ಮೇ ತಿಂಗಳಲ್ಲಿ ಮದುವೆಯಾಗಬೇಕಿದ್ದ ಉಕ್ರೇನಿಯನ್ (Ukraine) ದಂಪತಿಗಳು ತಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ತಮ್ಮ ಮದುವೆಯ ದಿನಾಂಕವನ್ನು ಬದಲಾಯಿಸಿ, ನಿನ್ನೆ ಮದುವೆಯಾಗಿದ್ದಾರೆ. ಅಲ್ಲದೆ, ಮದುವೆಯಾದ ಮರುದಿನವೇ ಉಕ್ರೇನಿಯನ್ ರಕ್ಷಣಾ ಪಡೆಗಳನ್ನು ಸೇರಿಕೊಂಡು, ತಮ್ಮ ದೇಶದ ಪರವಾಗಿ ಹೋರಾಟಕ್ಕಿಳಿದಿದ್ದಾರೆ. ಯಾರ್ಯನಾ ಅರೀವಾ ಎಂಬ 21 ವರ್ಷದ ಯುವತಿ ಹಾಗೂ ಸ್ವಿಯಾಟೋಸ್ಲಾವ್ ಫರ್ಸಿನ್ ಎಂಬ 24 ವರ್ಷದ ಯುವಕ ಮೇಯಲ್ಲಿ ಮದುವೆಯಾಗಬೇಕಿತ್ತು. ಆದರೆ, ಅಷ್ಟರಲ್ಲೇ ತಮ್ಮ ದೇಶದ ಮೇಲೆ ರಷ್ಯಾ (Russia) ಆಕ್ರಮಣದ ಸುದ್ದಿ ಕೇಳಿದ ನಂತರ, ಅವರು ತಮ್ಮ ಪ್ಲಾನ್ ಬದಲಾಯಿಸಿಕೊಂಡರು.
ಈ ಕುರಿತು ಟೈಮ್ಸ್ ನೌ ವರದಿ ಮಾಡಿದೆ. ಆ ಇಬ್ಬರೂ ಗುರುವಾರ ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಸೇಂಟ್ ಮೈಕೆಲ್ ಗೋಲ್ಡನ್ ಡೋಮ್ಡ್ ಮೊನಾಸ್ಟರಿಯಲ್ಲಿ ಮದುವೆಯಾಗಿದ್ದಾರೆ. ಹೊಸ ದಾಂಪತ್ಯ ಜೀವನ ಶುರು ಮಾಡಿದ ಮರುದಿನ ಅಂದರೆ ಶುಕ್ರವಾರವೇ ಅವರಿಬ್ಬರೂ ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್ ದೇಶದ ಪಡೆಯನ್ನು ಸೇರಿ ಯುದ್ಧಕ್ಕೆ ಇಳಿಯಲು ಸಜ್ಜಾಗಿದ್ದಾರೆ.
2019ರ ಅಕ್ಟೋಬರ್‌ನಲ್ಲಿ ಕೈವ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭೇಟಿಯಾದ ಯಾರ್ಯನಾ ಅರೀವಾ ಹಾಗೂ ಸ್ವಿಯಾಟೋಸ್ಲಾವ್ ಫರ್ಸಿನ್ ಇಷ್ಟಪಟ್ಟು, ಮದುವೆಯಾಗಲು ನಿರ್ಧರಿಸಿದರು. ಆಗ ಈ ರೀತಿ ಯುದ್ಧದ ಸನ್ನಿವೇಶ ಎದುರಾಗಬಹುದು ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಮದುವೆಯ ನಂತರ, ಅವರು ದೇಶವನ್ನು ರಕ್ಷಿಸಲು ಸಹಾಯ ಮಾಡಲು ಸ್ಥಳೀಯ ರಕ್ಷಣಾ ಕೇಂದ್ರಕ್ಕೆ ಸೇರ್ಪಡೆಯಾಗಿದ್ದಾರೆ.
“ನಾವು ಪ್ರೀತಿಸುವ ಜನರನ್ನು ಮತ್ತು ನಾವು ವಾಸಿಸುವ ಭೂಮಿಯನ್ನು ನಾವು ರಕ್ಷಿಸಬೇಕು. ನನ್ನ ಭೂಮಿಯನ್ನು ರಕ್ಷಿಸಲು ನಾವು ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ” ಎಂದು ಯಾರ್ಯನಾ ಹೇಳಿದ್ದಾರೆ.
ಇದನ್ನೂ ಓದಿ: Viral News: ಗಾಳಿಯ ರಭಸಕ್ಕೆ ತಲೆ ಮೇಲಿಂದ ಹಾರಿ ಹೋಯ್ತು ವಿಗ್; ನಕ್ಕು ನಕ್ಕು ಸುಸ್ತಾದ ನೆಟ್ಟಿಗರು
Russia-Ukraine War: ರಷ್ಯಾದ ದಾಳಿಯ ನಡುವೆ ಶೆಲ್ಟರ್ನಲ್ಲೇ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