ಚೀನಾ ಪ್ರಜೆಗಳ ರಕ್ತ ಹರಿಸಿದವರನ್ನು ಸುಮ್ಮನೆ ಬಿಡಬೇಡಿ: ಪಾಕಿಸ್ತಾನಕ್ಕೆ ಚೀನಾ ಗಂಭೀರ ಎಚ್ಚರಿಕೆ

ಚೀನಾ ಪ್ರಜೆಗಳ ಮೇಲೆ ದಾಳಿ ನಡೆಸಿದವರ ವಿರುದ್ಧ ಪಾಕಿಸ್ತಾನದ ಆಡಳಿತ ಶಿಸ್ತು ಕ್ರಮ ಜರುಗಿಸಬೇಕು. ಚೀನಾ ಪ್ರಜೆಗಳ ದೇಹದಿಂದ ಹರಿದ ರಕ್ತ ಎಂದಿಗೂ ವ್ಯರ್ಥವಾಗಬಾರದು ಎಂದು ಪಾಕಿಸ್ತಾನಕ್ಕೆ ಚೀನಾ ತಾಕೀತು ಮಾಡಿದೆ.

ಚೀನಾ ಪ್ರಜೆಗಳ ರಕ್ತ ಹರಿಸಿದವರನ್ನು ಸುಮ್ಮನೆ ಬಿಡಬೇಡಿ: ಪಾಕಿಸ್ತಾನಕ್ಕೆ ಚೀನಾ ಗಂಭೀರ ಎಚ್ಚರಿಕೆ
ಕರಾಚಿ ಬಾಂಬ್ ಸ್ಫೋಟದಲ್ಲಿ ಛಿದ್ರವಾದ ಕಾರು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 27, 2022 | 2:05 PM

ಬೀಜಿಂಗ್: ಚೀನಾ ಪ್ರಜೆಗಳ ಮೇಲೆ ದಾಳಿ ನಡೆಸಿದವರ ವಿರುದ್ಧ ಪಾಕಿಸ್ತಾನದ ಆಡಳಿತ ಶಿಸ್ತು ಕ್ರಮ ಜರುಗಿಸಬೇಕು. ಚೀನಾ ಪ್ರಜೆಗಳ ದೇಹದಿಂದ ಹರಿದ ರಕ್ತ ಎಂದಿಗೂ ವ್ಯರ್ಥವಾಗಬಾರದು ಎಂದು ಪಾಕಿಸ್ತಾನಕ್ಕೆ ಚೀನಾ ತಾಕೀತು ಮಾಡಿದೆ. ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದಲ್ಲಿ ಚೀನಾದ ಶಿಕ್ಷಕರಿದ್ದ ಕಾರ್ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ಮೂವರು ಚೀನಿ ಪ್ರಜೆಗಳ ಸಾಜೆಗಳ ಸಾವನ್ನು ಗಂಭೀರವಾಗಿ ಪರಿಗಣಿಸಿ, ಈ ದಾಳಿ ಯೋಚಿಸಿದವರನ್ನು ಹತ್ತಿಕ್ಕಬೇಕು ಎಂದು ಚೀನಾ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರರು ಆಗ್ರಹಿಸಿದರು. ಬುರ್ಖಾ ಧರಿಸಿದ್ದ ಬಲೂಚಿಸ್ತಾನದ ಮಹಿಳೆಯು ಇತ್ತೀಚೆಗೆ ಸ್ಫೋಟಿಸಿದ ಆತ್ಮಾಹುತಿ ಬಾಂಬ್​ನಲ್ಲಿ ಕರಾಚಿ ವಿಶ್ವವಿದ್ಯಾಲಯದಲ್ಲಿ ಚೀನಾ ನಿರ್ವಹಿಸುವ ಕನ್​ಫ್ಯೂಷಿಯಸ್ ಇನ್​ಸ್ಟಿಟ್ಯೂಟ್​ನ ಮೂವರು ಚೀನಿ ಭಾಷಾ ಶಿಕ್ಷಕರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದರು. ಹಲವು ಪಾಕ್ ಪ್ರಜೆಗಳೂ ಗಾಯಗೊಂಡಿದ್ದರು. ‘ಈ ದಾಳಿಯನ್ನು ಚೀನಾ ಕಟುವಾಗಿ ಖಂಡಿಸುತ್ತದೆ. ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಮತ್ತು ಸಹಾನುಭೂತಿ ಸೂಚಿಸುತ್ತದೆ’ ಎಂದು ಚೀನಾ ಸರ್ಕಾರ ಹೇಳಿದೆ.

