಂತ್ಯವನ್ನು ತಾಲಿಬಾನ್​ನಿಂದ ಕಾಪಾಡಲು ಅನೇಕರು ಕೈಜೋಡಿಸಿದ್ದಾರೆ.

Panjshir: ಅಮೆರಿಕ ಸೇನೆ ಅಫ್ಘಾನ್​ ತೊರೆದ ಬೆನ್ನಲ್ಲೇ ಪಂಜ್​ಶೀರ್​​ ಮೇಲೆ ದಾಳಿ; 7-8 ತಾಲಿಬಾನ್ ಉಗ್ರರ ಹತ್ಯೆ
ಪಂಜ್​ಶೀರ್​ನಲ್ಲಿ ತಾಲಿಬಾನ್ ಪಡೆ
Follow us on

ಪಂಜ್​ಶೀರ್: ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಪಂಜ್​ಶೀರ್ ಕಣಿವೆ ಸೇರಿದಂತೆ ಇನ್ನೂ ಕೆಲವು ಪ್ರದೇಶಗಳನ್ನು ತನ್ನ ತೆಕ್ಕೆಗೆ ಪಡೆಯಲು ಹರಸಾಹಸ ಪಡುತ್ತಿದೆ. ನಿನ್ನೆ ರಾತ್ರಿ ಅಮೆರಿಕದ ಸೇನೆ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತೊರೆದ ಬಳಿಕ ತಾಲಿಬಾನ್ ಉಗ್ರರು ಪಂಜ್​ಶೀರ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ತಾಲಿಬಾನ್ ಉಗ್ರರ ವಿರುದ್ಧ ಸೆಣಸಾಡಿರುವ ತಾಲಿಬಾನ್ ವಿರೋಧಿ ಪಡೆ 7-8 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಬಹುತೇಕ ಎಲ್ಲ ಪ್ರದೇಶಗಳನ್ನೂ ವಶಕ್ಕೆ ಪಡೆದಿರುವ ತಾಲಿಬಾನ್​ಗೆ ಇದುವರೆಗೂ ಪಂಜ್​ಶೀರ್​ ಅನ್ನು ತನ್ನ ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಈ ಪ್ರಾಂತ್ಯವನ್ನು ತಾಲಿಬಾನ್​ನಿಂದ ಕಾಪಾಡಲು ಅನೇಕರು ಕೈಜೋಡಿಸಿದ್ದಾರೆ.

ಈ ಬಗ್ಗೆ ಅಫ್ಘಾನಿಸ್ತಾನದ ಮಾಜಿ ಮಿಲಿಟರಿ ಕಮಾಂಡರ್ ಹಾಗೂ ತಾಲಿಬಾನ್ ವಿರೋಧಿ ಆಂದೋಲನವನ್ನು ಮುನ್ನಡೆಸುತ್ತಿರುವ ಅಹಮದ್ ಮಸೂದ್ ಅವರ ವಕ್ತಾರ ಫಹೀಮ್ ಡಶ್ಟಿ ಸ್ಪಷ್ಟನೆ ನೀಡಿದ್ದು, ಸೋಮವಾರ ರಾತ್ರಿ ತಾಲಿಬಾನ್ ಉಗ್ರರಯ ಹಲವು ಭಾಗಗಳಿಂದ ಪಂಜ್​ಶೀರ್ ಕಣಿವೆ ಮೇಲೆ ದಾಳಿ ನಡೆಸಿದ್ದರು. ಆದರೆ, ಅವರನ್ನು ಒಳಗೆ ಪ್ರವೇಶಿಸಲು ನಿಗ್ರಹ ಪಡೆ ಅವಕಾಶ ನೀಡಿಲ್ಲ. ಈ ವೇಳೆ ತಾಲಿಬಾನ್ ಉಗ್ರರು ಸಾಕಷ್ಟು ಸುತ್ತು ಗುಂಡು ಹಾರಿಸಿದ್ದಾರೆ. ಈ ಘಟನೆಯಿಂದ ಎರಡೂ ಕಡೆಯವರಿಗೆ ಸಾಕಷ್ಟು ಗಾಯಗಳಾಗಿವೆ. ಆದರೂ ತಾಲಿಬಾನ್ ಪಡೆಯನ್ನು ಹಿಮ್ಮೆಟ್ಟಿಸಲಾಗಿದ್ದು, 7-8 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪಂಜ್​ಶೀರ್ ಕಣಿವೆ

