H3N8 Bird Flu: ಚೀನಾದ ಬಾಲಕನಿಗೆ H3N8 ಹಕ್ಕಿಜ್ವರ; ಇಷ್ಟು ದಿನ ಕುದುರೆ, ನಾಯಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆ ಇದು

ಮನುಷ್ಯರಲ್ಲಿ H3N8 ತಳಿಯ ಹಕ್ಕಿ ಜ್ವರ ಪತ್ತೆಯಾಗಿರುವುದು ಇದೇ ಮೊದಲು. ಇದರಿಂದ ಮನುಷ್ಯರಿಗೆ ಅಷ್ಟೇನೂ ಹಾನಿಯಿಲ್ಲ, ಇದು ಮನುಷ್ಯರಲ್ಲಿ ಹೆಚ್ಚಾಗಿ ಹರಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ

H3N8 Bird Flu: ಚೀನಾದ ಬಾಲಕನಿಗೆ H3N8 ಹಕ್ಕಿಜ್ವರ; ಇಷ್ಟು ದಿನ ಕುದುರೆ, ನಾಯಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆ ಇದು
ಚೀನಾದಲ್ಲಿ ಇದೇ ಮೊದಲ ಬಾರಿಗೆ ಮನುಷ್ಯರಲ್ಲಿ H3N8 ಹಕ್ಕಿಜ್ವರ ಕಾಣಿಸಿಕೊಂಡಿದೆ.
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 27, 2022 | 11:11 AM

ಬೀಚಿಂಗ್: ಚೀನಾದಲ್ಲಿ ಇದೇ ಮೊದಲ ಬಾರಿಗೆ H3N8 ಹಕ್ಕಿಜ್ವರ ಪತ್ತೆಯಾಗಿದೆ. ಮನುಷ್ಯರಲ್ಲಿ H3N8 ತಳಿಯ ಹಕ್ಕಿ ಜ್ವರ ಪತ್ತೆಯಾಗಿರುವುದು ಇದೇ ಮೊದಲು. ಇದರಿಂದ ಮನುಷ್ಯರಿಗೆ ಅಷ್ಟೇನೂ ಹಾನಿಯಿಲ್ಲ, ಇದು ಮನುಷ್ಯರಲ್ಲಿ ಹೆಚ್ಚಾಗಿ ಹರಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 2002ರಿಂದಲೂ H3N8 ವಿಶ್ವದಲ್ಲಿ ಅಸ್ತಿತ್ವದಲ್ಲಿದೆ. ಉತ್ತರ ಅಮೆರಿಕ ಬಾತುಕೋಳಿಗಳಲ್ಲಿ ಈ ಸೋಂಕಿನ ಸೂಕ್ಷ್ಮಜೀವಿಗಳು ಮೊದಲ ಬಾರಿ ಪತ್ತೆಯಾಗಿದ್ದವು. ಕುದುರೆ, ನಾಯಿ ಮತ್ತು ಕಡಲುಸಿಂಹಗಳಲ್ಲಿ ಸೋಂಕು ಹರಡಬಹುದು ಎಂಬ ಮುನ್ಸೂಚನೆ ನೀಡಲಾಗಿತ್ತು. ಆದರೆ ಮನುಷ್ಯರಲ್ಲಿ H3N8 ಸೋಂಕು ಹಿಂದೆಂದೂ ದೃಢಪಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬನಲ್ಲಿ ಸೋಂಕು ಪತ್ತೆಯಾಗಿದೆ. ಜ್ವರ ಮತ್ತಿತರ ಲಕ್ಷಣಗಳಿದ್ದ ಆ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಈ ಹುಡುಗನ ಕುಟುಂಬದವರು ಮನೆಯಲ್ಲಿ ಕೋಳಿಗಳನ್ನು ಸಾಕಿದ್ದರು. ಮನೆಯ ಸುತ್ತಮುತ್ತ ಕಾಡು ಬಾತುಕೋಳಿಗಳೂ ವಾಸಿಸುತ್ತಿದ್ದವು. ಈ ಹುಡುಗನಿಗೆ ಪಕ್ಷಿಗಳಿಂದ ನೇರವಾಗಿ ಸೋಂಕು ತಗುಲಿದೆ. ಆದರೆ ಈ ಸೋಂಕು ಮನುಷ್ಯರಿಗೆ ಹರಡಬಹುದೇ ಎಂಬುದು ದೃಢಪಟ್ಟಿಲ್ಲ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (National Health Commission – NHC) ಹೇಳಿದೆ.

