30 ವರ್ಷಗಳಿಂದಲೂ ಟಾಯ್ಲೆಟ್​​ನಲ್ಲೇ ಸಮೋಸಾ ತಯಾರಿಸುತ್ತಿದ್ದ ರೆಸ್ಟೋರೆಂಟ್​; ಮಾಂಸ, ಚೀಸ್​ಗೆಲ್ಲ ಹುಳು ಹಿಡಿದಿತ್ತು !

ಬರೀ ಸಮೋಸಾವನ್ನು ಮಾತ್ರವಲ್ಲ, ಉಳಿದ ತಿಂಡಿಗಳನ್ನೂ ಕೂಡ ಅದು ಶೌಚಗೃಹದಲ್ಲಿಯೇ ತಯಾರಿಸುತ್ತಿತ್ತು. ಅಷ್ಟೇ ಅಲ್ಲ, ಅವಧಿ ಮುಗಿದ ಮಾಂಸ, ಚೀಸ್​ಗಳನ್ನೆಲ್ಲ ಯಥೇಚ್ಛವಾಗಿ ಬಳಕೆ ಮಾಡುತ್ತಿತ್ತು.

30 ವರ್ಷಗಳಿಂದಲೂ ಟಾಯ್ಲೆಟ್​​ನಲ್ಲೇ ಸಮೋಸಾ ತಯಾರಿಸುತ್ತಿದ್ದ ರೆಸ್ಟೋರೆಂಟ್​; ಮಾಂಸ, ಚೀಸ್​ಗೆಲ್ಲ ಹುಳು ಹಿಡಿದಿತ್ತು !
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Apr 26, 2022 | 5:14 PM

ಹೋಟೆಲ್​, ರೆಸ್ಟೋರೆಂಟ್​-ಚಿಕ್ಕಪುಟ್ಟ ಉಪಾಹಾರಗೃಹಗಳಲ್ಲಿ ತಿಂಡಿ ತಿನ್ನುವುದೆಂದರೆ ನಮ್ಮಲ್ಲೇ ಅನೇಕರಿಗೆ ತುಂಬ ಇಷ್ಟ. ಹೀಗೆ ಹೊರಗಿನ ತಿಂಡಿಯನ್ನು ಚಪ್ಪರಿಸಿಕೊಂಡು ತಿನ್ನುವ ನಾವು ಅವುಗಳು ಸಿದ್ಧವಾಗುವ ಸ್ಥಳ, ಅಲ್ಲಿನ ಸ್ವಚ್ಛತೆಯನ್ನು ಎಂದಿಗೂ ನೋಡಲು ಹೋಗುವುದಿಲ್ಲ. ಹಾಗಂತ ಎಲ್ಲ ಹೋಟೆಲ್​ಗಳಲ್ಲೂ ಸ್ವಚ್ಛತೆ ಪರಿಪಾಲನೆ ಮಾಡುವುದಿಲ್ಲ ಎಂದಲ್ಲ. ಆದರೆ ಅಪವಾದಕ್ಕೆಂಬಂತೆ ಕೆಲವು ಹೋಟೆಲ್​-ಉಪಾಹಾರಗೃಹಗಳು, ರೆಸ್ಟೋರೆಂಟ್​​ಗಳು ಅನೈರ್ಮಲ್ಯದ ಕಾರಣಕ್ಕೆ ಸುದ್ದಿಯಾಗುತ್ತವೆ. ಹಾಗೇ ಇದೀಗ ಸೌದಿ ಅರೇಬಿಯಾದ ಜೆಡ್ಡಾ ಎಂಬ ನಗರದಲ್ಲಿನ ಒಂದು ರೆಸ್ಟೋರೆಂಟ್​​ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದೆ. ಸ್ಥಳೀಯ ಮಾಧ್ಯಮವೊಂದು ಈ ರೆಸ್ಟೋರೆಂಟ್​​ ಮಾಡಿದ ಕೆಲಸವನ್ನು ವರದಿ ಮಾಡಿದ ಬೆನ್ನಲ್ಲೇ, ಸ್ಥಳೀಯ ಆಹಾರ ಸುರಕ್ಷತಾ ಪ್ರಾಧಿಕಾರ ಅದರ ಬಾಗಿಲನ್ನೂ ಮುಚ್ಚಿಸಿದೆ.

