ಅಫ್ಘಾನಿಸ್ತಾನದಲ್ಲಿ ವಿದೇಶೀ ಕರೆನ್ಸಿ ಸಂಪೂರ್ಣ ನಿಷೇಧ; ಅಫ್ಘಾನ್ ಕರೆನ್ಸಿಯನ್ನೇ ಬಳಸಲು ತಾಲಿಬಾನ್ ಸೂಚನೆ
ಅಫ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಚಲಾವಣೆ ಆಗುವುದು ಯುಎಸ್ ಡಾಲರ್. ಹಾಗೇ ಅಲ್ಲಿನ ಗಡಿ ಪ್ರದೇಶಗಳ ಜನರು ತಮ್ಮ ನಿತ್ಯದ ವ್ಯಾಪಾರ-ವ್ಯವಹಾರಕ್ಕಾಗಿ ಪಾಕಿಸ್ತಾನದಂಥ ನೆರೆ ರಾಷ್ಟ್ರಗಳ ಕರೆನ್ಸಿ ಬಳಕೆ ಮಾಡುತ್ತಾರೆ.
ಅಫ್ಘಾನಿಸ್ತಾನದಲ್ಲಿ ವಿದೇಶೀ ಕರೆನ್ಸಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾಗಿ ಇಂದು ತಾಲಿಬಾನ್ (Taliban) ಘೋಷಣೆ ಮಾಡಿದೆ. ಸದ್ಯ ಅಫ್ಘಾನ್ನಲ್ಲಿರುವ ಆರ್ಥಿಕ ಪರಿಸ್ಥಿತಿ ಪರಿಗಣಿಸಿ ಮತ್ತು ಇಲ್ಲಿನ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ದೇಶದ ಜನರು ತಮ್ಮ ನಿತ್ಯದ ಪ್ರತಿ ವ್ಯವಹಾರದಲ್ಲಿಯೂ ಅಫ್ಘಾನಿಸ್ತಾನದ ಕರೆನ್ಸಿಯನ್ನೇ ಬಳಸಬೇಕು ಎಂಬ ನಿರ್ಣಯ ಜಾರಿ ಮಾಡಲಾಗಿದೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲ ಈ ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಲಾಗುವುದು ಎಂದೂ ತಾಲಿಬಾನ್ ಘೋಷಿಸಿದೆ.
ಅಫ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಚಲಾವಣೆ ಆಗುವುದು ಯುಎಸ್ ಡಾಲರ್. ಹಾಗೇ ಅಲ್ಲಿನ ಗಡಿ ಪ್ರದೇಶಗಳ ಜನರು ತಮ್ಮ ನಿತ್ಯದ ವ್ಯಾಪಾರ-ವ್ಯವಹಾರಕ್ಕಾಗಿ ಪಾಕಿಸ್ತಾನದಂಥ ನೆರೆ ರಾಷ್ಟ್ರಗಳ ಕರೆನ್ಸಿ ಬಳಕೆ ಮಾಡುತ್ತಾರೆ. ಇದೀಗ ಅಫ್ಘಾನಿಸ್ತಾನದಲ್ಲಿ ಬರ ಎದುರಾಗಿದೆ..ನಗದು ಕೊರತೆ ಉಂಟಾಗಿದೆ. ಸಾಮೂಹಿಕ ಹಸಿವು, ವಲಸೆ ಬಿಕ್ಕಟ್ಟನ್ನು ಅಫ್ಘಾನ್ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಬಿಲಿಯನ್ ಡಾಲರ್ಗಳಷ್ಟು ಹಣವನ್ನು ನಮಗಾಗಿ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಬ್ಯಾಂಕ್ಗೆ ತಾಲಿಬಾನ್ ಒತ್ತಾಯಿಸುತ್ತಿದೆ.
ಅಫ್ಘಾನಿಸ್ತಾನದಿಂದ ಯುಎಸ್ ಪಡೆಗಳು ಹೊರಟುಹೋದ ಬಳಿಕ ಅಲ್ಲಿ ಹಣಕಾಸು ನೆರವು ನೀಡಲು ಅಂತಾರಾಷ್ಟ್ರೀಯ ದಾನಿಗಳೂ ಹಿಂದೇಟು ಹಾಕುತ್ತಿದ್ದಾರೆ. ಎಷ್ಟೋ ಆರ್ಥಿಕ ಮೂಲಗಳು ಮುಚ್ಚಿಹೋಗಿವೆ. ಅದಕ್ಕೂ ಮಿಗಿಲಾಗಿ ಅಫ್ಘಾನಿಸ್ತಾನದಲ್ಲಿ ಇನ್ನೂ ಸ್ಥಿರತೆಯೇ ಮೂಡಿಲ್ಲ. ಒಂದಲ್ಲ ಒಂದು ಕಡೆ ಸ್ಫೋಟ, ಪ್ರಾಣ ಹಾನಿ ನಡೆಯುತ್ತಿದೆ. ನಿನ್ನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಅಫ್ಘಾನ್ನ ಅತಿ ದೊಡ್ಡ ಮಿಲಿಟರಿ ಆಸ್ಪತ್ರೆಯ ಬಳಿ ಎರಡು ಸ್ಫೋಟಗಳು ಸಂಭವಿಸಿ 19 ಜನರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಮಧ್ಯೆ ತಾಲಿಬಾನಿಗಳು ತಾವು ಆಡಳಿತ ಶುರು ಮಾಡಿದ್ದಾಗಿ ಹೇಳಿಕೊಂಡು ತಮ್ಮದೇ ಒಸ ನಿಯಮಗಳನ್ನು ತರುತ್ತಿವೆ.
Published On - 9:49 am, Wed, 3 November 21