
ಆಕ್ಲೆಂಡ್, ಜುಲೈ 10: ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi in New Zealand) ತಮ್ಮ 3 ದೇಶಗಳ ರಾಜತಾಂತ್ರಿಕ ಪ್ರವಾಸದ ಕೊನೆಯ ಹಂತವಾಗಿ ಇಂದು ನ್ಯೂಜಿಲೆಂಡ್ನ ಆಕ್ಲೆಂಡ್ಗೆ ಆಗಮಿಸಿದ್ದಾರೆ. ಈ ವೇಳೆ ಅಲ್ಲಿನ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ತಾವೇ ಸ್ವತಃ ವಿಮಾನ ನಿಲ್ದಾಣಕ್ಕೆ ಬಂದು ಅತ್ಯಂತ ಆತ್ಮೀಯವಾಗಿ ಮೋದಿಯನ್ನು ಸ್ವಾಗತಿಸಿದ್ದಾರೆ. ಕಳೆದ 4 ದಶಕಗಳಲ್ಲೇ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್ಗೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ಹೀಗಾಗಿ, ನರೇಂದ್ರ ಮೋದಿಯವರ ಈ ಐತಿಹಾಸಿಕ ಭೇಟಿ ಬಹಳ ಮಹತ್ವ ಪಡೆದಿದೆ.
ಏರ್ ಇಂಡಿಯಾ ಒನ್ ವಿಮಾನವು ಆಕ್ಲೆಂಡ್ನಲ್ಲಿ ಇಳಿಯುತ್ತಿದ್ದಂತೆ ಪ್ರಧಾನಿ ಮೋದಿ ಅವರನ್ನು ಪ್ರಧಾನಿ ಲಕ್ಸನ್ ಅವರು ಕೈಕುಲುಕಿ, ಆಲಿಂಗನದೊಂದಿಗೆ ಬರಮಾಡಿಕೊಂಡರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಪ್ರಧಾನಿ ಲಕ್ಸನ್ ಅವರ ಆಮಂತ್ರಣದ ಮೇರೆಗೆ ಪ್ರಧಾನಿ ಮೋದಿ 2 ದಿನಗಳ ಈ ಪ್ರವಾಸ ಕೈಗೊಂಡಿದ್ದಾರೆ.
ಇದನ್ನೂ ಓದಿ: ಉಗ್ರರ ನೆಲೆ ಮೇಲಿನ ದಾಳಿ ಜಗತ್ತಿನಾದ್ಯಂತ ಪ್ರತಿಧ್ವನಿಸಿತು; ಆಸ್ಟ್ರೇಲಿಯಾದಲ್ಲಿ ಮೋದಿಯಿಂದ ಆಪರೇಷನ್ ಸಿಂಧೂರದ ಗುಣಗಾನ
ಆರ್ಥಿಕ ಮತ್ತು ರಕ್ಷಣಾ ಸಹಕಾರ:
ಈ ಭೇಟಿಯ ಅವಧಿಯಲ್ಲಿ ಪ್ರಧಾನಿ ಮೋದಿ ಮತ್ತು ಅವರ ನ್ಯೂಜಿಲೆಂಡ್ ಸಹವರ್ತಿ ಆರ್ಥಿಕತೆ, ವ್ಯಾಪಾರ, ವಾಣಿಜ್ಯ ಮತ್ತು ರಕ್ಷಣಾ ಸಹಕಾರವನ್ನು ವಿಸ್ತರಿಸುವ ಕುರಿತು ವ್ಯಾಪಕ ಚರ್ಚೆ ನಡೆಸಲಿದ್ದಾರೆ. ಕಳೆದ 2 ವರ್ಷಗಳಲ್ಲಿ ಉಭಯ ದೇಶಗಳ ಬಾಂಧವ್ಯದಲ್ಲಿ ಆಗಿರುವ ಪ್ರಗತಿಯನ್ನು ಉಭಯ ನಾಯಕರು ಪರಾಮರ್ಶಿಸಲಿದ್ದಾರೆ.
ಭಾರತೀಯ ಸಮುದಾಯವನ್ನುದ್ದೇಶಿಸಿ ಮೋದಿ ಭಾಷಣ:
ಪ್ರಧಾನಿ ಮೋದಿ ನ್ಯೂಜಿಲೆಂಡ್ನ ಪ್ರಮುಖ ಉದ್ಯಮಿಗಳು ಮತ್ತು ಕ್ರೀಡಾಪಟುಗಳನ್ನು ಭೇಟಿಯಾಗಲಿದ್ದಾರೆ. ಜೊತೆಗೆ, ಅಲ್ಲಿ ನೆಲೆಸಿರುವ ಭಾರಿ ಸಂಖ್ಯೆಯ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯದ ಪ್ರಮುಖ ಸಂಕೇತವಾಗಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾದ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಭೇಟಿ, ಮೆಲ್ಬೋರ್ನ್ ಕ್ಲಬ್ ಜೊತೆ ಐತಿಹಾಸಿಕ ಒಪ್ಪಂದ
ಮೂರು ದೇಶಗಳ ಪ್ರವಾಸ:
ಪ್ರಧಾನಿ ಮೋದಿ ಆಸ್ಟ್ರೇಲಿಯಾದಲ್ಲಿ ಮೂರು ದಿನಗಳ ಪ್ರವಾಸ ಮುಗಿಸಿ ಆಕ್ಲೆಂಡ್ಗೆ ತಲುಪಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ‘3ನೇ ಆಸ್ಟ್ರೇಲಿಯಾ-ಭಾರತ ವಾರ್ಷಿಕ ನಾಯಕರ ಶೃಂಗಸಭೆ’ಯಲ್ಲಿ ಭಾಗವಹಿಸಿದ್ದ ಅವರು, ನಾಗರಿಕ ಪರಮಾಣು ಇಂಧನ ಒಪ್ಪಂದ ಮತ್ತು ನೌಕಾ ಸಹಕಾರಕ್ಕೆ ಸಹಿ ಹಾಕಿದ್ದರು. ಅದಕ್ಕೂ ಮುನ್ನ ಇಂಡೋನೇಷ್ಯಾದಲ್ಲಿ ಅಧ್ಯಕ್ಷ ಪ್ರಬೋವೊ ಸುಬ್ಯಾಂಟೊ ಅವರೊಂದಿಗೆ ರಕ್ಷಣೆ ಮತ್ತು ಕಡಲ ಭದ್ರತೆ ಸೇರಿದಂತೆ 14 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಪ್ರಧಾನಿ ಮೋದಿ ಅವರ ಈ ಆಕ್ಲೆಂಡ್ ಭೇಟಿಯೊಂದಿಗೆ ಅವರ 6 ದಿನಗಳ ಸುದೀರ್ಘ 3 ರಾಷ್ಟ್ರಗಳ ಪ್ರವಾಸ ಮುಕ್ತಾಯಗೊಳ್ಳಲಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 pm, Fri, 10 July 26