ಈ ರೆಸ್ಟೋರೆಂಟ್​​​ ಸಮೋಸಾ ತಿಂಡಿಗೆ ಹೆಸರಾಗಿತ್ತು. ಬೇರೆ ತಿಂಡಿಗಳು ಸಿಗುತ್ತಿದ್ದರೂ, ಇಲ್ಲಿನ ಸಮೋಸಾ ಗ್ರಾಹಕರಿಗೆ ಅಚ್ಚುಮೆಚ್ಚಾಗಿತ್ತು. ಆದರೆ ಸಮೋಸಾವನ್ನು ರೆಸ್ಟೋರೆಂಟ್​ ಬರೋಬ್ಬರಿ 30 ವರ್ಷಗಳಿಂದಲೂ ಟಾಯ್ಲೆಟ್​ ರೂಮಿನಲ್ಲಿ ತಯಾರು ಮಾಡುತ್ತಿತ್ತು ಎಂಬ ಸತ್ಯ ಈಗ ಹೊರಬಿದ್ದಿದೆ. ಹೋಟೆಲ್​​ ಮಾಡುತ್ತಿದ್ದ ಗಲೀಜು ಕೆಲಸದ ಬಗ್ಗೆ ಅದ್ಯಾರೋ ನೀಡಿದ ಖಚಿತ ಮಾಹಿತಿ ಮೇರೆಗೆ ಜೆಡ್ಡಾ ಸ್ಥಳೀಯ ಆಡಳಿತ ಕ್ರಮ ಕೈಗೊಂಡಿತ್ತು. ಈ ರೆಸ್ಟೋರೆಂಟ್ ಮೇಲೆ ರೇಡ್ ಮಾಡಿತ್ತು.  ಅಲ್ಲಿನ ಕೆಲಸಗಾರರನ್ನು, ಸಿಬ್ಬಂದಿಯನ್ನು ವಿಚಾರಣೆ ಮಾಡಿದಾಗ ನಿಜ ಒಪ್ಪಿಕೊಂಡಿದ್ದಾರೆ. ಕಳೆದ 30ವರ್ಷಗಳಿಂದಲೂ ಹೀಗೇ ನಡೆದುಕೊಂಡು ಬಂದಿದೆ ಎಂದೂ ಹೇಳಿದ್ದಾರೆ.

ಬರೀ ಸಮೋಸಾವನ್ನು ಮಾತ್ರವಲ್ಲ, ಉಳಿದ ತಿಂಡಿಗಳನ್ನೂ ಕೂಡ ಅದು ಶೌಚಗೃಹದಲ್ಲಿಯೇ ತಯಾರಿಸುತ್ತಿತ್ತು. ಅಷ್ಟೇ ಅಲ್ಲ, ಅವಧಿ ಮುಗಿದ ಮಾಂಸ, ಚೀಸ್​ಗಳನ್ನೆಲ್ಲ ಯಥೇಚ್ಛವಾಗಿ ಬಳಕೆ ಮಾಡುತ್ತಿತ್ತು. ಅಲ್ಲಿದ್ದ ಸಂಸ್ಕರಿಸಿದ ಆಹಾರಗಳ ಪ್ಯಾಕೆಟ್​​ನ್ನು ಪರಿಶೀಲಿಸಿದಾಗ ಸ್ಥಳೀಯ ಆಡಳಿತದ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅವಧಿ ಮುಗಿದು ಎರಡು ವರ್ಷಗಳೇ ಕಳೆದು ಹೋದ ಮಾಂಸ, ಚೀಸ್​ಗಳೂ ಅಲ್ಲಿವೆ ಎಂದು ಗಲ್ಫ್​ ನ್ಯೂಸ್ ಕೂಡ ವರದಿ ಮಾಡಿದೆ. ಕೆಲವಕ್ಕಂತೂ ಇರುವೆಗಳು, ಕೀಟಗಳು ಮುತ್ತಿಕೊಂಡಿವೆ.

ಈ ರೆಸ್ಟೋರೆಂಟ್​​ನಲ್ಲಿರುವ ಯಾವುದೇ ಉದ್ಯೋಗಿಯ ಬಳಿಯೂ ಹೆಲ್ತ್ ಕಾರ್ಡ್​ ಇಲ್ಲ. ರೆಸಿಡೆನ್ಸಿ ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂಬುದನ್ನೂ ಅಧಿಕಾರಿಗಳು ಹೇಳಿದ್ದಾರೆ. ಅನೈರ್ಮಲ್ಯತೆ, ಆಹಾರ ಸುರಕ್ಷತಾ ಕಾನೂನು ಉಲ್ಲಂಘನೆಗಳ ಕಾರಣಕ್ಕೆ ಸದ್ಯಕ್ಕೆ ಈ ಉಪಾಹಾರಗೃಹವನ್ನು ಮುಚ್ಚಲಾಗಿದೆ.  ಜನವರಿಯಲ್ಲಿ ಜೆಡ್ಡಾದ ಪ್ರಸಿದ್ಧ ಷಾವರ್ಮಾ ರೆಸ್ಟೋರೆಂಟ್ ಕೂಡ ಸ್ವಚ್ಛತೆ ಪಾಲನೆ ಮಾಡದೆ ಇರುವುದಕ್ಕೇ ಮುಚ್ಚಲ್ಪಟ್ಟಿತ್ತು.

ಇದನ್ನೂ ಓದಿ: ‘ವಿಲ್ ಸ್ಮಿತ್​ ಒಳ್ಳೆಯ ವ್ಯಕ್ತಿ’; ಸಂಗೀತ ನಿರ್ದೇಶಕ ಎ.ಆರ್​​. ರೆಹಮಾನ್ ಮೆಚ್ಚುಗೆಯ ಮಾತು