ಉಕ್ರೇನ್: ರಷ್ಯಾ ಮತ್ತು ಉಕ್ರೇನ್ (Russia- Ukraine War) ನಡುವಿನ ಯುದ್ಧದ ತೀವ್ರತೆ ಹೆಚ್ಚುತ್ತಲೇ ಇದೆ. ಉಕ್ರೇನ್ ಜತೆ ಯುದ್ಧ ಘೋಷಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಈಗಾಗಲೇ ಉಕ್ರೇನ್‌ನ ಹಲವು ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಕಳೆದ ವಾರವಷ್ಟೇ ಉಕ್ರೇನ್‌ನ 4 ಪ್ರದೇಶಗಳನ್ನು ರಷ್ಯಾ ಅಧಿಕೃತವಾಗಿ ಸ್ವಾಧೀನಕ್ಕೆ ಪಡೆದಿತ್ತು. ಇದರ ನಡುವೆ ಪಶ್ಚಿಮದ ದೇಶಗಳ ವಿರುದ್ಧ ಅಣ್ವಸ್ತ್ರ ಬಳಕೆ ಮಾಡುವುದಾಗಿ ರಷ್ಯಾ ಬೆದರಿಕೆ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (Joe Biden), ರಷ್ಯಾದ ಅಧ್ಯಕ್ಷ ಪುಟಿನ್ ಅವರ ಹೇಳಿಕೆಯನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಹೇಳುತ್ತಿರುವ ವ್ಲಾಡಿಮಿರ್ ಪುಟಿನ್ ತಮಾಷೆಗೆ ಈ ಮಾತನ್ನು ಹೇಳುತ್ತಿಲ್ಲ. ನಮಗೆ ಪುಟಿನ್ ಬಗ್ಗೆ ಚೆನ್ನಾಗಿ ತಿಳಿದಿದೆ. ಅವರು ಅಣ್ವಸ್ತ್ರ ದಾಳಿ ಬಗ್ಗೆ ತಮಾಷೆಗೆ ಹೇಳಿಕೆ ನೀಡುತ್ತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹಲವು ತಿಂಗಳುಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಲೇ ಇದೆ. ಉಕ್ರೇನ್ ಮೇಲೆ ದಂಡೆತ್ತಿ ಹೋಗಿದ್ದ ರಷ್ಯಾದ ಮಿಲಿಟರಿ ಶಕ್ತಿಗೆ ಉಕ್ರೇನ್ ತತ್ತರಿಸಿಹೋಗಿತ್ತು. ಬಲಶಾಲಿ ರಾಷ್ಟ್ರವಾದ ರಷ್ಯಾ ಉಕ್ರೇನ್ನಂತಹ ಸಣ್ಣ ದೇಶದ ಮೇಲೆ ಮಾಡುತ್ತಿರುವ ದಾಳಿಯನ್ನು ಅನೇಕ ರಾಷ್ಟ್ರಗಳು ಖಂಡಿಸಿದ್ದವು. ಇದುವರೆಗೂ ಯುದ್ಧದಲ್ಲಿ ಮೇಲುಗೈ ಸಾಧಿಸಿದ್ದ ರಷ್ಯಾವನ್ನು ಇದೀಗ ಉಕ್ರೇನ್ ಹಿಮ್ಮೆಟ್ಟಿಸಿದೆ. ಯುರೋಪ್ ಮತ್ತು ಪಾಶ್ಚಿಮಾತ್ಯ ದೇಶಗಳ ಸಹಾಯದಿಂದ ರಷ್ಯಾವನ್ನು ಉಕ್ರೇನ್ ಎದುರಿಸಿದೆ. ಇದರಿಂದ ಅವಮಾನಗೊಂಡಿರುವ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ತಮ್ಮ ಸೇನೆ ದುರ್ಬಲವಾಗುತ್ತಿರುವುದರಿಂದ ಅಣ್ವಸ್ತ್ರ ದಾಳಿ ಮೂಲಕ ಉಕ್ರೇನ್ ಅನ್ನು ಸದೆಬಡಿಯಲು ರಷ್ಯಾ ನಿರ್ಧರಿಸಿದೆ.
