ರೋಮ್: ಕ್ಯಾಥೊಲಿಕ್ ಕ್ರೈಸ್ತರು ತಮ್ಮ ಪೂರ್ವಜರನ್ನು ನೆನೆಯುವ ದಿನದಂದು ರೋಮ್ನಲ್ಲಿರುವ ಫ್ರೆಂಚ್ ಮಿಲಿಟರಿ ಸ್ಮಶಾನಕ್ಕೆ ಭೇಟಿ ನೀಡಿದ ಕ್ಯಾಥೊಲಿಕ್ ಕ್ರೈಸ್ತರ ಜಗದ್ಗುರು ಪೋಪ್ ಫ್ರಾನ್ಸಿಸ್, ವಿಶ್ವದ ಶಸ್ತ್ರಾಸ್ತ್ರ ತಯಾರಿಕರಿಗೆ ಮಹತ್ವದ ಸಂದೇಶವೊಂದನ್ನು ನೀಡಿದರು. ‘ಯುದ್ಧವು ನೆಲದ ಮಕ್ಕಳನ್ನು ಕಿತ್ತುಕೊಳ್ಳುತ್ತದೆ. ಇನ್ನು ಸಾಕು ನಿಲ್ಲಿಸಿ’ ಎಂದು ಪೋಪ್ ಸಂದೇಶ ನೀಡಿದರು. ಆಲ್ ಸೋಲ್ಸ್ ಡೇ (ಆತ್ಮಗಳ ದಿನ) ದಿನದಂದು ಫ್ರೆಂಚ್ ಮಿಲಿಟರಿ ಸ್ಮಶಾನದಲ್ಲಿ ನಡೆದ ಆರಾಧನೆಯಲ್ಲಿ (ಮಾಸ್) ಪಾಲ್ಗೊಂಡ ಅವರು, ಸಮಾಧಿಗಳ ಮೇಲೆ ಬಿಳಿ ಗುಲಾಬಿ ಹೂಗಳನ್ನು ಇರಿಸಿದರು. 2ನೇ ವಿಶ್ವಯುದ್ಧದಲ್ಲಿ ಹುತಾತ್ಮರಾದ ಸುಮಾರು 1,900 ಫ್ರೆಂಚ್ ಮತ್ತು ಮೊರೊಕ್ಕೊ ಯೋಧರ ಸಮಾಧಿಗಳು ಈ ಪ್ರದೇಶದಲ್ಲಿವೆ.
ನೆನಪಿನ ದಿನದಂದು ಪ್ರತಿ ವರ್ಷವೂ ಪೋಪ್ ಫ್ರಾನ್ಸಿಸ್ ಈ ಸ್ಮಶಾನಕ್ಕೆ ಭೇಟಿ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ‘ಫ್ರಾನ್ಸ್ಗಾಗಿ ಸಾವನ್ನಪ್ಪಿದ್ದ ಅಪರಿಚಿತ, 1944’ ಎಂಬ ಸಮಾಧಿಯ ಎದುರು ನಿಂತ ಪೋಪ್, ‘ಈ ವ್ಯಕ್ತಿಯ ಹೆಸರೂ ಇಲ್ಲ. ಆದರೆ ದೇವರ ಹೃದಯದಲ್ಲಿ ನಮ್ಮೆಲ್ಲರ ಹೆಸರುಗಳು ನಮೂದಾಗಿವೆ. ಇದು ಯುದ್ಧದ ದುರಂತ’ ಎಂದು ಹೇಳಿದರು. ‘ಸ್ವದೇಶ ಕಾಪಾಡಲು ಮುಂದೆ ಬಂದು, ಅದಕ್ಕಾಗಿ ಜೀವತ್ಯಾಗ ಮಾಡಿದ ಇವರೆಲ್ಲರೂ ದೇವರ ಬಳಿಗೆ ಹೋಗಿದ್ದಾರೆ ಎಂಬುದು ನನ್ನ ವಿಶ್ವಾಸ’ ಎಂದು ನುಡಿದರು.