ಈ ಸಂಬಂಧ ಚೀನಾದಲ್ಲಿರುವ ಪಾಕಿಸ್ತಾನದ ರಾಜತಾಂತ್ರಿಕರಿಗೆ ತುರ್ತು ದೂರವಾಣಿ ಕರೆ ಮೂಲಕ ಮಾತನಾಡಿದ ಚೀನಾದ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವು ಜಿಯಾಂಗೋ, ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಸಮಗ್ರ ತನಿಖೆ ನಡೆಸಬೇಕು. ಘಟನೆಯ ಹಿಂದಿರುವವರನ್ನು ಗುರುತಿಸಿ ಶಿಕ್ಷಿಸಬೇಕು. ಪಾಕಿಸ್ತಾನದಲ್ಲಿರುವ ಚೀನಾ ಪ್ರಜೆಗಳ ಸುರಕ್ಷೆ ಬಗ್ಗೆ ಕಾಳಜಿ ವಹಿಸಬೇಕು. ಮುಂದಿನ ದಿನಗಳಲ್ಲಿ ಇಂಥ ಘಟನೆ ನಡೆಯದಂತೆ ಎಚ್ಚರವಹಿಸಬೇಕು ಎಂದು ಚೀನಾ ಸರ್ಕಾರದ ವಕ್ತಾರರು ಆಗ್ರಹಿಸಿದರು. ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಪಾಕಿಸ್ತಾನದಲ್ಲಿರುವ ಚೀನಾದ ರಾಜತಾಂತ್ರಿಕ ಕಚೇರಿ ಸಿಬ್ಬಂದಿಯೂ ಪಾಕಿಸ್ತಾನದ ವಿವಿಧ ಇಲಾಖೆಗಳನ್ನು ಈ ಸಂಬಂಧ ಸಂಪರ್ಕಿಸಿ, ಕ್ರಮ ಜರುಗಿಸಲು ಸೂಚಿಸಲಿದೆ. ಘಟನೆಯನ್ನು ನಾವು ಇಷ್ಟಕ್ಕೇ ಬಿಡುವುದಿಲ್ಲ. ಉಗ್ರಗಾಮಿ ಸಂಘಟನೆಗಳನ್ನು ಹತ್ತಿಕ್ಕುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತೇವೆ ಎಂದರು.

