ನೆರೆರಾಷ್ಟ್ರಕ್ಕೆ ಎದಿರೇಟು ಕೊಟ್ಟ ಭಾರತ; ಚೀನಾ ನಾಗರಿಕರಿಗೆ ನೀಡಿದ್ದ ಪ್ರವಾಸಿ ವೀಸಾ ಅಮಾನತು
ಏಪ್ರಿಲ್ 20ರಂದು ಅಂತಾರಾಷ್ಟ್ರೀಯ ವಾಯು ಸಾರಿಗೆ ಅಸೋಸಿಯೇಶನ್ (IATA) ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಭಾರತ ಚೀನಾದ ನಾಗರಿಕರಿಗೆ ನೀಡಿದ್ದ ಪ್ರವಾಸಿ ವೀಸಾಗಳು ಮಾನ್ಯವಿಲ್ಲ ಎಂದು ಹೇಳಿದೆ.
ಭಾರತ ಚೀನಾದ ನಾಗರಿಕರಿಗೆ ನೀಡಿದ್ದ ಪ್ರವಾಸಿ ವೀಸಾವನ್ನು ಅಮಾನತುಗೊಳಿಸಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆ IATA ತನ್ನ ಸದಸ್ಯ ಸಂಸ್ಥೆಗಳಿಗೆ ಏಪ್ರಿಲ್ 20ರಂದು ತಿಳಿಸಿದೆ. ಚೀನಾದ ಯೂನಿವರ್ಸಿಟಿಗಳಲ್ಲಿ ಭಾರತದ ಸುಮಾರು 22 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಅವರೆಲ್ಲ ಕೊರೊನಾ ಕಾರಣದಿಂದ 2020ರಲ್ಲಿ ಭಾರತಕ್ಕೆ ಮರಳಿದ್ದರು. ಈಗ ಎರಡು ವರ್ಷದ ಮೇಲಾಯಿತು. ಅವರೆಲ್ಲ ವಾಪಸ್ ಚೀನಾಕ್ಕೆ ಹೋಗಿ, ತಮ್ಮ ಕಲಿಕೆ ಮುಂದುವರಿಸಲು ತುದಿಗಾಲಿನಲ್ಲಿ ನಿಂತಿದ್ದರೂ, ಅದನ್ನು ಆ ದೇಶದ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳು ತಡೆಯುತ್ತಿವೆ. ಈ ಬಗ್ಗೆ ಭಾರತ ಪದೇಪದೆ ಚೀನಾಕ್ಕೆ ಮನದಟ್ಟು ಮಾಡಿಸುತ್ತಿದ್ದರೂ, ನೆರೆರಾಷ್ಟ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಭಾರತೀಯ ವಿದ್ಯಾರ್ಥಿಗಳ ಪ್ರವೇಶವನ್ನ ನಿರಾಕರಿಸುತ್ತಲೇ ಇದೆ. ಹೀಗಾಗಿ ಭಾರತವೂ ಅದೇ ಮಾದರಿಯ ಹೆಜ್ಜೆಯನ್ನಿಡುತ್ತಿದೆ. ಚೀನಾ ನಾಗರಿಕರಿಗೆ ನೀಡಲಾಗಿದ್ದ ಪ್ರವಾಸಿ ವೀಸಾವನ್ನು ತಡೆಹಿಡಿದು, ಏಟಿಗೆ ಎದುರೇಟು ನಡೆಯನ್ನು ಪ್ರದರ್ಶಿಸಿದೆ.
ಏಪ್ರಿಲ್ 20ರಂದು ಅಂತಾರಾಷ್ಟ್ರೀಯ ವಾಯು ಸಾರಿಗೆ ಅಸೋಸಿಯೇಶನ್ (IATA) ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಭಾರತ ಚೀನಾದ ನಾಗರಿಕರಿಗೆ ನೀಡಿದ್ದ ಪ್ರವಾಸಿ ವೀಸಾಗಳು ಮಾನ್ಯವಿಲ್ಲ. ಅವುಗಳನ್ನು ಅಮಾನತು ಭಾರತ ಅಮಾನತು ಮಾಡಿದೆ ಎಂದು ಹೇಳಿದೆ. ಅದರ ಹೊರತಾಗಿ ಭೂತಾನ್, ಮಾಲ್ಡೀವ್ಸ್, ನೇಪಾಳದ ನಾಗರಿಕರು ಭಾರತವನ್ನು ಪ್ರವೇಶಿಸಬಹುದು, ದೇಶದಲ್ಲಿ ವಾಸಕ್ಕೆ ಅನುಮತಿ ಪಡೆದವರು ಭಾರತ ಪ್ರವೇಶ ಮಾಡಬಹುದು, ಭಾರತದಿಂದ ನೀಡಲಾದ ವೀಸಾ ಮತ್ತು ಇ ವೀಸಾ ಪಡೆದವರು, ಭಾರತೀಯ ಮೂಲದ ವ್ಯಕ್ತಿಗಳು ಎಂಬ ಕಾರ್ಡ್ ಹೊಂದಿರುವವರು, ಹಾಗೇ, ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವವರು ಭಾರತಕ್ಕೆ ಪ್ರವೇಶಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಭಾರತದ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ, ಕೊರೊನಾ ಕಠಿಣ ನಿರ್ಬಂಧಗಳ ಮಧ್ಯೆಯೂ ಸೌಹಾರ್ದಯುತ ನಿಲುವು ಅಳವಡಿಸಿಕೊಳ್ಳುವಂತೆ ನಾವು ಬೀಜಿಂಗ್ಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಇದುವರೆಗೂ ಚೀನಾ ಈ ವಿಚಾರಕ್ಕೆ ಒಂದು ನಂಬಲರ್ಹ, ಸೂಕ್ತ ಪ್ರತಿಕ್ರಿಯೆ ನೀಡಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಕಳೆದ ತಿಂಗಳೇ ತಿಳಿಸಿದ್ದರು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ದುಶಾಂಬೆಯಲ್ಲಿ ನಡೆದ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್. ಜೈಶಂಕರ್, ಚೀನಾದ ವಿದೇಶಾಂಗ ಮಂತ್ರಿ ವಾಂಗ್ ಯಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದರು ಎಂದೂ ವಕ್ತಾರರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಹಣ ಗುಳುಂ; ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳಿಂದ ಹೊಸ ಬಾಂಬ್
Published On - 5:51 pm, Sun, 24 April 22