ಜಪಾನ್: ಸಮುದ್ರ ತೀರವೊಂದರಲ್ಲಿರುವ ಡಾಲ್ಫಿನ್ ಜನರನ್ನು ಕಚ್ಚುತ್ತಿರುವುದರಿಂದ ಹತ್ತಿರ ಹೋಗದಂತೆ ಬೀಚ್ ಸಿಬ್ಬಂದಿ ಎಚ್ಚರಿಸಿದೆ
ಈ ಬಾರಿಯ ಬೇಸಿಗೆಗಾಗಿ ಬೀಚನ್ನು ಜುಲೈ 9 ರಂದು ಅಧಿಕೃತವಾಗಿ ಓಪನ್ ಮಾಡಿದ ಬಳಿಕ ಡಾಲ್ಫಿನ್ ನಿಂದ ಕಚ್ಚಿಸಿಕೊಂಡ ಕನಿಷ್ಟ 10 ಪ್ರಕರಣಗಳು ವರದಿಯಾಗಿವೆಯೆಂದು ಬೀಚ್ ಸಿಬ್ಬಂದಿ ಹೇಳಿದೆ.
ಜಪಾನ್: ಜಲಚರ ಪ್ರಾಣಿ (aquatic animal) ಡಾಲ್ಫಿನ್ (dolphin) ಸಾಮಾನ್ಯವಾಗಿ ನಿರುಪದ್ರವಿ ಮತ್ತು ಸ್ನೇಹಜೀವಿಯಾಗಿದೆ. ಆದರೆ ಜಪಾನಿನ ಫುಕ್ಯು ಪ್ರಾಂತ್ಯದಲ್ಲ್ಲಿ (Fukui region) ಬೀಚ್ ಗಳಿಗೆ ವಿಹಾರಕ್ಕೆಂದು ಹೋಗುವವರಿಗೆ ಈ ಚೆಂದದ ಜೀವಿಯನ್ನು ದೂರದಿಂದಲೇ ನೋಡಿ ಹತ್ತಿರಕ್ಕೆ ಯಾವ ಕಾರಣಕ್ಕೂ ಹೋಗಬೇಡಿ ಎಂಬ ಎಚ್ಚರಿಕೆ ನೀಡಲಾಗಿದೆ. ಬೀಚ್ ಅಧಿಕಾರಿಗಳ ಪ್ರಕಾರ ಅದ್ಯಾವುದೋ ಕಾರಣಕ್ಕೆ ಮಾನವರಿಂದ ಮುನಿಸಿಕೊಂಡಿರುವ ಅಲ್ಲಿನ ಒಂದು ಡಾಲ್ಫಿನ್ ತೀರದಲ್ಲಿ ಈಜಾಡುವವರನ್ನು ಕಚ್ಚಲು ಮುಂದಾಗುತ್ತಿದೆಯಂತೆ.
ಡಾಲ್ಫಿನ್ ತೀರದ ಭಾಗಕ್ಕೆ ಬಂದು ಜನರಿಗೆ ತೊಂದರೆ ಕೊಡುವುದನ್ನು ತಪ್ಪಿಸಲು ಬೀಚ್ ಸಿಬ್ಬಂದಿ ಅಲ್ಟ್ಟ್ರಾಸೋನಿಕ್ ತರಂಗಗಳನ್ನು ಹೊಮ್ಮಿಸುವ ಒಂದು ಯಂತ್ರವನ್ನು ತೀರದ ಭಾಗದಲ್ಲಿ ಇಟ್ಟಿದ್ದಾರೆ.
ಈ ಸುಂದರ ಪ್ರಾಣಿ ಭಾರಿ ಪ್ರಮಾಣದ ಅಭಿಮಾನಿ ಬಳಗ ಹೊಂದಿದೆ ಮಾರಾಯ್ರೇ. ಅದರೆ ಅದರ ಹತ್ತಿರ ಹೋಗುವ ಮತ್ತು ಮುಟ್ಟುವ ಪ್ರಯತ್ನ ಮಾಡದಂತೆ ಎಚ್ಚರಿಕೆಯ ಫಲಕವನ್ನು ತೀರದಲ್ಲಿ ನೆಡಲಾಗಿದೆ.
ಈ ಬಾರಿಯ ಬೇಸಿಗೆಗಾಗಿ ಬೀಚನ್ನು ಜುಲೈ 9 ರಂದು ಅಧಿಕೃತವಾಗಿ ಓಪನ್ ಮಾಡಿದ ಬಳಿಕ ಡಾಲ್ಫಿನ್ ನಿಂದ ಕಚ್ಚಿಸಿಕೊಂಡ ಕನಿಷ್ಟ 10 ಪ್ರಕರಣಗಳು ವರದಿಯಾಗಿವೆಯೆಂದು ಬೀಚ್ ಸಿಬ್ಬಂದಿ ಹೇಳಿದೆ.