ಹುಡುಗನೊಂದಿಗೆ ಆಪ್ತ ಒಡನಾಟ ಇರಿಸಿಕೊಂಡಿದ್ದವರಲ್ಲಿ ಯಾವುದೇ ಅಸಹಜ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಇದು ಇತರ ಜೀವಿಗಳಿಂದ ಹರಡಿರುವ ರೋಗದ ಅಪರೂಪದ ಉದಾಹರಣೆ. ಇತರ ಮನುಷ್ಯರಿಂದ ಈ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು ಇಲ್ಲ ಎಂದು ಎನ್​ಎಚ್​ಸಿ ತಿಳಿಸಿದೆ. ಸತ್ತ ಅಥವಾ ಅಸ್ವಸ್ಥಗೊಂಡಿರುವ ಪಕ್ಷಗಳಿಂದ ದೂರ ಉಳಿಯಿರಿ. ಜ್ವರ ಅಥವಾ ಇತರ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಿ. ಮುಖ್ಯವಾಗಿ ಕಾಡುಪಕ್ಷಿಗಳು ಮತ್ತು ಕೋಳಿಗಳಲ್ಲಿ ಏವಿಯನ್ ಇನ್​ಫ್ಲುಯೆನ್​ಜಾ ಕಾಣಿಸಿಕೊಳ್ಳುತ್ತದೆ. ಇದು ಮನುಷ್ಯರಲ್ಲಿ ಹರಡುವುದು ಅಪರೂಪದಲ್ಲಿ ಅಪರೂಪ ಎಂದು ಚೀನಾದ ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ
Image
ಆರ್ಥಿಕ ಬಿಕ್ಕಟ್ಟಿನತ್ತ ಚೀನಾ: ಕೊವಿಡ್​ನಿಂದ ಮತ್ತೆ ಸರಣಿ ಸಾವು, ತತ್ತರಿಸಿವೆ ರಿಯಲ್ ಎಸ್ಟೇಟ್, ಆಟೊ ವಲಯ

ಹಕ್ಕಿಜ್ವರದ H5N1 ಮತ್ತು H7N9 ರೂಪಾಂತರಿಗಳನ್ನು 1997ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು. ಮನುಷ್ಯರಲ್ಲಿ ಹಕ್ಕಿಜ್ವರದಿಂದ ಅನಾರೋಗ್ಯ ಉಂಟಾಗಿರುವ ಬಹುತೇಕ ಪ್ರಕರಣಗಳಲ್ಲಿ ಈ ರೂಪಾಂತರಿಗಳು ಇವೆ ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ (Centers for Disease Control) ತಿಳಿಸಿದೆ. ಪ್ರಾಣಿಗಳ ನೇರ ಸಂಪರ್ಕ ಅಥವಾ ಕೊಳಕು ಪರಿಸರದ ಕಾರಣದಿಂದ ಮನುಷ್ಯರಿಗೆ ಪ್ರಾಣಿಗಳಿಂದ ಕಾಯಿಲೆ ಹರಡಬಹುದು. ಆದರೆ ಇದು ಮನುಷ್ಯರ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ನೀಡಿದೆ. 2012ರಲ್ಲಿ ಅಮೆರಿಕದ ಈಶಾನ್ಯ ಕರಾವಳಿಯಲ್ಲಿ 160ಕ್ಕೂ ಹೆಚ್ಚು ಕಡಲುಸಿಂಹಗಳ (ಸೀಲ್) ಸಾವಿಗೆ H3N8 ಸೂಕ್ಷ್ಮಜೀವಿ ಕಾರಣ ಎಂದು ಶಂಕಿಸಲಾಗಿತ್ತು. ಇದು ಪ್ರಾಣಿಗಳಲ್ಲಿ ತೀವ್ರತರದ ಶ್ವಾಸಕೋಶ ಸೋಂಕು ಉಂಟು ಮಾಡುತ್ತದೆ.

ಇದನ್ನೂ ಓದಿ: ನೆರೆರಾಷ್ಟ್ರಕ್ಕೆ ಎದಿರೇಟು ಕೊಟ್ಟ ಭಾರತ; ಚೀನಾ ನಾಗರಿಕರಿಗೆ ನೀಡಿದ್ದ ಪ್ರವಾಸಿ ವೀಸಾ ಅಮಾನತು

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನತ್ತ ಚೀನಾ: ಕೊವಿಡ್​ನಿಂದ ಮತ್ತೆ ಸರಣಿ ಸಾವು, ತತ್ತರಿಸಿವೆ ರಿಯಲ್ ಎಸ್ಟೇಟ್, ಆಟೊ ವಲಯ

ತಾಜಾ ಸುದ್ದಿ