ಗೆಲುವಿನ ಭರವಸೆ ಕಳೆದುಕೊಂಡ ರಷ್ಯಾ, 3ನೇ ಮಹಾಯುದ್ಧದ ಬೆದರಿಕೆಗೆ ಉಕ್ರೇನ್ ತಿರುಗೇಟು; ಸಂಘರ್ಷದ 10 ಮುಖ್ಯ ಬೆಳವಣಿಗೆಗಳು
ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು 3ನೇ ವಿಶ್ವಯುದ್ಧದ ಬೆದರಿಕೆ ಹಾಕಿದ್ದರು. ಈ ಹೇಳಿಕೆಯನ್ನು ವ್ಯಂಗ್ಯ ಮಾಡಿರುವ ಉಕ್ರೇನ್, ‘ರಷ್ಯಾಗೆ ಗೆಲುವಿನ ವಿಶ್ವಾಸವೇ ಹೊರಟು ಹೋಗಿದೆ’ ಎಂದು ವ್ಯಂಗ್ಯವಾಡಿದೆ.
ತನ್ನ ಮಾತು ಮೀರಿ ಉಕ್ರೇನ್ಗೆ ಸೇನಾ ನೆರವು ಒದಗಿಸುವ ದೇಶಗಳ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹರಿಹಾಯ್ದಿದ್ದರು. ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು 3ನೇ ವಿಶ್ವಯುದ್ಧದ ಬೆದರಿಕೆ ಹಾಕಿದ್ದರು. ಈ ಹೇಳಿಕೆಗಳನ್ನು ವ್ಯಂಗ್ಯ ಮಾಡಿರುವ ಉಕ್ರೇನ್, ‘ರಷ್ಯಾಗೆ ಗೆಲುವಿನ ವಿಶ್ವಾಸವೇ ಹೊರಟು ಹೋಗಿದೆ’ ಎಂದು ವ್ಯಂಗ್ಯವಾಡಿದೆ. ‘ನಮಗೆ ಯಾವುದೇ ಆತಂಕವನ್ನು ಕೃತಕವಾಗಿ ತೀವ್ರಗೊಳಿಸುವುದು ಇಷ್ಟವಿಲ್ಲ. ಆದರೆ ಅಪಾಯ ಎನ್ನುವುದು ಸತ್ಯ ಮತ್ತು ವಾಸ್ತವ. ಅದನ್ನು ನಾವು ತಪ್ಪಾಗಿ ಅಂದಾಜಿಸಬಾರದು’ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೀ ವ್ಯಾವ್ರೊವ್ ಎಚ್ಚರಿಸಿದದರು. ರಷ್ಯಾ-ಉಕ್ರೇನ್ ಯುದ್ಧವು 62ನೇ ದಿನಕ್ಕೆ ಕಾಲಿಟ್ಟಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಮಾಸ್ಕೊಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ. ಉಕ್ರೇನ್ಗೆ ಗುರುವಾರ ಭೇಟಿ ನೀಡಲಿರುವ ಗುಟೆರಸ್, ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಲಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧದ ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು.
- ‘ಉಕ್ರೇನ್ನಲ್ಲಿ ರಷ್ಯಾಗೆ ಸೋಲು ಖಚಿತವಾಗಿದೆ. ಹೀಗಾಗಿಯೇ ರಷ್ಯಾ 3ನೇ ಮಹಾಯುದ್ಧದ ಬಗ್ಗೆ ಮಾತನಾಡುತ್ತಿದೆ. ಜಗತ್ತು ಉಕ್ರೇನ್ ಜೊತೆಗೆ ದೃಢವಾಗಿ ನಿಂತು ಯೂರೋಪ್ ಮತ್ತು ವಿಶ್ವದ ಭದ್ರತೆಯನ್ನು ಖಾತ್ರಿಪಡಿಸಬೇಕಿದೆ’ ಎಂದು ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೊ ಕುಲೆಬಾ ಹೇಳಿದ್ದಾರೆ.
- ಸರಿಯಾದ ಯುದ್ಧೋಪಕರಣಗಳು ಮತ್ತು ಬೆಂಬಲ ಸಿಕ್ಕರೆ ಈ ಯುದ್ಧವನ್ನು ಉಕ್ರೇನ್ ಗೆಲ್ಲಬಹುದು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ಹೇಳಿದ್ದಾರೆ. ರಷ್ಯಾ ದಾಳಿಯ ನಂತರ ಇದೇ ಮೊದಲ ಬಾರಿಗೆ ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಮತ್ತು ಇತರ ರಾಜತಾಂತ್ರಿಕರೊಂದಿಗೆ ಅವರು ಯುದ್ಧಗ್ರಸ್ಥ ಉಕ್ರೇನ್ಗೆ ಭೇಟಿ ನೀಡಿದ್ದಾರೆ.