‘ಯುದ್ಧವೇ ಇಲ್ಲದ ಜಗತ್ತು ಸೃಷ್ಟಿಯಾಗಲು ಇನ್ನೂ ಅದೆಷ್ಟು ಹೋರಾಟಗಳು ನಡೆಯಬೇಕಿದೆಯೋ? ಶಸ್ತ್ರಾಸ್ತ್ರ ಕೈಗಾರಿಕೆಗಳಿಂದ ಯಾವುದೇ ದೇಶದ ಆರ್ಥಿಕತೆ ಬಲ ಪಡೆಯುವ ಪರಿಸ್ಥಿತಿ ಇರಬಾರದು’ ಎಂದು ಅವರು ಅಶಯ ವ್ಯಕ್ತಪಡಿಸಿದರು. ಇಲ್ಲಿರುವ ಸಮಾಧಿಗಳೇ ಶಾಂತಿ ಸಂದೇಶಕ್ಕೆ ಅತ್ಯುತ್ತಮ ಉದಾಹರಣೆಗಳು. ಪ್ರಿಯ ಸೋದರ ಮತ್ತು ಸೋದರಿಯರೇ ನಿಲ್ಲಿರಿ. ಶಸ್ತ್ರಾಸ್ತ್ರ ಉತ್ಪಾದಕರೇ ನಿಲ್ಲಿಸಿ ಎಂದು ಕರೆ ನೀಡಿದ ಅವರು, ಈ ಸಮಾಧಿಯಲ್ಲಿರುವ ಯುದ್ಧ ಸಂತ್ರಸ್ತರಂತೆಯೇ ಎಷ್ಟೋ ಮಕ್ಕಳ ಸ್ವದೇಶವನ್ನು ಯುದ್ಧ ನುಂಗಿ ಹಾಕಿದೆ ಎಂದು ಹೇಳಿದರು.
ಈ ಹಿಂದೆಯೂ ಹಲವು ಬಾರಿ ಪೋಪ್ ಫ್ರಾನ್ಸಿಸ್ ಅವರು, ಶಸ್ತ್ರಾಸ್ತ್ರ ಬಳಕೆ ತ್ಯಜಿಸುವಂತೆ, ಅಣ್ವಸ್ತ್ರಗಳನ್ನು ನಿಷೇಧಿಸುವಂತೆ ವಿಶ್ವ ಸಮುದಾಯಕ್ಕೆ ಕರೆ ನೀಡಿದ್ದರು. ಅಣ್ವಸ್ತ್ರಗಳನ್ನು ಹೊಂದಿರುವುದು ಸಹ ಕೆಲವರ ಉದ್ಧಟತನದ ವರ್ತನೆಗೆ, ಕೆಲವರ ಅಸಹಾಯಕತೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಳೆದ ತಿಂಗಳು ವಿಶೇಷ ಆರಾಧನೆಯ ಸ್ಥಳ ಘೋಷಣೆಯಾದ ನಂತರ ಇಟಲಿಯ ಗುಂಪೊಂದು ಪ್ರತಿಭಟಿಸಿತ್ತು. ಫ್ರೆಂಚ್ ಸೇನೆಗೆ ನೆರವಾಗಲು ಬಂದಿದ್ದ ಮೊರೊಕ್ಕೊ ಸೈನಿಕರು ಈ ಪ್ರಾಂತ್ಯದಲ್ಲಿ ನಡೆಸಿದ್ದ ಅತ್ಯಾಚಾರದ ದಾಖಲೆಗಳನ್ನು ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: Kedarnath: ನ. 5ರಂದು ಕೇದಾರನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಶಂಕರಾಚಾರ್ಯರ ಸಮಾಧಿ ಸ್ಥಳದ ಅನಾವರಣ
ಇದನ್ನೂ ಓದಿ: ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ರನ್ನು ಭೇಟಿಯಾದ ಪ್ರಧಾನಿ ಮೋದಿ; ಭಾರತಕ್ಕೆ ಆಹ್ವಾನ