ಎಲಾನ್ ಮಸ್ಕ್ ಅಧೀನದಲ್ಲಿ ಟ್ವಿಟ್ಟರ್ ಭವಿಷ್ಯ ಅಸ್ಪಷ್ಟ: ಸಿಇಒ ಪರಾಗ್ ಅಗರ್​ವಾಲ್ ಮಾತಿಗೆ ಹಲವು ಅರ್ಥ

ಮುಂದಿನ ದಿನಗಳಲ್ಲಿ ಟ್ವಿಟ್ಟರ್​ನ ನಡೆ ಹೇಗಿರಬಹುದು ಎಂದು ಈಗಲೇ ಹೇಳಲು ಆಗುವುದಿಲ್ಲ ಎಂದು ಟ್ವಿಟ್ಟರ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಾಗ್ ಅಗರ್​ವಾಲ್ ಹೇಳಿದ್ದಾರೆ.

ಎಲಾನ್ ಮಸ್ಕ್ ಅಧೀನದಲ್ಲಿ ಟ್ವಿಟ್ಟರ್ ಭವಿಷ್ಯ ಅಸ್ಪಷ್ಟ: ಸಿಇಒ ಪರಾಗ್ ಅಗರ್​ವಾಲ್ ಮಾತಿಗೆ ಹಲವು ಅರ್ಥ
ಎಲಾನ್ ಮಸ್ಕ್ ಮತ್ತು ಪರಾಗ್ ಅಗರ್​ವಾಲ್
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 26, 2022 | 7:39 AM

ನ್ಯೂಯಾರ್ಕ್: ಎಲಾನ್ ಮಸ್ಕ್ ನಾಯಕತ್ವದಲ್ಲಿ ಟ್ವಿಟ್ಟರ್​ ಭವಿಷ್ಯ ಅಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಟ್ವಿಟ್ಟರ್​ನ ನಡೆ ಹೇಗಿರಬಹುದು ಎಂದು ಈಗಲೇ ಹೇಳಲು ಆಗುವುದಿಲ್ಲ ಎಂದು ಟ್ವಿಟ್ಟರ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಾಗ್ ಅಗರ್​ವಾಲ್ ಹೇಳಿದ್ದಾರೆ. ಉದ್ಯಮಿ ಎಲಾನ್ ಮಸ್ಕ್​ ಅವರಿಗೆ ಟ್ವಿಟ್ಟರ್ ಮಾರಾಟ ಪ್ರಕ್ರಿಯೆ ಪೂರ್ಣಗೊಂಡ ನಂತರ ಉದ್ಯೋಗಿಗಳೊಂದಿಗೆ ಮುಖಾಮುಖಿಯಾಗಿ ಮಾತನಾಡಿದ ಅವರು ಕಂಪನಿಯು ಪ್ರೈವೇಟ್ ಲಿಮಿಟೆಡ್ ಆದ ನಂತರ ಅದರ ಭವಿಷ್ಯ ಹೇಗಿರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.

‘ಒಮ್ಮೆ ವ್ಯವಹಾರದ ಮಾತುಕತೆಗಳು ಅಂತಿಮಗೊಂಡು, ಡೀಲ್ ಮುಕ್ತಾಯವಾದ ನಂತರ ಟ್ವಿಟ್ಟರ್​ ನಡೆ ಯಾವ ಕಡೆ ಇರುತ್ತದೆ ಎಂದು ಹೇಳಲು ಆಗುವುದಿಲ್ಲ’ ಎಂದು ಅಗರ್​ವಾಲ್ ತಮ್ಮ ಉದ್ಯೋಗಿಗಳಿಗೆ ತಿಳಿಸಿದರು. ಎಲಾನ್ ಮಸ್ಕ್ ಸಹ ಮುಂದಿನ ದಿನಗಳಲ್ಲಿ ಟ್ವಿಟ್ಟರ್ ಉದ್ಯೋಗಿಗಳೊಂದಿಗೆ ಮುಖಾಮುಖಿ ಮಾತನಾಡಲಿದ್ದಾರೆ ಎಂದು ಕಂಪನಿಯು ತನ್ನ ಸಿಬ್ಬಂದಿಗೆ ತಿಳಿಸಿದೆ.

