Russia-Ukraine War: ಉಕ್ರೇನ್ ರಕ್ಷಣಾ, ವಿದೇಶಾಂಗ ಸಚಿವರನ್ನು ಭೇಟಿಯಾದ ಅಮೆರಿಕ ಅಧ್ಯಕ್ಷ ಜೋ ಬಿಡೆನ್

| Updated By: ಸುಷ್ಮಾ ಚಕ್ರೆ

Updated on: Mar 26, 2022 | 6:45 PM

Joe Biden: ಪೋಲೆಂಡ್ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬಿಡನ್ ಇಂದು ಪೋಲೆಂಡ್ ರಾಜಧಾನಿ ವಾರ್ಸಾದಲ್ಲಿ ಭಾಷಣ ಮಾಡಲಿದ್ದಾರೆ. ಅದಕ್ಕೂ ಮೊದಲು ಉಕ್ರೇನ್ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ.

Russia-Ukraine War: ಉಕ್ರೇನ್ ರಕ್ಷಣಾ, ವಿದೇಶಾಂಗ ಸಚಿವರನ್ನು ಭೇಟಿಯಾದ ಅಮೆರಿಕ ಅಧ್ಯಕ್ಷ ಜೋ ಬಿಡೆನ್
ಜೋ ಬಿಡೆನ್
Follow us on

ನವದೆಹಲಿ: ಪೋಲೆಂಡ್ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್  (Joe Biden) ಇಂದು ಉಕ್ರೇನಿಯನ್ ವಿದೇಶಾಂಗ ಮತ್ತು ರಕ್ಷಣಾ ಸಚಿವರನ್ನು ಸೆಂಟ್ರಲ್ ವಾರ್ಸಾದ ಮ್ಯಾರಿಯೊಟ್ ಹೋಟೆಲ್‌ನಲ್ಲಿ ಭೇಟಿಯಾಗಿದ್ದಾರೆ. ರಷ್ಯಾದ ಆಕ್ರಮಣ ಪ್ರಾರಂಭವಾದ ಬಳಿಕ ಕೀವ್​ನ ಉನ್ನತ ಅಧಿಕಾರಿಗಳೊಂದಿಗೆ ಮೊದಲ ಬಾರಿಗೆ ಜೋ ಬಿಡೆನ್ ಮಾತುಕತೆ ನಡೆಸಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣವನ್ನು “ಮುಕ್ತ ಜಗತ್ತು” ವಿರೋಧಿಸುತ್ತದೆ ಎಂದು ಜೋ ಬಿಡೆನ್ ಇಂದು ಮಧ್ಯಾಹ್ನ ವಾರ್ಸಾದಲ್ಲಿ ಭಾಷಣ ಮಾಡಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರನ್ನು ತಡೆಯುವ ಅಗತ್ಯತೆಯ ಬಗ್ಗೆ ಪ್ರಮುಖ ಆರ್ಥಿಕತೆಗಳ ನಡುವೆ ಏಕತೆ ಇದೆ ಎಂದು ಅವರು ಹೇಳಿದ್ದಾರೆ.

ರಷ್ಯಾದ ಆಕ್ರಮಣ ಪ್ರಾರಂಭವಾದ 31 ದಿನಗಳಲ್ಲಿ ಉಕ್ರೇನ್‌ನಲ್ಲಿನ 136 ಮಕ್ಕಳನ್ನು ರಷ್ಯಾ ಕೊಂದಿದೆ ಎಂದು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿನ ಸಂದೇಶದಲ್ಲಿ ಇಂದು ತಿಳಿಸಿದೆ. ಕಳೆದ ವಾರ ಮಾರಿಪೋಲ್ ಥಿಯೇಟರ್‌ನಲ್ಲಿ ಆಶ್ರಯವಾಗಿ ಬಳಸಲಾಗುತ್ತಿರುವ ರಷ್ಯಾದ ವೈಮಾನಿಕ ದಾಳಿಯಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳಿದ್ದಾರೆ. ಇದು ಉಕ್ರೇನ್ ನಾಗರಿಕರ ಮೇಲೆ ಯುದ್ಧದ ಮಾರಣಾಂತಿಕ ದಾಳಿಯಾಗಿದೆ.

ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾದ ಆಕ್ರಮಣಶೀಲತೆಯನ್ನು ಹೇಗೆ ಪರಿಹರಿಸುತ್ತಾರೆ ಮತ್ತು ಅಮೆರಿಕಾದ ಬೆಂಬಲವನ್ನು ಹೊಂದಿರುವ ರಾಷ್ಟ್ರಗಳಿಗೆ ಹೇಗೆ ಭರವಸೆ ನೀಡುತ್ತಾರೆ ಎಂಬುದನ್ನು ಸಿಂಕ್ರೊನೈಸ್ ಮಾಡುವ ಗುರಿಯೊಂದಿಗೆ ಯುರೋಪ್‌ನ ಕೊನೆಯ ದಿನದ ಪ್ರವಾಸದಲ್ಲಿರುವ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಇಂದು ಪೋಲಿಷ್ ರಾಜಧಾನಿ ವಾರ್ಸಾದಲ್ಲಿ ಉಕ್ರೇನಿಯನ್ ಅಧಿಕಾರಿಗಳನ್ನು ಭೇಟಿ ಮಾಡಿದರು.

ಬಿಡೆನ್ ಅವರ ಯುರೋಪ್ ಭೇಟಿಯು ಸಂಪೂರ್ಣವಾಗಿ ರಷ್ಯಾ- ಉಕ್ರೇನ್ ಯುದ್ಧದ ಮೇಲೆ ಕೇಂದ್ರೀಕೃತವಾಗಿದೆ. ಆದರೆ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಮತ್ತು ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್ ಅವರೊಂದಿಗಿನ ಮಾತುಕತೆಗಳು ಬಿಡೆನ್ ತನ್ನ ಪ್ರವಾಸದ ಸಮಯದಲ್ಲಿ ಉಕ್ರೇನ್‌ನ ಅಧಿಕಾರಿಗಳೊಂದಿಗೆ ಮುಖಾಮುಖಿಯಾಗಿ ಭೇಟಿಯಾಗಲು ಸಾಧ್ಯವಾಯಿತು.

ಉಕ್ರೇನ್‌ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವುದರಿಂದ ಉಕ್ರೇನ್‌ ರಾಜಧಾನಿ ಕೀವ್‌ ನಗರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. 35 ಗಂಟೆ ಕೀವ್ ಮೇಯರ್ ಕರ್ಫ್ಯೂ ಜಾರಿಗೊಳಿಸಿದ್ದಾರೆ. ಉಕ್ರೇನ್‌ ದೇಶದ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ ಈ ಯುದ್ಧದಲ್ಲಿ ಈವರೆಗೆ ಉಕ್ರೇನ್‌ನ 1,081 ನಾಗರಿಕರನ್ನು ಹತ್ಯೆ ಮಾಡಿದೆ. ರಷ್ಯಾದ ದಾಳಿಯಿಂದ 1,707 ನಾಗರಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನಲ್ಲಿ ಸಾವು- ನೋವಿನ ಬಗ್ಗೆ ಅಮೆರಿಕದಿಂದ ಮಾಹಿತಿ ಲಭ್ಯವಾಗಿದೆ.

ರಷ್ಯಾ ಉಕ್ರೇನ್‌ನಿಂದ ತೀವ್ರ ಪ್ರತಿರೋಧವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಕೀವ್ ವಶಪಡಿಸಿಕೊಳ್ಳುವ ಗುರಿಯೊಂದಿಗೆ ರಷ್ಯಾ ತನ್ನ ಶಸ್ತ್ರಾಗಾರದಲ್ಲಿರುವ ಒಂದೊಂದು ಅಸ್ತ್ರವನ್ನೂ ಹೊರ ತೆಗೆಯುತ್ತಿದೆ. ಈಗಾಗಲೇ ಎರಡು ಬಾರಿ ಕಿಂಜಾಲ್ ಹೈಪರ್ಸಾನಿಕ್ ಕ್ಷಿಪಣಿ ದಾಳಿಗೆ ನಡೆಸಿದ ಪುಟಿನ್ ಸೇನಾ ಪಡೆಇತ್ತೀಚೆಗೆ ಮತ್ತೊಂದು ಶಕ್ತಿಶಾಲಿ ಅಸ್ತ್ರದ ಪ್ರಯೋಗ ಮಾಡಿದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: ಉಕ್ರೇನ್​​ನಲ್ಲಿ ಆಸ್ಪತ್ರೆಗಳ ಮೇಲೆ 34 ಬಾರಿ ದಾಳಿ ನಡೆಸಿದ ರಷ್ಯಾ ಸೇನಾ ಪಡೆ; ವಾರ್​ ಕ್ರೈಂ ನಡೆಯುತ್ತಿರುವುದಕ್ಕೆ ಇದು ಪುರಾವೆ

ಉಕ್ರೇನ್ ಶೃಂಗಸಭೆಗೆ ತಾತ್ವಿಕ ಒಪ್ಪಿಗೆ ನೀಡಿದ ಅಮೆರಿಕ ಅಧ್ಯಕ್ಷ ಜೊ ಬಿಡೆನ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್