ಕೊವಿಡ್ ಪ್ರಕರಣಗಳ ಹೆಚ್ಚಳ: ಭಾರತದ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದ ಶ್ರೀಲಂಕಾ

ಭಾರತದಿಂದ ಪ್ರಯಾಣಿಕರನ್ನು ಶ್ರೀಲಂಕಾದಲ್ಲಿ ಇಳಿಯಲು ಅನುಮತಿಸುವುದಿಲ್ಲ ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಗುರುವಾರ ತಿಳಿಸಿದೆ.

ಕೊವಿಡ್ ಪ್ರಕರಣಗಳ ಹೆಚ್ಚಳ: ಭಾರತದ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದ ಶ್ರೀಲಂಕಾ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ

Updated on: May 06, 2021 | 4:16 PM

ಕೊಲೊಂಬೊ: ಭಾರತದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ ಹೇರಿದೆ. ಬ್ರಿಟನ್, ಯುಎಇ, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಂತಹ ಹಲವಾರು ದೇಶಗಳು ಈಗಾಗಲೇ ಭಾರತ ಮತ್ತು ದಕ್ಷಿಣ ಏಷ್ಯಾದ ಇತರ ದೇಶಗಳ ಪ್ರಯಾಣಿಕರನ್ನು ನಿಷೇಧಿಸಿವೆ. ಭಾರತದಿಂದ ಪ್ರಯಾಣಿಕರನ್ನು ಶ್ರೀಲಂಕಾದಲ್ಲಿ ಇಳಿಯಲು ಅನುಮತಿಸುವುದಿಲ್ಲ ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಗುರುವಾರ ತಿಳಿಸಿದೆ. ಕೊರೊನಾವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೊವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಶ್ರೀಲಂಕಾದ ಆರೋಗ್ಯ ಅಧಿಕಾರಿಗಳಿಂದ ಪಡೆದ ಸೂಚನೆಗಳಿಗೆ ಅನುಗುಣವಾಗಿ, ಈ ನಿಯಮ ತಕ್ಷಣ ಜಾರಿಗೆ ಬರುವಂತೆ ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ನಿಷೇಧ ವಿಧಿಸಲಾಗಿದೆ ಎಂದು ಶ್ರೀಲಂಕನ್ ಏರ್ಲೈನ್ಸ್ ಸಿಇಒಗೆ ಬರೆದ ಪತ್ರದಲ್ಲಿ ವಿಮಾನಯಾನದ ಮಹಾನಿರ್ದೇಶಕರು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿಯೂ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಕಳೆದ 5 ದಿನಗಳಲ್ಲಿ ಸುಮಾರು 2,000 ಹೊಸ ಪ್ರಕರಣಗಳು ವರದಿಯಾಗಿವೆ. ಏಪ್ರಿಲ್ ಮಧ್ಯದವರೆಗೆ ದಿನಕ್ಕೆ ಸರಾಸರಿ 200 ಪ್ರಕರಣಗಳು ಪತ್ತೆಯಾಗಿವೆ.

ಏಪ್ರಿಲ್ ಮಧ್ಯ ಭಾಗದಲ್ಲಿ ಹೊಸ ವರ್ಷದ ಆಚರಣೆ ನಡೆದಿತ್ತು. ಬ್ರಿಟನ್ ರೂಪಾಂತರಿಯಾಗಿರುವ ಈ ವೈರಸ್ ವೇಗವಾಗಿ ಹರಡುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಲಂಕಾವು ಪಶ್ಚಿಮ ಏಷ್ಯಾ ಮತ್ತು ಸಿಂಗಾಪುರದಂತಹ ಇತರ ಸ್ಥಳಗಳಿಗೆ ಭೇಟಿ ನೀಡುವ ಭಾರತೀಯರಿಗೆ ಸಾರಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸಿತ್ತು, ಇದಕ್ಕೂ ಮೊದಲು ಅವರು ಶ್ರೀಲಂಕಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ವ್ಯವಸ್ಥೆ ಮಾಡಿರುವ ಕ್ವಾರಂಟೈನ್ ಕೇಂದ್ರದಲ್ಲಿ 14 ದಿನಗಳ ಕಾಲ ಇರಬೇಕಿತ್ತು

ಶ್ರೀಲಂಕಾದ ಪ್ರವಾಸೋದ್ಯಮ ಅಧಿಕಾರಿಗಳು ಭಾರತೀಯ ಪ್ರವಾಸಿಗರನ್ನು ಟ್ರಾವೆಲ್ ಬಬಲ್ ಮೂಲಕ ಸ್ವೀಕರಿಸುತ್ತಿದ್ದರು. ಇದಕ್ಕಾಗಿ ವಿಶೇಷ ಸೌಲಭ್ಯಗಳನ್ನು ಸ್ಥಾಪಿಸಲಾಯಿತು. ಭಾರತದಲ್ಲಿ ಪ್ರಸ್ತುತ ಕಠಿಣ ನಿರ್ಬಂಧದ ಹೊರತಾಗಿಯೂ ಕೊರೊನಾವೈರಸ್ ಪ್ರಕರಣಗಳು ಏರುತ್ತಿವೆ.

ಈ ಬಗ್ಗೆ ಮತನಾಡಿದ ಪ್ರವಾಸೋದ್ಯಮ ಸಚಿವ ಪ್ರಸನ್ನ ರಣತುಂಗ ಶ್ರೀಲಂಕಾದ ವಲಸೆ ಕಾರ್ಮಿಕರಿಗೆ ದೇಶಕ್ಕೆ ಮರಳಲು ಅಧ್ಯಕ್ಷ ಗೋಟಬಯ ರಾಜಪಕ್ಸೆ ಸೂಚನೆ ನೀಡಿದ್ದಾರೆ. ಸೋಂಕಿತ ಭಾರತೀಯ ಮೀನುಗಾರರು ಅಂತರರಾಷ್ಟ್ರೀಯ ಸಮುದ್ರ ಗಡಿ ದಾಟಿ ಸ್ಥಳೀಯರೊಂದಿಗೆ ಸಂಪರ್ಕ ಸಾಧಿಸುವ ಸಾಧ್ಯತೆಯನ್ನು ಪರೀಕ್ಷಿಸಲು ಅವರು ಉತ್ತರ ಮತ್ತು ಈಶಾನ್ಯ ಸಮುದ್ರಗಳ ಮೇಲೆ ಕಣ್ಗಾವಲು ಹೆಚ್ಚಿಸಿದ್ದಾರೆ ಎಂದು ಕಳೆದ ವಾರ ಶ್ರೀಲಂಕಾ ನೌಕಾಪಡೆ ಹೇಳಿತ್ತು.

ಇದನ್ನೂ ಓದಿ: Burqa Ban: ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ..; ಪ್ರಸ್ತಾವನೆಗೆ ಕ್ಯಾಬಿನೆಟ್​​ನಲ್ಲಿ ಅನುಮೋದನೆ

(Rise in COVID19 cases Sri Lanka Bans Travellers From India)

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us