ಕಾಬೂಲ್ ಅನ್ನು ವಶಕ್ಕೆ ಪಡೆದ ಬಳಿಕ ಸಾವಿರಾರು ಉಗ್ರರನ್ನು ಕಳುಹಿಸಿ ಪಂಜ್​ಶೀರ್ ಪ್ರಾಂತ್ಯವನ್ನು ಕೂಡ ವಶಕ್ಕೆ ಪಡೆಯಲು ತಾಲಿಬಾನ್ ಸಂಚು ಮಾಡಿತ್ತು. ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ, ಕಾಬೂಲ್‌ನ ಉತ್ತರದಲ್ಲಿರುವ ಪಂಜ್‌ಶೀರ್‌ನಲ್ಲಿ ಕೆಲವು ಮಾಜಿ-ಸರ್ಕಾರಿ ಪಡೆಗಳು ಆ ಸ್ಥಳಕ್ಕೆ ಜಮಾಯಿಸಿ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ತಾಲಿಬಾನ್ ವಿರೋಧಿ ಭದ್ರಕೋಟೆ ಎಂದು ಕರೆಯಲಾಗುತ್ತದೆ. ಈ ತಾಲಿಬಾನ್ ವಿರೋಧಿ ಪಡೆ ನಿನ್ನೆ ನಡೆದ ದಾಳಿಯಲ್ಲಿ ಕೂಡ ತಾಲಿಬಾನ್ ಎದುರಾಳಿಯಾಗಿ ನಿಂತು ಹೋರಾಡಿದೆ.

ಕಾಬೂಲ್​ನಿಂದ ಸುಮಾರು 120 ಕಿಲೋ ಮೀಟರ್ ದೂರದಲ್ಲಿರುವ ಪಂಜ್​ಶೀರ್ ಪ್ರಾಂತ್ಯ ಬೆಟ್ಟ ಗುಡ್ಡಗಳಿಂದ ಕೂಡಿ ಕಿರಿದಾಗಿದೆ. 2001ರಲ್ಲಿ ಅಲ್​ಖೈದಾ ಉಗ್ರರಿಂದ ಹತ್ಯೆಗೀಡಾಗಿದ್ದ ಮುಜಾಹಿದ್ದೀನ್​ನ ಕಮಾಂಡರ್ ಅಹಮದ್ ಷಾ ಮಸೂದ್ ಅವರ ಮಗ ಅಹಮದ್ ಮಸೂದ್ ತಾಲಿಬಾನ್ ಉಗ್ರರನ್ನು ಸದೆಬಡಿಯಲು ತಮ್ಮದೇ ಆದ ತಂಡ ಕಟ್ಟಿಕೊಂಡಿದ್ದಾರೆ. ಅವರು ನಿನ್ನೆ ನಡೆದ ದಾಳಿಯಲ್ಲಿ ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಅಫ್ಘಾನಿಸ್ತಾನದಿಂದ ಅಮೆರಿಕ ಸೇನಾ ಪಡೆ ಹಿಂತಿರುಗಿದ ಬೆನ್ನಲ್ಲೇ ತಾಲಿಬಾನ್ ಪಂಜ್​ಶೀರ್ ಮೇಲೆ ದಾಳಿ ನಡೆಸಿದೆ. ಪಂಜ್​ಶೀರ್ ಪಡೆಯನ್ನು ಸೇರಿರುವ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಟ್ವಿಟ್ಟರ್​ನಲ್ಲಿ ಯಾವುದೇ ಪೋಸ್ಟ್​ಗಳನ್ನು ಮಾಡದಂತೆ ತಡೆಯಲು ಭಾನುವಾರ ಪಂಜ್​ಶೀರ್​ನಲ್ಲಿ ತಾಲಿಬಾನ್ ಇಂಟರ್ನೆಟ್​ ಸೇವೆಯನ್ನು ಸ್ಥಗಿತಗೊಳಿಸಿತ್ತು. ಅಫ್ಘಾನಿಸ್ತಾನವನ್ನು ತಾಲಿಬಾನ್​ನಿಂದ ಕಾಪಾಡಿಕೊಳ್ಳಲು ರಕ್ತ ಹರಿಸಲೂ ಸಿದ್ಧನಿದ್ದೇನೆ ಎಂದು ಸಲೇಹ್ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿದ್ದ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ವಾಪಾಸಾಗಿದೆ. 2001ರಲ್ಲಿ ಅಮೆರಿಕದ ಅವಳಿ ಕಟ್ಟಡದ ಮೇಲೆ ಅಲ್​ಖೈದಾ ಉಗ್ರರು ದಾಳಿ ನಡೆಸಿದಾಗ ಒಸಾಮಾ ಬಿನ್ ಲಾಡೆನ್ ಹಾಗೂ ಉಗ್ರ ಸಂಘಟನೆಗಳ ಮೇಲೆ ತಿರುಗಿ ಬಿದ್ದಿದ್ದ ಅಮೆರಿಕ ಅಫ್ಘಾನಿಸ್ತಾನದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿತ್ತು. ಅಲ್ಲದೆ, ತಾಲಿಬಾನ್ ಉಗ್ರರ ವಿರುದ್ಧ ಸಮರ ಸಾರಿತ್ತು. ತಾಲಿಬಾನ್ ಉಗ್ರರನ್ನು ಅಫ್ಘಾನಿಸ್ತಾನದಿಂದ ಹೊಡೆದೋಡಿಸಿ, ಅವರು ಮತ್ತೆ ಅಫ್ಘಾನ್ ಪ್ರವೇಶ ಮಾಡದಂತೆ 2 ದಶಕಗಳ ಕಾಲ ಕಾವಲು ಕಾದಿತ್ತು. ಆದರೆ, ಇಂಚಿಂಚಾಗಿ ಅಫ್ಘಾನಿಸ್ತಾನವನ್ನು ಆವರಿಸಿಕೊಳ್ಳತೊಡಗಿದ ತಾಲಿಬಾನ್ ಉಗ್ರರು ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ಪಡೆದ ಬಳಿಕ ಅಫ್ಘಾನ್ ಸರ್ಕಾರ ತಾಲಿಬಾನ್​ಗೆ ಶರಣಾಗಿತ್ತು. ಬಳಿಕ, ಅಮೆರಿಕ ಸೇನೆಗೆ ವಾಪಾಸ್ ಹೋಗಲು ಆ. 31ರವರೆಗೆ ತಾಲಿಬಾನ್ ಗಡುವು ನೀಡಿತ್ತು. ಕೊನೆಗೂ ಗಡುವಿಗೂ ಮೊದಲೇ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಹೊರ ನಡೆದಿದೆ.

ಇದನ್ನೂ ಓದಿ: Afghanistan Crisis: ‘ಅಮೆರಿಕದ ಸೋಲಿನಿಂದ ಜಗತ್ತು ಪಾಠ ಕಲಿಯಲಿ’; ಕಾಬೂಲ್ ಏರ್​ಪೋರ್ಟ್​ನಲ್ಲಿ ತಾಲಿಬಾನ್ ಸಂಭ್ರಮಾಚರಣೆ

ಪಂಜ್​ಶೀರ್​ ಪ್ರಾಂತ್ಯದ ಮೇಲೆ ಬೇರೆ ಬೇರೆ ದಿಕ್ಕುಗಳಿಂದ ದಾಳಿ ಮಾಡಿದ ತಾಲಿಬಾನ್​; ತಿರುಗಿಬಿದ್ದು ಹಿಮ್ಮೆಟ್ಟಿಸಿದ ಉತ್ತರ ಮೈತ್ರಿ ಪಡೆ

(Panjshir Attack: Taliban attack Panjshir Valley as US Military troops exit Afghanistan 7-8 Taliban fighters killed)

Published On - 2:33 pm, Tue, 31 August 21