ಪ್ರಾತಿನಿಧಿಕ ಚಿತ್ರ
ಹಲವು ಅಂತಾರಾಷ್ಟ್ರೀಯ ಒತ್ತಡಗಳ ನಡುವೆಯೂ ಉಕ್ರೇನ್ ಮೇಲಿನ ಆಕ್ರಮಣವನ್ನು ರಷ್ಯಾ (Russia- Ukraine War) ಮುಂದುವರೆಸಿದೆ. ಗುರುವಾರ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದಲ್ಲಿ ರಷ್ಯಾ ಘೋಷಿಸಿದ್ದ ಯುದ್ಧ ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ರಾಜಧಾನಿ ಕೈವ್ ಅನ್ನು ಸುತ್ತುವರೆದಿರುವ ರಷ್ಯಾ ಸೇನೆ ಮುಂದುವರೆಯುತ್ತಿದೆ. ರಷ್ಯಾದ ವಿದೇಶಾಂಗ ಸಚಿವರ ಲಾವ್ರೋವ್ ಶುಕ್ರವಾರ ಮಾತನಾಡುತ್ತಾ ಉಕ್ರೇನ್ ಶಸ್ತ್ರಾಸ್ತ್ರ ತ್ಯಜಿಸಿದಲ್ಲಿ ರಷ್ಯಾ ಮಾತುಕತೆಗೆ ಸಿದ್ಧವಿದೆ ಎಂದಿದ್ದರು. ಆದರೆ ರಷ್ಯಾ ಅಧ್ಯಕ್ಷ ಪುಟಿನ್ (Vladimir Putin), ಉಕ್ರೇನ್ ಸೇನೆ ಸರ್ಕಾರವನ್ನು ಕಿತ್ತೊಗೆದು, ಅಧಿಕಾರ ತೆಗೆದುಕೊಳ್ಳಿ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಉಕ್ರೇನ್ ಭಯೋತ್ಪಾದಕರು, ಮಾದಕ ವ್ಯಸನಿಗಳ ಆಡಳಿತದಲ್ಲಿದೆ ಎಂದೂ ಆರೋಪಿಸಿದ್ದಾರೆ. ಇತ್ತ ಉಕ್ರೇನ್ ದಶಕಗಳ ನಂತರ ತನ್ನ ರಾಜಧಾನಿಯನ್ನು ಉಳಿಸಿಕೊಳ್ಳಲು ತೀವ್ರ ಶ್ರಮವಹಿಸುತ್ತಿದೆ. ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಶುಕ್ರವಾರವ ತಡರಾತ್ರಿ ವಿಡಿಯೋ ಸಂದೇಶದಲ್ಲಿ ಮಾತನಾಡಿ, ‘‘ಈ ರಾತ್ರಿ ಹಗಲಿಗಿಂತ ಕಷ್ಟಕರವಾಗಿರಲಿದೆ. ಹಲವು ನಗರಗಳನ್ನು ಕಳೆದುಕೊಂಡಿದ್ದೇವೆ. ರಾಜಧಾನಿಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ. ಉಕ್ರೇನ್- ರಷ್ಯಾ ಬೆಳವಣಿಗೆಯ ಕುರಿತು ಇದುವರೆಗಿನ ಮುಖ್ಯಾಂಶಗಳು ಇಲ್ಲಿವೆ.
- ‘ನಾವೆಲ್ಲರೂ ಇಲ್ಲಿದ್ದೇವೆ. ನಮ್ಮ ಸೈನ್ಯ ಇಲ್ಲಿದೆ’ ಎಂದು ಉಕ್ರೇನಿಯನ್ ಅಧ್ಯಕ್ಷರು ವಿಡಿಯೋ ಸಂದೇಶದಲ್ಲಿ ಪೋಸ್ಟ್ ಮಾಡಿದ್ದಾರೆ. ಹಲವು ಪ್ರಬಲ ಸ್ಫೋಟಗಳು ಉಕ್ರೇನ್ ರಾಜಧಾನಿ ಕೈವ್ಅನ್ನು ಶುಕ್ರವಾರ ರಾತ್ರಿ ನಡುಗಿಸಿದವು. ಎರಡನೇ ಮಹಾಯುದ್ಧದ ನಂತರ ಯುರೋಪ್ ಸಾಕ್ಷಿಯಾಗುತ್ತಿರುವ ಮೊದಲ ತೀವ್ರ ಸಂಘರ್ಷ ಇದಾಗಿದೆ.
- ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತೊಂದು ನಿರ್ಣಾಯಕ ಸಭೆಯನ್ನು ನಡೆಸಿದೆ. ಅಲ್ಲಿ ರಷ್ಯಾ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸುವ ನಿರ್ಣಯಕ್ಕೆ ರಷ್ಯಾ ವಿಟೋ ಅಧಿಕಾರವನ್ನು ಬಳಸಿ ತಿರಸ್ಕಾರ ಮಾಡಿದೆ. ಭಾರತ, ಚೀನಾ ಮತ್ತು ಯುಎಇ ಮತದಾನದಿಂದ ದೂರ ಉಳಿದಿವೆ.
- ಇಲ್ಲಿಯವರೆಗೆ 1,000 ಕ್ಕೂ ಹೆಚ್ಚು ರಷ್ಯಾದ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿವೆ ಎಂದು ಉಕ್ರೇನ್ ಹೇಳಿದೆ. ಮೊದಲ ದಿನದಂದು, ರಷ್ಯಾದ ಆಕ್ರಮಣದ ನಡುವೆ 137 ಉಕ್ರೇನಿಯನ್ನರು ಪ್ರಾಣ ಕಳೆದುಕೊಂಡರು.
- ಕಪ್ಪು ಸಮುದ್ರದ ಒಡೆಸ್ಸಾ ಬಂದರಿನ ಬಳಿ ಧಾನ್ಯವನ್ನು ಲೋಡ್ ಮಾಡುವ ಕಾರಣದಿಂದಾಗಿ ಮೊಲ್ಡೊವನ್ನ ರಾಸಾಯನಿಕ ಟ್ಯಾಂಕರ್ ಮತ್ತು ಪನಾಮಾದ ಸರಕು ಹಡಗನ್ನು ರಷ್ಯಾದ ಯುದ್ಧನೌಕೆಗಳು ಶುಕ್ರವಾರ ಹೊಡೆರುಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
- ‘ಉಕ್ರೇನ್ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ರಷ್ಯಾದ ಪಡೆಗಳು ಹೇಳಿವೆ. ಆದರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಶಿಶುವಿಹಾರಗಳು ಮತ್ತು ನಾಗರಿಕ ಮೂಲಸೌಕರ್ಯಗಳನ್ನೂ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
- ಕ್ರೆಮ್ಲಿನ್‌ನೊಂದಿಗೆ (ರಷ್ಯಾ ಸರ್ಕಾರ) ಎರಡು ಕಡೆಯ ನಡುವಿನ ಮಾತುಕತೆಯ ಸಾಧ್ಯತೆಯ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯವರ ವಕ್ತಾರ ಸೆರ್ಗಿ ನಿಕಿಫೊರೊವ್ ಅವರು ಸುದ್ದಿ ಸಂಸ್ಥೆ ಎಪಿಗೆ ನೀಡಿದ ಮಾಹಿತಿ ಪ್ರಕಾರ, ಎರಡು ಕಡೆಯವರು ಮಾತುಕತೆಗೆ ಸ್ಥಳ ಮತ್ತು ಸಮಯವನ್ನು ಪರಿಗಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
- ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾವನ್ನು ತಡೆಯಲು ನಿರ್ಬಂಧಗಳನ್ನು ಹೇರಿವೆ. ಆದರೆ ಇದು ಸಾಕಾಗುವುದಿಲ್ಲ ಎನ್ನುವುದು ಉಕ್ರೇನ್ ಹೇಳಿಕೆ. ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ವಿರುದ್ಧ ನಿರ್ಬಂಧಗಳನ್ನು ಹೇರುವುದು ಪಾಶ್ಚಾತ್ಯ ರಾಷ್ಟ್ರಗಳ ‘ಸಂಪೂರ್ಣ ದುರ್ಬಲತೆಯನ್ನು’ ಪ್ರತಿಬಿಂಬಿಸುತ್ತದೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಹೇಳಿದ್ದಾರೆ. ವಿಶ್ವಸಂಸ್ಥೆಯು ಯುದ್ಧ-ಪೀಡಿತ ದೇಶ ಉಕ್ರೇನ್ಗೆ 1 ಬಿಲಿಯನ್ ಡಾಲರ್ಗಿಂತಲೂ ಹೆಚ್ಚಿನ ಪರಿಹಾರವನ್ನು ನೀಡಲು ಯೋಜಿಸಿದೆ.
