AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತೀಯರೇ, ದಯವಿಟ್ಟು ಪ್ರವಾಸಕ್ಕೆ ಬನ್ನಿ’: ಮಾಲ್ಡೀವ್ಸ್ ಸರ್ಕಾರ

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹದಗೆಟ್ಟ ನಂತರ ಮಾಲ್ಡೀವ್ಸ್ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಇದು ಅಲ್ಲಿನ ಆರ್ಥಿಕತೆಗೆ ಹೊಡೆತ ನೀಡಿದೆ. ಇದೀಗ ನಮ್ಮಲ್ಲಿಗೆ ಬನ್ನಿ, ಪ್ರವಾಸೋದ್ಯಮದ ಭಾಗವಾಗಿ ಎಂದು ಮಾಲ್ಡೀವ್ಸ್ ಭಾರತೀಯರನ್ನು ಕರೆಯುತ್ತಿದೆ. ನಮಗೆ ಇತಿಹಾಸವಿದೆ. ಹೊಸದಾಗಿ ಚುನಾಯಿತರಾದ ನಮ್ಮ ಸರ್ಕಾರ ಕೂಡ ಭಾರತದೊಂದಿಗೆ ಕೆಲಸ ಮಾಡಲು ಬಯಸುತ್ತದೆ. ನಾವು ಯಾವಾಗಲೂ ಶಾಂತಿ ಮತ್ತು ಸೌಹಾರ್ದ ವಾತಾವರಣವನ್ನು ಉತ್ತೇಜಿಸುತ್ತೇವೆ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರು ಹೇಳಿದ್ದಾರೆ.

'ಭಾರತೀಯರೇ, ದಯವಿಟ್ಟು ಪ್ರವಾಸಕ್ಕೆ ಬನ್ನಿ’: ಮಾಲ್ಡೀವ್ಸ್ ಸರ್ಕಾರ
ಇಬ್ರಾಹಿಂ ಫೈಸಲ್
ರಶ್ಮಿ ಕಲ್ಲಕಟ್ಟ
|

Updated on:May 07, 2024 | 12:54 PM

Share

ದೆಹಲಿ ಮೇ 07: ಮಾಲ್ಡೀವ್ಸ್‌ (Maldives) ಜತೆಗಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟ ನಂತರ ಅಲ್ಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ (Indian tourists) ಸಂಖ್ಯೆ ಕುಸಿದಿದ್ದು, ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ಆರ್ಥಿಕತೆಯನ್ನು ಬೆಂಬಲಿಸಿ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್ (Ibrahim Faisal) ಒತ್ತಾಯಿಸಿದ್ದಾರೆ. ಸಂದರ್ಶನವೊಂದರಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಐತಿಹಾಸಿಕ ಸಂಬಂಧಗಳನ್ನು ಒತ್ತಿಹೇಳಿದ ಮಾಲ್ಡೀವಿಯನ್ ಪ್ರವಾಸೋದ್ಯಮ ಸಚಿವರು ಸಹಯೋಗದ ಸರ್ಕಾರದ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

“ನಮಗೆ ಇತಿಹಾಸವಿದೆ. ಹೊಸದಾಗಿ ಚುನಾಯಿತರಾದ ನಮ್ಮ ಸರ್ಕಾರ ಕೂಡ ಭಾರತದೊಂದಿಗೆ ಕೆಲಸ ಮಾಡಲು ಬಯಸುತ್ತದೆ. ನಾವು ಯಾವಾಗಲೂ ಶಾಂತಿ ಮತ್ತು ಸೌಹಾರ್ದ ವಾತಾವರಣವನ್ನು ಉತ್ತೇಜಿಸುತ್ತೇವೆ. ನಮ್ಮ ಜನರು ಮತ್ತು ಸರ್ಕಾರವು ಭಾರತೀಯ ಆಗಮನಕ್ಕೆ ಆತ್ಮೀಯ ಸ್ವಾಗತವನ್ನು ನೀಡುತ್ತದೆ. ಪ್ರವಾಸೋದ್ಯಮ ಸಚಿವನಾಗಿ, ದಯವಿಟ್ಟು ಮಾಲ್ಡೀವ್ಸ್‌ನ ಪ್ರವಾಸೋದ್ಯಮದ ಭಾಗವಾಗಿ ಎಂದು ನಾನು ಭಾರತೀಯರಿಗೆ ಹೇಳಲು ಬಯಸುತ್ತೇನೆ. ನಮ್ಮ ಆರ್ಥಿಕತೆಯು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದ್ದಾರೆ.