ವಿಶ್ವದ ಪ್ರಮುಖ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಖರೀದಿಸಿದ್ದಾರೆ. ಪ್ರತಿ ಷೇರಿಗೆ 54.20 ಡಾಲರ್​ನಂತೆ 44 ಶತಕೋಟಿ ಡಾಲರ್​ಗೆ ಟ್ವಿಟ್ಟರ್ ಕಂಪನಿಯನ್ನು ಮಸ್ಕ್ ಖರೀದಿಸಿದ್ದಾರೆ. ‘ಎಲಾನ್ ಮಸ್ಕ್ ಅವರಿಗೆ ಟ್ವಿಟ್ಟರ್ ಮಾರಾಟ ಮಾಡಲಾಗಿದೆ. ಈಗ ಟ್ವಿಟ್ಟರ್​ ಸಂಪೂರ್ಣವಾಗಿ ಎಲಾನ್ ಮಸ್ಕ್​ ಮಾಲೀಕತ್ವದ ಕಂಪನಿ’ ಎಂದು ​ ಮಾರಲಾಗಿದೆ ಟ್ವಿಟ್ಟರ್ ಅಧ್ಯಕ್ಷ ಬ್ರೈಟ್​ ಟೈಲರ್​ ಹೇಳಿದ್ದಾರೆ. ಈವರೆಗೆ ಟ್ವಿಟರ್​ನಲ್ಲಿ ಎಲಾನ್​ ಮಸ್ಕ್​ ಶೇ 10ರಷ್ಟು ಷೇರು ಹೊಂದಿದ್ದರು. ಮಸ್ಕ್​ ಸಹ ಟ್ವಿಟ್ಟರ್ ಖರೀದಿಯನ್ನು ದೃಢಪಡಿಸಿದ್ದಾರೆ.

‘ನನ್ನನ್ನು ಕೆಟ್ಟದಾಗಿ ಟೀಕಿಸುವವರು ಸಹ ಟ್ವಿಟ್ಟರ್​ನಲ್ಲಿಯೇ ಉಳಿಯಬೇಕೆಂದು ಬಯಸುತ್ತೇನೆ. ವಾಕ್ ಸ್ವಾತಂತ್ರ್ಯ ಎಂದರೆ ಅದೇ ತಾನೆ’ ಎಂದು ಮಸ್ಕ್ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್ ಖರೀದಿಯನ್ನು ‘Yessss’ ಎಂದು ಸಂಭ್ರಮಿಸಿರುವ ಅವರು, ‘ವಾಕ್ ಸ್ವಾತಂತ್ರ್ಯವು ಕಾರ್ಯರೂಪದಲ್ಲಿರುವ ಯಾವುದೇ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಟ್ವಿಟರ್ ಎನ್ನುವ ಡಿಜಿಟಲ್ ಜಗಲಿಯಲ್ಲಿ ಮನುಷ್ಯತ್ವದ ಭವಿಷ್ಯದ ಬಗ್ಗೆ ಚರ್ಚೆಯಾಗುತ್ತದೆ. ಟ್ವಿಟರ್​ನ ಆಲ್ಗೊರಿದಂಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಷ್ಟೇ ಅಲ್ಲದೆ, ಎಲ್ಲರನ್ನೂ ತಲುಪುವಂತೆ ಮಾಡಬೇಕಿದೆ. ಟ್ವಿಟರ್​ಗೆ ಅಗಾಧವಾಗಿ ಬೆಳೆಯುವ ಸಾಮರ್ಥ್ಯವಿದೆ. ಅದನ್ನು ಸಾಧ್ಯವಾಗಿಸಲು ಕಂಪನಿಯೊಂದಿಗೆ, ಬಳಕೆದಾರರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ’ ಎಂಬ ತಮ್ಮದೇ ಹೇಳಿಕೆಯ ತುಣುಕನ್ನು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Elon Musk: ಟ್ವಿಟ್ಟರ್ ಖರೀದಿಸಿದ ಎಲಾನ್ ಮಸ್ಕ್​: ಪ್ರತಿ ಷೇರಿಗೆ 54.20 ಡಾಲರ್​ನಂತೆ 44 ಶತಕೋಟಿ ಡಾಲರ್ ದರ ನಿಗದಿ

ಇದನ್ನೂ ಓದಿ: Elon Musk: 19 ಲಕ್ಷ ಕೋಟಿ ರೂ. ಆಸ್ತಿಯ ವಿಶ್ವದ ನಂಬರ್ 1 ಶ್ರೀಮಂತನಿಗೆ ಈಗ ಟ್ವಿಟ್ಟರ್ ಖರೀದಿಗೆ 3.28 ಲಕ್ಷ ಕೋಟಿ ರೂ. ಹೊಂದಿಸುವ ಚಿಂತೆ

Published On - 7:37 am, Tue, 26 April 22