- ಹೆಚ್ಚುತ್ತಿರುವ ಜಾಗತಿಕ ಒತ್ತಡದ ಮಧ್ಯೆ, ರಷ್ಯಾ ಇನ್ನು ಮುಂದೆ ಚಾಂಪಿಯನ್ಸ್ ಲೀಗ್ ಫೈನಲ್ ಅನ್ನು ಆಯೋಜಿಸುವುದಿಲ್ಲ. ಅದನ್ನು ಈಗ ಪ್ಯಾರಿಸ್‌ಗೆ ಸ್ಥಳಾಂತರಿಸಲಾಗಿದೆ. ಸೋಚಿಯಲ್ಲಿ ನಡೆಯಬೇಕಿದ್ದ ಫಾರ್ಮುಲಾ ಒನ್ ರೇಸ್ಅನ್ನು ಕೈಬಿಡಲಾಗಿದೆ. ಎಲ್ಲಾ ಅಂತರಾಷ್ಟ್ರೀಯ ಟೆನಿಸ್ ಫೆಡರೇಶನ್ ಅನ್ನು ಅನಿರ್ದಿಷ್ಟಾವಧಿಗೆ ರದ್ದುಗೊಳಿಸಲಾಗಿದೆ.
- ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಶುಕ್ರವಾರ ಮಾತನಾಡಿ, ‘‘ರಷ್ಯಾ ಯುರೋಪ್‌ನಲ್ಲಿ ಶಾಂತಿಯನ್ನು ಛಿದ್ರಗೊಳಿಸಿದೆ. ಉಕ್ರೇನ್‌ನ ಜನರು ರಷ್ಯಾದ ಅಪ್ರಚೋದಿತ ಆಕ್ರಮಣದ ನಂತರ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ. ಪ್ರಾಣಹಾನಿ, ಅಗಾಧ ಮಾನವ ಸಂಕಟ ಮತ್ತು ವಿನಾಶಕ್ಕೆ ನಾವು ವಿಷಾದಿಸುತ್ತೇವೆ. ಕೊಲ್ಲಲ್ಪಟ್ಟವರು, ಗಾಯಗೊಂಡವರು ನಿರಾಶ್ರಿತರೊಂದಿಗೆ ನಾವಿದ್ದೇವೆ’’ ಎಂದು ಹೇಳಿದ್ದಾರೆ.
- ರಷ್ಯಾಗೆ ಫ್ರಾನ್ಸ್ ಪ್ರತಿಕ್ರಿಯೆ ನಡುವೆ ಇದೀಗ ರಷ್ಯಾ ಹಾಗೂ ಪುಟಿನ್ರ ಪರಮಾಣು ಅಸ್ತ್ರಗಳ ಬಳಕೆಯ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಭೀತಿಯೂ ಮೂಡಿದೆ.
ಇದನ್ನೂ ಓದಿ:
Video: ಉಕ್ರೇನ್ ಸ್ವಾತಂತ್ರ್ಯ ರಕ್ಷಿಸಿಕೊಳ್ಳಲು ಎಲ್ಲರೂ ಒಂದಾಗಿದ್ದೇವೆ; ಸೇನಾ ವಸ್ತ್ರ ಧರಿಸಿ ವಿಡಿಯೋ ಮಾಡಿದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
Russia Ukraine War: ಉಕ್ರೇನ್ ಯುದ್ಧದ ಎಫೆಕ್ಟ್ಗೆ ರಷ್ಯಾದ 22 ಶ್ರೀಮಂತರ 2.93 ಲಕ್ಷ ಕೋಟಿ ರೂಪಾಯಿ ಒಂದೇ ದಿನ ಉಡೀಸ್