- ಉಕ್ರೇನ್ನ ಯೋಧರು ವೀರಾವೇಶದಿಂದ ಹೋರಾಡುತ್ತಿದ್ದಾರೆ. ರಷ್ಯಾಕ್ಕೆ ಅವರು ನೀಡುತ್ತಿರುವ ಪ್ರತಿರೋಧವನ್ನು ನಾವು ಗೌರವಿಸುತ್ತೇವೆ. ಗಡಿಯಲ್ಲಿ ನಿಂತವರು, ಊರೊಳಗೆ ಬಡಿದಾಡುತ್ತಿರುವವರು, ಗಾಯಾಳುಗಳನ್ನು ಉಚರಿಸುತ್ತಿರುವವರು ಹೀಗೆ ಉಕ್ರೇನ್ನ ಸೇನೆ ಮತ್ತು ನಾಗರಿಕರು ಹೆಗಲಿಗೆ ಹೆಗಲು ಕೊಟ್ಟು ರಷ್ಯಾಕ್ಕೆ ಪ್ರತಿರೋಧ ತೋರುತ್ತಿದ್ದಾರೆ ಎಂದು ಅಮೆರಿಕ ಸೇನೆಯ ಮುಖ್ಯಸ್ಥರು ಶ್ಲಾಘಿಸಿದ್ದಾರೆ.
- ಉಕ್ರೇನ್ಗೆ ಅಮೆರಿಕ 1.65 ಕೋಟಿ ಡಾಲರ್ ಮೊತ್ತದ ಯುದ್ಧೋಪಕರಣಗಳನ್ನು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಬ್ರಿಟನ್ ದೇಶವು ಆಂಬುಲೆನ್ಸ್, ಅಗ್ನಿಶಾಮಕ ವಾಹನ ಮತ್ತು ಔಷಧಿಗಳನ್ನು ಕಳುಹಿಸಲು ಒಪ್ಪಿಕೊಂಡಿದೆ.
- ಉಕ್ರೇನ್ನ ಖಾರ್ಕಿವ್ ನಗರದ ಮೇಲೆ ರಷ್ಯಾ ಸೇನೆ ಮತ್ತೆ ಶೆಲ್ ದಾಳಿ ಆರಂಭಿಸಿದೆ. ನಾಲ್ವರು ನಾಗರಿಕರು ಮೃತಪಟ್ಟಿದ್ದು ಸಾಕಷ್ಟು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
- ವಿಶ್ವದ ವಿವಿಧ ದೇಶಗಳ ಆರ್ಥಿಕ ನಿರ್ಬಂಧದಿಂದ ರಷ್ಯಾದ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಈ ನಡುವೆ ಜರ್ಮನಿಯ 40 ರಾಜತಾಂತ್ರಿಕರನ್ನು ರಷ್ಯಾ ಉಚ್ಚಾಟಿಸಿದೆ.
- ಅಮೆರಿಕ ನೇತೃತ್ವದ ನ್ಯಾಟೊ ಸದಸ್ಯ ದೇಶಗಳು ರಷ್ಯಾ ವಿರುದ್ಧ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಉಕ್ರೇನ್ ಸುತ್ತಮುತ್ತಲ ದೇಶಗಳಲ್ಲಿ ಸೇನಾ ಚಟುವಟಿಕೆ ಇತ್ತೀಚೆಗೆ ಹೆಚ್ಚಾಗಿದೆ.
- ಉಕ್ರೇನ್ ರಾಜಧಾನಿ ಕೀವ್ ನಗರವನ್ನು ವಶಪಡಿಸಿಕೊಳ್ಳುವಲ್ಲಿ ವಿಫಲವಾದ ರಷ್ಯಾ ನಂತರ ತಂತ್ರಗಾರಿಕೆ ಬದಲಿಸಿ ಉಕ್ರೇನ್ ಪೂರ್ವ ಭಾಗವನ್ನು ಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳಲು ಮುಂದಾಯಿತು. ಇದೀಗ ಉಕ್ರೇನ್ ದಕ್ಷಿಣ ಭಾಗವನ್ನೂ ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದೆ.
- ವಿಶ್ವದ 4ನೇ ಅತಿದೊಡ್ಡ ಕೃಷಿ ಉತ್ಪನ್ನಗಳ ಉತ್ಪಾದಕ ದೇಶವಾದ ಉಕ್ರೇನ್ನಲ್ಲಿ ಉದ್ಭವಿಸಿರುವ ಬಿಕ್ಕಿಟ್ಟಿನಿಂದ ಜಗತ್ತಿನ ಹಲವು ದೇಶಗಳಲ್ಲಿ ಹಣದುಬ್ಬರದ ಬಿಸಿ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಎದುರಾಗಬಹುದು ಎಂದು ಆರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
- ಇಷ್ಟು ದಿನ ರಷ್ಯಾಕ್ಕೆ ಹೆದರಿದ್ದ ಸುಮ್ಮನಿದ್ದ ಹಲವು ದೇಶಗಳು ಇದೀಗ ಉಕ್ರೇನ್ಗೆ ಟ್ಯಾಂಕ್ ಮತ್ತು ಯುದ್ಧ ವಿಮಾನಗಳ ಸರಬರಾಜಿಗೆ ಮುಂದೆ ಬಂದಿವೆ. ದಿನದಿಂದ ದಿನಕ್ಕೆ ಯುದ್ಧದಲ್ಲಿ ರಷ್ಯಾದ ಮೇಲುಗೈ ಕಡಿಮೆಯಾಗುತ್ತಿದೆ.
ಇದನ್ನೂ ಓದಿ: ಕಪ್ಪು ಸಮುದ್ರದಲ್ಲಿ ಮಾಸ್ಕ್ವಾ ಹಡಗು ಮುಳುಗಡೆಯಾಗಿ ಓರ್ವ ಸಾವು, 27 ಮಂದಿ ನಾಪತ್ತೆ; ರಷ್ಯಾ ಮಾಹಿತಿ
Published On - 3:27 pm, Tue, 26 April 22