ಎರಡು ಸಂದರ್ಭಗಳಲ್ಲಿ ರಕ್ಷಣೆಗಾಗಿ ಫೈರ್ ಬ್ರಿಗೇಡ್ ಸಿಬ್ಬಂದಿಯನ್ನು ಕರೆಸಬೇಕಾಯಿತು ಅಂತ ಸ್ಥಳೀಯ ಅಧಿಕಾರಿಯೊಬ್ಬರು ಹೇಳಿರುವುದನ್ನು ಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಆ ಎರಡು ಘಟನೆಗಳಲ್ಲಿ 40 ರ ಪ್ರಾಯದ ಇಬ್ಬರು ಪುರುಷರು ಸಮುದ್ರ ತೀರದಲ್ಲಿ ಈಜುತ್ತಿದ್ದರಂತೆ.
ಸದ್ಯಕ್ಕಂತೂ ಜನ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ, ಆದರೆ ಡಾಲ್ಫಿನ್ ತೀವ್ರ ಸ್ವರೂಪದ ಗಾಯಗಳಾಗುವ ಹಾಗೆ ಹಲ್ಲೆ ನಡೆಸಬಹುದೆಂದು ಬೀಚ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
‘ಸಾಮಾನ್ಯವಾಗಿ ಡಾಲ್ಫಿನ್ ಗಳು ಸೌಮ್ಯಸ್ವಭಾವದ ಸುಂದರ ಪ್ರಾಣಿಗಳು. ಆದರೆ ಅವುಗಳೊಂದಿಗೆ ನಿರ್ಲಕ್ಷ್ಯ ಭಾವ ಮತ್ತು ಒರಟಾಗಿ ವರ್ತಿಸಿದರೆ ಅವು ನಿಮ್ಮನ್ನು ಕಚ್ಚಿ ಗಾಯಗೊಳಿಸಬಲ್ಲವು,’ ಎಂದುದ ಫುಕ್ಯು ಪೊಲೀಸ್ ತನ್ನ ಸೋಮವಾರದ ಟ್ವೀಟ್ ಒಂದರಲ್ಲಿ ಎಚ್ಚರಿಸಿದೆ.
‘ಸಮುದ್ರ ತೀರದಲ್ಲಿ ಅದೇನಾದರೂ ನಿಮ್ಮ ಕಣ್ಣಿಗೆ ಬಿದ್ದರೆ ಹತ್ತಿರ ಹೋಗುವ ಪ್ರಯತ್ನ ಸರ್ವಥಾ ಮಾಡಬೇಡಿ,’ ಎಂದು ಹೇಳಿರುವ ಪೊಲೀಸ್ ಕಳೆದ ರವಿವಾರ ವ್ಯಕ್ತಿಯೊಬ್ಬ ಡಾಲ್ಫಿನ್ ಕಚ್ಚಿಸಿಕೊಂಡಿದ್ದನ್ನು ಉಲ್ಲೇಖಿಸಿದೆ.
ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಅಧಿಕಾರಿ ಮಸಾಕಿ ಯಸುಯೀ ಅವರ ಪ್ರಕಾರ ಕೇವಲ ಒಂದು ಡಾಲ್ಫಿನ್ ಮಾತ್ರ ಜನರನ್ನು ಕಚ್ಚಲಾರಂಭಿಸಿದೆ. ಏಪ್ರಿಲ್ ನಲ್ಲಿ ಇದೇ ಢಾಲ್ಪಿನ್ ಮತ್ತೊಂದು ಬೀಚ್ ನಲ್ಲಿ ಕಾಣಿಸಿಕೊಂಡಿತ್ತು ಎಂದು ಅವರು ಹೇಳಿದ್ದಾರೆ ಅಂತ ಎಎಫ್ಪಿ ವರದಿ ಮಾಡಿದೆ.
‘ಡಾಲ್ಫಿನ್ ಗೆ ಅದರ ದೇಹದ ಕೆಲಭಾಗಳನ್ನು ಮುಟ್ಟುವುದು ಇಷ್ಟವಾಗುವುದಿಲ್ಲ ಅಂತ ನಮಗೆ ಗೊತ್ತಿದೆ. ಅದರ ಮೂಗಿನ ತುದಿ ಮತ್ತು ಕಿವಿರಿನ ಹಿಂಭಾಗ ಮುಟ್ಟುವುದು ಡಾಲ್ಫಿನ್ಗಳಿಗೆ ಇಷ್ಟವಾಗುವುದಿಲ್ಲ,’ ಎಂದು ಯಸುಯೀ ಹೇಳಿದ್ದಾರೆ.
ಬೀಚ್ ಗೆ ಹೋದ ಜನ ಡಾಲ್ಫಿನನ್ನು ಮುಟ್ಟುತ್ತಿರುವ, ಮುಟ್ಟಲು ಪ್ರಯತ್ನಿಸುತ್ತಿರುವ ದೃಶ್ಯಗಳ ವಿಡಿಯೋಗಳು ಟ್ವಿಟರ್ ನಲ್ಲಿ ಪೋಸ್ಟ್ ಆಗಿವೆ ಎಂದು ಅವರು ಹೇಳಿದ್ದಾರೆ.
‘ಬೀಚ್ ಗೆ ಭೇಟಿ ನೀಡುವ ಜನ ಡಾಲ್ಫಿನ್ ಅನ್ನು ದೂರದಿಂದಲೇ ಗಮನಿಸಬೇಕು ಎಂದು ನಾವು ಮನವಿ ಮಾಡಿಕೊಳ್ಳುತ್ತೇವೆ,’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.