ವೆಂಟಿಲೇಟರ್ ತೆರವು, ಸಲ್ಮಾನ್ ರಶ್ದಿ ಚೇತರಿಸಿಕೊಳ್ಳುತ್ತಿದ್ದಾರೆ: ಮಗ ಜಾಫರ್ ಟ್ವೀಟ್

| Updated By: ರಶ್ಮಿ ಕಲ್ಲಕಟ್ಟ

Updated on: Aug 15, 2022 | 3:11 PM

ನಿನ್ನೆ ವೆಂಟಿಲೇಟರ್ ತೆರವು ಮಾಡಿದ್ದರಿಂದ ಮತ್ತು ಹೆಚ್ಚುವರಿ ಆಕ್ಸಿಜನ್ ತೆಗೆದಿರುವುದರಿಂದ ನಾವು ನಿಟ್ಟುಸಿರು ಬಿಟ್ಟಿದ್ದೇವೆ. ಅವರು ಈಗ ಕೆಲವು ಮಾತುಗಳನ್ನಾಡಲು ಸಾಧ್ಯವಾಗಿದೆ.

ವೆಂಟಿಲೇಟರ್ ತೆರವು, ಸಲ್ಮಾನ್ ರಶ್ದಿ ಚೇತರಿಸಿಕೊಳ್ಳುತ್ತಿದ್ದಾರೆ: ಮಗ ಜಾಫರ್ ಟ್ವೀಟ್
ಸಲ್ಮಾನ್ ರಶ್ದಿ
Follow us on

ಲಂಡನ್: ನ್ಯೂಯಾರ್ಕ್​​ ನಲ್ಲಿ (New York)ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಲೇಖಕ ಸಲ್ಮಾನ್ ರಶ್ದಿ (Salman Rushdie) ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ವೆಂಟಿಲೇಟರ್ ತೆರವು ಮಾಡಲಾಗಿದೆ ಎಂದು ಅವರ ಮಗ ಭಾನುವಾರ ಹೇಳಿದ್ದಾರೆ. ನಿನ್ನೆ ವೆಂಟಿಲೇಟರ್ ತೆರವು ಮಾಡಿದ್ದರಿಂದ ಮತ್ತು ಹೆಚ್ಚುವರಿ ಆಕ್ಸಿಜನ್ ತೆಗೆದಿರುವುದರಿಂದ ನಾವು ನಿಟ್ಟುಸಿರು ಬಿಟ್ಟಿದ್ದೇವೆ. ಅವರು ಈಗ ಕೆಲವು ಮಾತುಗಳನ್ನಾಡಲು ಸಾಧ್ಯವಾಗಿದೆ ಎಂದು ಮಗ ಜಾಫರ್ ಟ್ವೀಟ್ ಮಾಡಿದ್ದಾರೆ. ರಶ್ದಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಏಜೆಂಟ್ ಆಂಡ್ರ್ಯೂ ವಾಲಿ ಭಾನುವಾರ ಹೇಳಿದ್ದಾರೆ. ದಾಳಿಯಿಂದಾಗಿ ಅವರಿಗಾದ ಗಾಯ ಬದುಕು ಬದಲಿಸುವಂತದ್ದು ಮತ್ತು ಗಂಭೀರವಾದುದು. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ ಅವರ ರೇಗುವ ಮತ್ತು ಹಾಸ್ಯ ಪ್ರವೃತ್ತಿಗೆ ಕುಂದುಂಟಾಗಿಲ್ಲ ಎಂದಿದ್ದಾರೆ. ರಶ್ದಿ ಅವರ ಸಹಾಯಕ್ಕೆ ಬಂದು ಅವರಿಗೆ ರಕ್ಷಣೆ ನೀಡಿದ ಸಭಿಕರಿಗೆ ಮತ್ತು ಜಗತ್ತಿನಾದ್ಯಂತ ಅವರಿಗೆ ಹರಿದು ಬರುತ್ತಿರುವ ಪ್ರೀತಿ ಮತ್ತು ಬೆಂಬಲಕ್ಕೆ ಜಾಫರ್ ಧನ್ಯವಾದ ಹೇಳಿದ್ದಾರೆ. ರಶ್ದಿ ಅವರ ಹೊಟ್ಟೆಗೂ ಗಾಯಗಳಾಗಿದ್ದು, ಅವರು ಒಂದು ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಏಜೆಂಟ್ ಹೇಳಿದ್ದರು.

ಇರಾನಿನ ನಾಯಕ,  ರಶ್ದಿ ಅವರು “ದಿ ಸೈಟಾನಿಕ್ ವರ್ಸಸ್” ನಲ್ಲಿ ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ನಿಂದೆ ಮಾಡಿದ್ದಾರೆ ಎಂದು ಆರೋಪಿಸಿ ಕೊಲ್ಲಲು ಕರೆ ನೀಡಿದ ನಂತರ ರಶ್ದಿ ಪೊಲೀಸ್ ರಕ್ಷಣೆಯಲ್ಲಿ ವರ್ಷಗಳ ಕಾಲ ಕಳೆದಿದ್ದಾರೆ. ಅವರು ಪಶ್ಚಿಮ ನ್ಯೂಯಾರ್ಕ್ ರಾಜ್ಯದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲು ಹೊರಟಿದ್ದಾಗ ಒಬ್ಬ ವ್ಯಕ್ತಿ ವೇದಿಕೆಯ ಮೇಲೆ ಧಾವಿಸಿ ಕುತ್ತಿಗೆ ಮತ್ತು ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ.

ಶಂಕಿತ ದಾಳಿಕೋರ, ಹಾದಿ ಮಾತರ್(24)ನ್ನು ಅಲ್ಲಿದ್ದಸಿಬ್ಬಂದಿ ಮತ್ತು ಇತರ ಪ್ರೇಕ್ಷಕರು ಹಿಡಿದು ಬೀಳಿಸಿದ ನಂತರ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದೆ. ಶನಿವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತಾನು ಕೊಲೆ ಯತ್ನ ಮಾಡಿ ತಪ್ಪೆಸಗಿಲ್ಲ ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ
Salman Rushdie: ಚಾಕುವಿನಿಂದ ಇರಿತಕ್ಕೊಳಗಾದ ಲೇಖಕ ಸಲ್ಮಾನ್ ರಶ್ದಿಗೆ ವೆಂಟಿಲೇಟರ್​​ನಲ್ಲಿ ಚಿಕಿತ್ಸೆ; ಒಂದು ಕಣ್ಣಿಗೆ ತೀವ್ರ ಹಾನಿ
Big Breaking: Salman Rushdie ನ್ಯೂಯಾರ್ಕ್​​ನಲ್ಲಿ ಲೇಖಕ ಸಲ್ಮಾನ್​​​ ರಶ್ದಿ ಮೇಲೆ ಹಲ್ಲೆ

 ವಿದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