Kannada News World Russia Ukraine War: Russia Says Have not Asked China For Military Help For Ukraine 10 Latest Facts
Russia-Ukraine War: ಉಕ್ರೇನ್ ಮೇಲಿನ ಯುದ್ಧಕ್ಕೆ ನಾವು ಚೀನಾದ ಬಳಿ ಮಿಲಿಟರಿ ಸಹಾಯ ಕೇಳಿಲ್ಲ; ರಷ್ಯಾ ಸ್ಪಷ್ಟನೆ
ರಷ್ಯಾವು ಉಕ್ರೇನ್‌ನಲ್ಲಿ ದಾಳಿ ನಡೆಸಲು ಸಾಕಷ್ಟು ಮಿಲಿಟರಿ ವ್ಯವಸ್ಥೆಯನ್ನು ಹೊಂದಿದೆ. ಉಕ್ರೇನ್ ಮೇಲೆ ದಾಳಿಯನ್ನು ಮುಂದುವರೆಸಲು ರಷ್ಯಾ ಚೀನಾದ ಬಳಿ ಮಿಲಿಟರಿ ಮತ್ತು ಆರ್ಥಿಕ ಸಹಾಯವನ್ನು ಕೇಳಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿಕೆ ನೀಡಿದ್ದರು.
ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾ ಯುದ್ಧ ಸಾರಿ 20 ದಿನಗಳು ಕಳೆದಿವೆ. ಇನ್ನೂ ಎರಡ ರಾಷ್ಟ್ರಗಳ ನಡುವಿನ ಯುದ್ಧ ಅಂತ್ಯ ಕಂಡಿಲ್ಲ. ಉಕ್ರೇನ್ (Ukraine) ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ (Russia) ಚೀನಾದ ಸಹಾಯ ಕೋರಿದೆ ಎಂದು ಅಮೆರಿಕ (America) ಆರೋಪಿಸಿತ್ತು. ಉಕ್ರೇನ್ ಮೇಲೆ ದಾಳಿಯನ್ನು ಮುಂದುವರೆಸಲು ರಷ್ಯಾ ಚೀನಾದ ಬಳಿ ಮಿಲಿಟರಿ ಮತ್ತು ಆರ್ಥಿಕ ಸಹಾಯವನ್ನು ಕೇಳಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚೀನಾ, ಉಕ್ರೇನ್ ಮೇಲಿನ ರಷ್ಯಾದ ದಾಳಿಯಲ್ಲಿ ನಮ್ಮ ಪಾತ್ರದ ಬಗ್ಗೆ ತಪ್ಪು ಸುದ್ದಿಗಳನ್ನು ಹರಡುತ್ತಿದೆ ಎಂದು ಸ್ಪಷ್ಟನೆ ನೀಡಿತ್ತು. ಅದರ ಬೆನ್ನಲ್ಲೇ ರಷ್ಯಾ ಕೂಡ ಈ ಕುರಿತು ಹೇಳಿಕೆ ನೀಡಿದ್ದು, ನಾವು ಉಕ್ರೇನ್ ಮೇಲೆ ದಾಳಿ ನಡೆಸಲು ಚೀನಾದ ಬಳಿ ಮಿಲಿಟರಿ ನೆರವು ಕೇಳಿಲ್ಲ ಎಂದು ಹೇಳಿದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ 10 ಇತ್ತೀಚಿನ ಬೆಳವಣಿಗೆಗಳು ಇಲ್ಲಿವೆ:
ರಷ್ಯಾವು ಉಕ್ರೇನ್‌ನಲ್ಲಿ ದಾಳಿ ನಡೆಸಲು ಸಾಕಷ್ಟು ಮಿಲಿಟರಿ ವ್ಯವಸ್ಥೆಯನ್ನು ಹೊಂದಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಇಂದು ಮುಂಜಾನೆ ಅಮೆರಿಕದ ಅಧಿಕಾರಿಗಳು ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಚೀನಾದ ಬಳಿ ಮಿಲಿಟರಿ ಮತ್ತು ಆರ್ಥಿಕ ನೆರವು ಕೇಳಿದೆ. ಯುದ್ಧದ ಸಲಕರಣೆಗಳಿಗಾಗಿ ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣವನ್ನು ಪ್ರಾರಂಭಿಸಿದ ಕೂಡಲೇ ಮನವಿ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು.
ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ಇನ್ನಷ್ಟು ಹೆಚ್ಚಿಸಲು ಚೀನಾದ ಮಿಲಿಟರಿ ಉಪಕರಣಗಳನ್ನು ರಷ್ಯಾ ಕೇಳಿದೆ ಎಂದು ಅಮೆರಿಕ ಆರೋಪ ಮಾಡಿತ್ತು. ಅಲ್ಲದೆ, ರಷ್ಯಾಗೆ ಸಹಾಯ ಮಾಡಿದರೆ ಚೀನಾದ ಮೇಲೂ ಜಾಗತಿಕ ನಿರ್ಬಂಧಗಳನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, “ಉಕ್ರೇನ್ ವಿಷಯದಲ್ಲಿ ಅಮೆರಿಕ ಚೀನಾವನ್ನು ಗುರಿಯಾಗಿಸಿಕೊಂಡು ದುರುದ್ದೇಶಪೂರಿತ ಉದ್ದೇಶದಿಂದ ತಪ್ಪು ಮಾಹಿತಿಯನ್ನು ಹರಡುತ್ತಿದೆ” ಎಂದು ಹೇಳಿದ್ದರು.
ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ಹೆಚ್ಚುತ್ತಿವೆ. ಉಕ್ರೇನ್ ಮತ್ತು ರಷ್ಯಾದ ಸಮಾಲೋಚಕರು ಮತ್ತೊಮ್ಮೆ ಮಾತನಾಡಲು ಸಿದ್ಧರಾಗಿದ್ದಾರೆ.
ಉಕ್ರೇನ್ ಪಶ್ಚಿಮದಲ್ಲಿರುವ ವಿಮಾನ ನಿಲ್ದಾಣದ ಮೇಲೆ ಮತ್ತೆ ವಾಯುದಾಳಿ ನಡೆದಿದೆ. ರಾಜಧಾನಿಯ ಈಶಾನ್ಯದಲ್ಲಿರುವ ಚೆರ್ನಿಹಿವ್‌ನಲ್ಲಿ ಭಾರೀ ಶೆಲ್ ದಾಳಿ ಮತ್ತು ದಕ್ಷಿಣದ ಪಟ್ಟಣವಾದ ಮೈಕೊಲೈವ್ ಮೇಲೆ ದಾಳಿಗಳು ನಡೆದಿವೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಂದು ನ್ಯಾಟೋವನ್ನು ತನ್ನ ದೇಶದ ಮೇಲೆ ಹಾರಾಟ ನಿಷೇಧ ವಲಯವನ್ನು ಹೇರುವಂತೆ ಒತ್ತಾಯಿಸಿದ್ದಾರೆ. ಪೋಲಿಷ್ ಗಡಿಗೆ ಸಮೀಪವಿರುವ ಉಕ್ರೇನಿಯನ್ ಸೇನಾ ನೆಲೆಯ ಮೇಲೆ ವಾಯುದಾಳಿ ನಡೆದ ನಂತರ ಅದರ ಸದಸ್ಯ ರಾಷ್ಟ್ರಗಳು ಶೀಘ್ರದಲ್ಲೇ ರಷ್ಯಾದ ಪಡೆಗಳಿಂದ ದಾಳಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಫೆಬ್ರವರಿ 24ರಂದು ರಷ್ಯಾದ ಉಕ್ರೇನ್ ಆಕ್ರಮಣದ ನಂತರ ಕಪ್ಪು ಸಮುದ್ರದ ಬಂದರು ನಗರವಾದ ಮರಿಪೋಲ್‌ನ 2,500ಕ್ಕೂ ಹೆಚ್ಚು ನಿವಾಸಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಅಧ್ಯಕ್ಷೀಯ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್ ಹೇಳಿದ್ದಾರೆ.
ಶನಿವಾರದ ವೇಳೆಗೆ ಸುಮಾರು 2.7 ಮಿಲಿಯನ್ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಅವರಲ್ಲಿ ಸುಮಾರು 1.7 ಮಿಲಿಯನ್ ಜನರು ಪೋಲೆಂಡ್‌ಗೆ ಹೋಗುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ UNHCR ವರದಿ ಮಾಡಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದರಿಂದ ಅಮೆರಿಕ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ರಷ್ಯಾದ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ರಷ್ಯಾದ ಹಲವಾರು ಪ್ರಮುಖ ಬ್ಯಾಂಕ್‍ಗಳ ಮೇಲೆ ನಿರ್ಬಂಧ ಹೇರಿದ್ದವು. ಜೊತೆಗೆ ರಷ್ಯಾವನ್ನು SWIFT ಹಣಕಾಸು ವ್ಯವಸ್ಥೆಯಿಂದ ಹೊರಹಾಕಿದ್ದವು.