ಇಂಡೋ-ಫೆಸಿಫಿಕ್ ಪ್ರದೇಶ ಸೇರಿ, ಇಡೀ ಜಗತ್ತಿನಾದ್ಯಂತ ಶಾಂತಿ ಸ್ಥಾಪನೆಗೆ ಆದ್ಯತೆ ನೀಡಬೇಕು ಎಂದು ಪ್ರಧಾನಿ ಮೋದಿ (PM Modi) ಹೇಳಿದ್ದಾರೆ. ಅವರು ಶುಕ್ರವಾರ ವಾಷಿಂಗ್ಟನ್ ಡಿಸಿಯ ಶ್ವೇತಭವನದಲ್ಲಿ ನಡೆದ, ಅಮೆರಿಕಾ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ರಾಷ್ಟ್ರನಾಯಕರನ್ನೊಳಗೊಂಡ ಕ್ವಾಡ್ ಶೃಂಗಸಭೆ (Quad Summit)ಯಲ್ಲಿ ಮಾತನಾಡಿದರು. ಸದ್ಯ ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಅಮೆರಿಕ ಪ್ರವಾಸ (PM Modi US Visit)ದಲ್ಲಿದ್ದಾರೆ. ನಿನ್ನೆ ನಡೆದ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಚರ್ಚೆ ನಡೆಸಿದ್ದಾರೆ.
2004ರಲ್ಲಿ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಸುನಾಮಿ ಎದ್ದಿತ್ತು. ಆಗ ಅವರಿಗೆ ಸಹಾಯ ಮಾಡಲು ನಮ್ಮ ಕ್ವಾಡ್ ರಾಷ್ಟ್ರಗಳು ಒಂದಾಗಿದ್ದವು. ಅದಾದ ಮೇಲೆ ಇದೇ ಮೊದಲ ಬಾರಿಗೆ ನಾವು ಒಗ್ಗಟ್ಟಾಗುತ್ತಿದ್ದೇವೆ. ಇಡೀ ಜಗತ್ತೇ ಕೊವಿಡ್ 19 ವಿರುದ್ಧ ಹೋರಾಡುತ್ತಿರುವಾಗ ನಾವು ಮನುಕುಲದ ಕಲ್ಯಾಣಕ್ಕಾಗಿ ಮತ್ತೊಮ್ಮೆ ಒಂದಾಗಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಹಾಗೇ, ನಮ್ಮ ಸಾಮಾನ್ಯ ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ಕ್ವಾಡ್ ಸಕಾರಾತ್ಮಕ ಚಿಂತನೆಯ ಮೂಲಕ ಮುಂದುವರಿಯಲು ನಿರ್ಧರಿಸಿದೆ. ಇದೀಗ ಕ್ವಾಡ್ ಶೃಂಗಸಭೆಯಲ್ಲಿ ಪೂರೈಕೆ ಸರಪಳಿ, ಜಾಗತಿಕ ಭದ್ರತೆ, ಹವಾಮಾನ ಬದಲಾವಣೆ ವಿರುದ್ಧ ಕ್ರಮ, ಕೊವಿಡ್ 19 ವಿರುದ್ಧ ಹೋರಾಟ, ತಂತ್ರಜ್ಞಾನದಲ್ಲಿ ಸಹಕಾರದ ಬಗ್ಗೆ ಕ್ವಾಡ್ ಸದಸ್ಯರೊಂದಿಗೆ ಚರ್ಚಿಸಿದ್ದು ನನಗೆ ತೃಪ್ತಿಕೊಟ್ಟಿದೆ ಎಂದಿದ್ದಾರೆ. ಕ್ವಾಡ್ ಮೂಲಕ ನಾವು ಜಗತ್ತಿನಲ್ಲಿ ಶಾಂತಿ ಮತ್ತು ಸಮೃದ್ಧಿ ಸ್ಥಾಪಿಸುತ್ತೇವೆ ಎಂಬ ಆತ್ಮವಿಶ್ವಾಸ ಇದೆ ಎಂದೂ ಭರವಸೆ ವ್ಯಕ್ತಪಡಿಸಿದ್ದಾರೆ. ಕ್ವಾಡ್ ವತಿಯಿಂದ ಹಮ್ಮಿಕೊಳ್ಳುತ್ತಿರುವ ಕೊವಿಡ್ 19 ಲಸಿಕೆ ಸಹಕಾರದ ಬಗ್ಗೆ ಮಾತನಾಡಿದ ಮೋದಿ, ಇದು ಖಂಡಿತವಾಗಿಯೂ ಇಂಡೋ-ಫೆಸಿಪಿಕ್ ರಾಷ್ಟ್ರಗಳಿಗೆ ತುಂಬ ಸಹಾಯ ಮಾಡಲಿದೆ ಎಂದಿದ್ದಾರೆ.
ಸವಾಲುಗಳನ್ನು ಎದುರಿಸುತ್ತೇವೆ
ಅಮರಿಕ ಅಧ್ಯಕ್ಷ ಜೋ ಬೈಡೆನ್ ಮಾತನಾಡಿ, ಕೊವಿಡ್ 19ನಿಂದ ಹವಾಮಾನ ವೈಪರೀತ್ಯದವರೆಗಿನ ಸಮಸ್ಯೆಗಳನ್ನು ಬಗೆಹರಿಸಲು ನಾಲ್ಕು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಯುಎಸ್, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ಗಳು ಮುಂದೆ ಬಂದಿವೆ. ನಾವೆಲ್ಲ ಒಂದಾಗಿ ಖಂಡಿತ ಸವಾಲುಗಳನ್ನು ಎದುರಿಸುತ್ತೇವೆ ಎಂದಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮಾತನಾಡಿ, ಇಂಡೋ-ಫೆಸಿಫಿಕ್ ಅನೇಕ ಸವಾಲುಗಳನ್ನು ಹೊಂದಿದೆ. ಈ ಪ್ರದೇಶವನ್ನು ದಬ್ಬಾಳಿಕೆಯಿಂದ ಮುಕ್ತ ಮಾಡಬೇಕಿದೆ. ಇಲ್ಲಿನ ಅಭಿವೃದ್ಧಿಗಾಗಿ ನಾವೆಲ್ಲ ಒಟ್ಟಾಗಲೇಬೇಕು ಎಂದು ಹೇಳಿದರು.
ಇದನ್ನೂ ಓದಿ:ದಾವಣಗೆರೆಯಲ್ಲಿ ಮೊಬೈಲ್ ಟವರ್ ಜನರೇಟರ್ಗೆ ಆಕಸ್ಮಿಕ ಬೆಂಕಿ! ಭಾರಿ ಪ್ರಮಾಣದಲ್ಲಿ ಆವರಿಸಿದ ಹೊಗೆ
Virat Kohli: ತಂಡದ ಸೋಲಿಗೆ ವಿರಾಟ್ ಕೊಹ್ಲಿ ನೇರವಾಗಿ ದೂರಿದ್ದು ಯಾರನ್ನ ಗೊತ್ತಾ?
(Quad would act as a force for global good Says PM Narendra Modi at Quad summit In US)
Published On - 8:41 am, Sat, 25 September 21