ನಿಷೇಧಿತ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (Balochistan Liberation Army – BLA) ಸಂಘಟನೆಗೆ ಸೇರಿದ ಮಜೀದ್ ಬ್ರಿಗೇಡ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ದಾಳಿಯಲ್ಲಿ ಮೂವರು ಮೂವರು ಚೀನಿ ಪ್ರಜೆಗಳು ಮತ್ತು ಓರ್ವ ಪಾಕ್ ಪ್ರಜೆ ಸಾವನ್ನಪ್ಪಿದ್ದರು. ಮತ್ತೋರ್ವ ಚೀನಿ ಪ್ರಜೆ ಮತ್ತು ಓರ್ವ ಪಾಕ್ ಪ್ರಜೆ ಗಾಯಗೊಂಡಿದ್ದರು. ಬಾಂಬ್ ಸ್ಫೋಟದ ನಂತರ ಸ್ಥಳದ ಸುತ್ತಮುತ್ತ ಇದ್ದ ಸಿಸಿಟಿವಿ ಫೂಟೇಜ್​ಗಳನ್ನು ಪೊಲೀಸರು ಪರಿಶೀಲಿಸಿದ್ದರು. ಬುರ್ಖಾಧಾರಿ ಮಹಿಳೆಯೊಬ್ಬರು ಬಾಂಬ್ ಸ್ಫೋಟಿಸಿದ್ದು ಬೆಳಕಿಗೆ ಬಂದಿತ್ತು.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಬಿಎಲ್​ಎ ಸಂಘಟನೆಯ ವಕ್ತಾರ, ‘ಈಕೆ ನಮ್ಮ ಸಂಘಟನೆಯ ಮೊದಲ ಮಹಿಳಾ ಆತ್ಮಾಹುತಿ ಬಾಂಬರ್. ಬಲೂಚಿಸ್ತಾನದ ಪ್ರತಿರೋಧ ಹೋರಾಟದಲ್ಲಿ ಇಂದಿನಿಂದ ಹೊಸ ಅಧ್ಯಾಯ ಬರೆದಂತೆ ಆಗಿದೆ’ ಎಂದು ಹೇಳಿದ್ದರು. ಇಬ್ಬರು ಸಣ್ಣ ಮಕ್ಕಳೊಂದಿಗೆ ಇರುವ ಮಹಿಳೆಯ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ‘ಈ ದಾಳಿಯು ಚೀನಾ ಮತ್ತು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸುತ್ತಿದೆ. ಪಾಕಿಸ್ತಾನ ಮತ್ತು ಚೀನಾಗಳು ಬಲೂಚಿಸ್ತಾನದಿಂದ ತಕ್ಷಣ ಹಿಂದೆ ಸರಿಯಬೇಕು. ಮುಂದಿನ ದಿನಗಳಲ್ಲಿ ‘ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್’ ಯೋಜನೆಯ ಮೇಲೆ ಇನ್ನಷ್ಟು ದಾಳಿಗಳು ಸಂಘಟಿಸಲಾಗುವುದು ಎಂದು ಖಾತ್ರಿಪಡಿಸುತ್ತೇನೆ’ ಎಂದು ಮುಸುಕುಧಾರಿ ವಕ್ತಾರ ಹೇಳಿದ್ದಾನೆ. ಪಾಕಿಸ್ತಾನದಲ್ಲಿರುವ ಚೀನಾದ ಪ್ರಜೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ವಿಶೇಷ ಘಟಕವೊಂದನ್ನು ರಚಿಸಲಾಗಿದೆ. ಬಲೂಚಿಸ್ತಾನದಲ್ಲಿ ಚೀನಾ ಯಾವುದೇ ಹೂಡಿಕೆ ಮಾಡಬಾರದು ಎಂದು ತಾಕೀತು ಮಾಡಿದ್ದಾನೆ.

ಇರಾನ್ ಮತ್ತು ಅಫ್ಘಾನಿಸ್ತಾನಗಳೊಂದಿಗೆ ಗಡಿ ಹಂಚಿಕೊಂಡಿರುವ ಬಲೂಚಿಸ್ತಾನವು ದೀರ್ಘ ಕಾಲದಿಂದಲೂ ಹಿಂಸಾಚಾರದಲ್ಲಿ ನಲುಗಿದೆ. ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ಮೇಲೆ ಈ ಹಿಂದೆಯೂ ಬಲೂಚಿಗಳು ಹಲವು ಬಾರಿ ದಾಳಿ ನಡೆಸಿದ್ದರು. ಈ ಹಿಂದೆ ಚೀನಾದ ಎಂಜಿನಿಯರ್​ಗಳಿದ್ದ ಬಸ್ ಮೇಲೆ ಬಾಂಬ್ ಸ್ಫೋಟಿಸಲಾಗಿತ್ತು. ಕರಾಚಿಯಲ್ಲಿಯೂ ಚೀನಾ ಪ್ರಜೆಗಳ ಮೇಲೆ ಗುಂಡು ಹಾರಿಸಲಾಗಿತ್ತು. ಪಾಕಿಸ್ತಾನದಲ್ಲಿ ಸಾವಿರಾರು ಚೀನಿ ಪ್ರಜೆಗಳು ಕೆಲಸ ಮಾಡುತ್ತಿದ್ದಾರೆ. ಚೀನಾದ ಯಾವುದೇ ಹೂಡಿಕೆಯನ್ನು ಬಲೂಚಿಸ್ತಾನ ವಿರೋಧಿಸುತ್ತಿದೆ.

ಇದನ್ನೂ ಓದಿ: H3N8 Bird Flu: ಚೀನಾದ ಬಾಲಕನಿಗೆ H3N8 ಹಕ್ಕಿಜ್ವರ; ಇಷ್ಟು ದಿನ ಕುದುರೆ, ನಾಯಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆ ಇದು

ಇದನ್ನೂ ಓದಿ: ನೆರೆರಾಷ್ಟ್ರಕ್ಕೆ ಎದಿರೇಟು ಕೊಟ್ಟ ಭಾರತ; ಚೀನಾ ನಾಗರಿಕರಿಗೆ ನೀಡಿದ್ದ ಪ್ರವಾಸಿ ವೀಸಾ ಅಮಾನತು