ಇದನ್ನೂ ಓದಿ: Russia Ukraine War: ಉಕ್ರೇನ್ಗೆ ನೆರವು ಬೇಡ, ಅಮೆರಿಕಕ್ಕೆ ತಾಕೀತು ಮಾಡಿ ಗಡಿಗೆ ಅಣ್ವಸ್ತ್ರ ರವಾನಿಸಿದ ರಷ್ಯಾ
ಉಕ್ರೇನ್ ಬಳಿ ಯಾವುದೇ ಅಣ್ವಸ್ತ್ರವಿಲ್ಲ. ಇದ್ದ ಅಣ್ವಸ್ತ್ರಗಳನ್ನು ಕೆಲವು ದಶಕದ ಹಿಂದೆಯೇ ರಷ್ಯಾಗೆ ಹಸ್ತಾಂತರಿಸಿದೆ. ಹೀಗಾಗಿ, ರಷ್ಯಾ ಒಂದುವೇಳೆ ಅಣ್ವಸ್ತ್ರ ದಾಳಿ ನಡೆಸಿದ್ದೇ ಆದಲ್ಲಿ ಉಕ್ರೇನ್ ಸಂಪೂರ್ಣವಾಗಿ ನಾಶವಾಗುವ ಆತಂಕ ಎದುರಾಗಿದೆ. ಉಕ್ರೇನ್ ಮೇಲೆ ನ್ಯೂಕ್ಲಿಯರ್ ದಾಳಿ ನಡೆಸದಂತೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯಾಗೆ ಸೂಚಿಸಿದ್ದರೂ ಪುಟಿನ್ ತಮ್ಮ ನಿರ್ಧಾರ ಬದಲಿಸುವಂತೆ ಕಾಣುತ್ತಿಲ್ಲ. ಉಕ್ರೇನ್ ವಿರುದ್ಧದ ಯುದ್ಧವನ್ನು ರಷ್ಯಾ ತೀವ್ರಗೊಳಿಸಿದ ನಂತರವೂ ಉಕ್ರೇನ್ ಸೇನೆ ಹಿಂದೆ ಸರಿಯದೆ ಮುನ್ನಡೆ ಪಡೆಯುತ್ತಿದೆ. ರಷ್ಯಾದ ಹಿಡಿತದಲ್ಲಿದ್ದ ಲೈಮನ್ ಪ್ರದೇಶವನ್ನು ಉಕ್ರೇನ್ ಸೈನ್ಯ ಮತ್ತೆ ಗೆದ್ದುಕೊಂಡಿದೆ. ಇದರಿಂದ ರಷ್ಯಾಗೆ ಭಾರೀ ಹಿನ್ನಡೆಯಾಗಿದೆ.
ಇನ್ನು, ಉಕ್ರೇನ್ ಮೇಲೆ ರಷ್ಯಾ ಅಣ್ವಸ್ತ್ರ ದಾಳಿ ನಡೆಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ನಮ್ಮ ದೇಶದ ಮೇಲೆ ರಷ್ಯಾ ಅಣ್ವಸ್ತ್ರ ದಾಳಿ ನಡೆಸಿದರೆ ಜಗತ್ತಿನ ಎಲ್ಲ ದೇಶಗಳ ದ್ವೇಷ ಕಟ್ಟಿಕೊಳ್ಲಬೇಕಾಗುತ್ತದೆ ಎಂದು ಪುಟಿನ್ಗೆ ಗೊತ್ತಿದೆ. ಹೀಗಾಗಿ, ಉಕ್ರೇನ್ ಮೇಲೆ ರಷ್ಯಾ ಅಣ್ವಸ್ತ್ರ ದಾಳಿ ನಡೆಸಿದರೆ ರಷ್ಯಾ ಅಧ್ಯಕ್ಷ ಪುಟಿನ್ ಬದುಕುಳಿಯಲು ಸಾಧ್ಯವಿಲ್ಲ. ರಷ್ಯಾ ಆಕ್ರಮಿಸಿಕೊಂಡಿರುವ ಉಕ್ರೇನ್‌ನ ಪ್ರದೇಶಗಳನ್ನು ಹಿಂಪಡೆಯಲು ನಾವು ನಮ್ಮ ಎಲ್ಲ ಪ್ರಯತ್ನಗಳನ್ನೂ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಪುಟಿನ್ ಪ್ರಾರಂಭಿಸಿದ ಯುದ್ಧದಲ್ಲಿ ರಷ್ಯಾ ಮೇಲುಗೈ ಸಾಧಿಸಿತ್ತು. ಭಾರತ, ಅಮೆರಿಕಾ ಸೇರಿದಂತೆ ಹಲವು ದೇಶಗಳು ಈ ಯುದ್ಧವನ್ನು ಕೈಬಿಟ್ಟು ಶಾಂತಿಯುತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದವು. ಆದರೆ, ರಷ್ಯಾ ಅದ್ಯಾವುದಕ್ಕೂ ಸೊಪ್ಪು ಹಾಕಿರಲಿಲ್ಲ. ಕೆಲವು ದಿನಗಳ ಹಿಂದೆ ಉಕ್ರೇನ್ ಅಧ್ಯಕ್ಷರಿಗೆ ಫೋನ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಜೊತೆ ಮಾತುಕತೆ ನಡೆಸಿ ಸಂಧಾನ ಮಾಡಿಕೊಳ್ಳಿ. ಯುದ್ಧದಿಂದ ಯಾವ ಸಮಸ್ಯೆಯನ್ನೂ ಬಗೆಹರಿಸಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದ್ದರು. ಆದರೆ, ಶಾಂತಿಯುತ ಮಾತುಕತೆಗೆ ಉಕ್ರೇನ್ ಸಿದ್ಧವಿದ್ದರೂ ರಷ್ಯಾ ಅದಕ್ಕೆ ಮನಸು ಮಾಡುತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ಉಕ್ರೇನಿಯನ್ ಸೇನಾ ಪಡೆ ಮುನ್ನುಗ್ಗುತ್ತಿರುವುದು ರಷ್ಯಾದ ಪಾಲಿಗೆ ನುಂಗಲಾರದ ತುತ್ತಾಗಿದೆ. ರಷ್ಯಾದ ಮಿತ್ರರಾಷ್ಟ್ರಗಳು ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದೆಂದು ಸೂಚಿಸಿದ್ದಾರೆ. ಇದು ಯುರೋಪಿನ ಅಧಿಕಾರಿಗಳನ್ನು ಗಾಬರಿಗೊಳಿಸಿದೆ. ಈ ನಡುವೆ ರಷ್ಯಾ ತನ್ನ ಸೇನೆಗೆ 2,00,000ಕ್ಕೂ ಹೆಚ್ಚು ಜನರನ್ನು ಸೇರ್ಪಡೆಗೊಳಿಸಿದ್ದಾರೆ ಎಂದು ಮಾಸ್ಕೋದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಮಾಹಿತಿ ನೀಡಿದ್ದರು. ಉಕ್ರೇನ್ ಮೇಲೆ ನಡೆಯುತ್ತಿರುವ ರಷ್ಯಾದ ದಾಳಿಯ ಮಧ್ಯೆ, ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಪಡೆಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರು. ಇದರ ಅಡಿಯಲ್ಲಿ ಸೇನೆಯಲ್ಲಿ 3 ಲಕ್ಷ ಮೀಸಲು ಪಡೆಯನ್ನು ನಿಯೋಜಿಸುವ ಯೋಜನೆ ಇದೆ. ಈ ಮೂಲಕ ರಷ್ಯಾ ತನ್ನ ಯುದ್ಧದ ತೀವ್ರತೆಯನ್ನು ಹೆಚ್ಚಿಸುವುದಕ್ಕೆ ಪುಷ್ಠಿ ಸಿಕ್ಕಂತಾಗಿದೆ.
ಕಳೆದ ಸೆಪ್ಟೆಂಬರ್ 21ರಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಜ್ಜುಗೊಳಿಸುವ ಅಭಿಯಾನವನ್ನು ಘೋಷಿಸಿದಾಗಿನಿಂದ 2,00,000 ಕ್ಕೂ ಹೆಚ್ಚು ಜನರನ್ನು ರಷ್ಯಾದ ಮಿಲಿಟರಿಗೆ ಸೇರಿಲಾಗಿದೆ ಎಂದು ಮಾಸ್ಕೋದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಹೇಳಿದ್ದಾರೆ. ಉಕ್ರೇನ್‌ನೊಂದಿಗಿನ ಯುದ್ಧದ ಮಧ್ಯೆ ರಷ್ಯಾದ ಸಜ್ಜುಗೊಳಿಸುವಿಕೆಯು ಮಾಸ್ಕೋದ ಪಡೆಗಳನ್ನು ಉಕ್ರೇನ್‌ನ ಮೇಲೆ ಆಕ್ರಮಣಕ್ಕೆ ಸೂಚಿಸುವ ಗುರಿಯನ್ನು ಹೊಂದಿದೆ. ಉಕ್ರೇನ್‌ನಲ್ಲಿ ಇತ್ತೀಚಿನ ಮಿಲಿಟರಿ ಹಿನ್ನಡೆಗಳ ನಂತರ ರಷ್ಯಾ ಈ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ, ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ಧ ಯಾವ ಮಟ್ಟಕ್ಕೆ ಹೋಗಬಹುದು ಎಂಬ ಆತಂಕ ಮತ್ತು ಕುತೂಹಲ ಬೇರೆ ದೇಶಗಳಲ್ಲಿ ಮನೆ ಮಾಡಿದೆ.
Published On - 4:07 pm, Fri, 7 October 22