ಸಂಬಂಧ ಹದಗೆಟ್ಟಿದ್ದು ಯಾವಾಗ?

ಜನವರಿ 6 ರಂದು ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಪ್ರಾಚೀನ ಲಕ್ಷದ್ವೀಪ ದ್ವೀಪಗಳ ಫೋಟೊ ಮತ್ತು ವಿಡಿಯೊಗಳನ್ನು ಮೋದಿ ಟ್ವೀಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮೂವರು ಮಾಲ್ಡೀವ್ಸ್ ಅಧಿಕಾರಿಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿತ್ತು.

ಪರಿಣಾಮವಾಗಿ, ಸೆಲೆಬ್ರಿಟಿಗಳು ಸೇರಿದಂತೆ ಹಲವಾರು ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿ ನೀಡುವ ಯೋಜನೆಯನ್ನು ಕೈಬಿಟ್ಟರು. ಇದು ಪ್ರವಾಸಿಗರ ಆಗಮನದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಯಿತು.

ಭಾರತದ ಬಹಿಷ್ಕಾರದಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಹೊಡೆತ

sun.mv ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಭಾರತದಿಂದ ಪ್ರವಾಸಿಗರ ಆಗಮನವು ಶೇಕಡಾ 42 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 73,785 ಆಗಮನಕ್ಕೆ ಹೋಲಿಸಿದರೆ, ಮಾಲ್ಡೀವ್ಸ್ ಮೇ 4 ರ ಹೊತ್ತಿಗೆ ಭಾರತದಿಂದ 43,991 ಪ್ರವಾಸಿಗರ ಆಗಮನವನ್ನು ದಾಖಲಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಡಳಿತವು ಅಧಿಕಾರ ವಹಿಸಿಕೊಂಡ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ಹದಗೆಟ್ಟಿದ್ದರಿಂದ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತಕ್ಕೆ ಕಾರಣವಾಗಿತ್ತು.

ಹದಗೆಟ್ಟ ಭಾರತ-ಮಾಲ್ಡೀವ್ಸ್ ಸಂಬಂಧ

ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರು ಚೀನಾದ ಪರ ನಾಯಕ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ತಮ್ಮ ದೇಶದಿಂದ ತೆಗೆದುಹಾಕುವ ಚುನಾವಣಾ ಪ್ರತಿಜ್ಞೆಯನ್ನು ಅವರು ಪುನರುಚ್ಚರಿಸಿದ್ದರು. ಅವರ ಆಯ್ಕೆಯ ನಂತರ, ಮಾಲ್ಡೀವ್ಸ್‌ಗೆ ಭಾರತವು ಉಡುಗೊರೆಯಾಗಿ ನೀಡಿದ ಮೂರು ವಾಯುನೆಲೆಯಲ್ಲಿ ನೆಲೆಸಿದ್ದ 88 ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಮುಯಿಝು ಒತ್ತಾಯಿಸಿದರು. ಭಾರತವು ಮಾಲ್ಡೀವಿಯನ್ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದೆ ಎಂದು ಅವರು ಈ ಹಿಂದೆ ಆರೋಪಿಸಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಪ್ರಭಾವವನ್ನು ಕಡಿಮೆ ಮಾಡಲು ಅವರು ಹೇಳಿದ್ದರು.

ಇದನ್ನೂ ಓದಿ: ಭಾರತ ಯಾರಿಗೆ ಶತ್ರು, ಯಾರಿಗೆ ಮಿತ್ರ? ಚೀನಾ ಮತ್ತಿತರ ದೇಶಗಳ ದೃಷ್ಟಿ ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸರ್ವೆ 

ಇದರ ಹೊರತಾಗಿಯೂ, ಮಾಲ್ಡೀವ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ (IOR) ಭಾರತದ ಪ್ರಮುಖ ಕಡಲ ನೆರೆಯ ರಾಷ್ಟ್ರವಾಗಿ ಉಳಿದಿದೆ. ಇದು ‘ಸಾಗರ್’ (Security and Growth for All in the Region) ಮತ್ತು ಮೋದಿ ಸರ್ಕಾರದ ‘ನೆರೆಹೊರೆ ಮೊದಲು ನೀತಿ’ ಯಂತಹ ಉಪಕ್ರಮಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Tue, 7 May 24