Salman Rushdie: ಚಾಕುವಿನಿಂದ ಇರಿತಕ್ಕೊಳಗಾದ ಲೇಖಕ ಸಲ್ಮಾನ್ ರಶ್ದಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ; ಒಂದು ಕಣ್ಣಿಗೆ ತೀವ್ರ ಹಾನಿ
ಲೇಖಕ ಸಲ್ಮಾನ್ ರಶ್ದಿ ಅವರ ತೋಳಿನ ನರಗಳು ತುಂಡಾಗಿವೆ ಹಾಗೂ ಅವರ ಯಕೃತ್ತಿಗೆ ಹಾನಿಯಾಗಿದೆ. ಈ ದಾಳಿಯಿಂದ ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ನವದೆಹಲಿ: ಅಮೆರಿಕದ ನ್ಯೂಯಾರ್ಕ್‌ನಲ್ಲಿ (New York) ಶುಕ್ರವಾರ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಖ್ಯಾತ ಲೇಖಕ ಸಲ್ಮಾನ್ ರಶ್ದಿಯವರ (Salman Rushdie) ಕುತ್ತಿಗೆ ಮತ್ತು ಹೊಟ್ಟೆಗೆ ಇರಿದಿರುವ ಘಟನೆ ನಡೆದಿದೆ. 75 ವರ್ಷದ ಲೇಖಕ ಸಲ್ಮಾನ್ ರಶ್ದಿ ಸ್ಥಿತಿ ಗಂಭೀರವಾಗಿದ್ದು, ಸದ್ಯಕ್ಕೆ ವೆಂಟಿಲೇಟರ್‌ನಲ್ಲಿದ್ದಾರೆ. ಚಾಕುವಿನ ಇರಿತದಿಂದ ಅವರು ಒಂದು ಕಣ್ಣು ಕಳೆದುಕೊಳ್ಳಬಹುದು ಎನ್ನಲಾಗಿದೆ. ಅವರ ಮೇಲೆ ದಾಳಿ ನಡೆಸಿದವರನ್ನು ಪೊಲೀಸರು ಗುರುತಿಸಿದ್ದಾರೆ.
- ಲೇಖಕ ಸಲ್ಮಾನ್ ರಶ್ದಿ ಅವರ ತೋಳಿನ ನರಗಳು ತುಂಡಾಗಿವೆ ಹಾಗೂ ಅವರ ಯಕೃತ್ತಿಗೆ ಹಾನಿಯಾಗಿದೆ. ಈ ದಾಳಿಯಿಂದ ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಲೇಖಕರ ಏಜೆಂಟ್ ಹೇಳಿದ್ದಾರೆ.
- ತನ್ನ ಬರವಣಿಗೆಯ ಕಾರಣಕ್ಕಾಗಿ ಮುಸ್ಲಿಮರನ್ನು ಕೊಲ್ಲುವಂತೆ ಇರಾನ್ ಒತ್ತಾಯಿಸಿದ ನಂತರ ಹಲವು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಭಾರತೀಯ ಮೂಲದ ಕಾದಂಬರಿಕಾರ ಸಲ್ಮಾನ್ ರಶ್ದಿ ಇದೀಗ ಆಸ್ಪತ್ರೆಯಲ್ಲಿ ವೆಂಟಿಲೇರ್ನಲ್ಲಿದ್ದಾರೆ.
- ನ್ಯೂಯಾರ್ಕ್ ರಾಜ್ಯದ ಪೊಲೀಸರು ಸಲ್ಮಾನ್ ರಶ್ದಿಯ ಮೇಲೆ ದಾಳಿ ನಡೆಸಿದವರನ್ನು ನ್ಯೂಜೆರ್ಸಿಯ ಹದಿ ಮತರ್ (24) ಎಂದು ಗುರುತಿಸಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶ ಅಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಸಲ್ಮಾನ್ ರಶ್ದಿಯವರಿದ್ದ ವೇದಿಕೆಗೆ ಬಂದ ಹದಿ ಮತರ್ ಇದ್ದಕ್ಕಿದ್ದಂತೆ ಚಾಕುವಿನಿಂದ ತಿವಿದು ದಾಳಿ ನಡೆಸಿದರು. ಈ ದಾಳಿಯಲ್ಲಿ ಸಲ್ಮಾನ್ ರಶ್ದಿ ಅವರನ್ನು ಸಂದರ್ಶನ ಮಾಡುತ್ತಿದ್ದ ಹೆನ್ರಿ ರೀಸ್ ತಲೆಗೂ ಗಾಯವಾಗಿದೆ.
- ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳು ಮತ್ತು ಫೋಟೋಗಳ ಪ್ರಕಾರ, ಪ್ರೇಕ್ಷಕರಲ್ಲಿ ಕೆಲವರು ವೇದಿಕೆಗೆ ಧಾವಿಸಿ ಶಂಕಿತನನ್ನು ನೆಲಕ್ಕೆ ಬೀಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ವೈದ್ಯರು ತಕ್ಷಣ ತುರ್ತು ಚಿಕಿತ್ಸೆ ನೀಡತೊಡಗಿದರು. ನಂತರ ಆ್ಯಂಬುಲೆನ್ಸ್ ಕರೆಸಿ ಸಲ್ಮಾನ್ ರಶ್ದಿಯವರನ್ನು ವಿಮಾನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು.
- ನ್ಯೂಯಾರ್ಕ್ ನಗರದ ಸಮೀಪವಿರುವ ಚೌಟಕ್ವಾ ಸಂಸ್ಥೆಯಲ್ಲಿ ರಶ್ದಿ ಭಾಷಣ ಮಾಡಲು ಸಲ್ಮಾನ್ ರಶ್ದಿ ಹೋಗಿದ್ದಾಗ ಈ ದಾಳಿ ನಡೆದಿದೆ. ಈ ಸಮಾರಂಭದಲ್ಲಿ ಸುಮಾರು 2,500 ಜನರಿದ್ದರು. ಈ ದಾಳಿಯ ನಂತರ ಅವರನ್ನು ಸ್ಥಳಾಂತರಿಸಲಾಯಿತು.
- ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಈ ದಾಳಿಯನ್ನು ಖಂಡಿಸಿದ್ದಾರೆ. “ನಾವು ಎಲ್ಲಾ ಹಿಂಸಾಚಾರವನ್ನು ಖಂಡಿಸುತ್ತೇವೆ. ಜನರಿಗೆ ಮಾತನಾಡುವ ಮತ್ತು ಸತ್ಯವನ್ನು ಬರೆಯುವ ಸ್ವಾತಂತ್ರ್ಯ ಇರಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.
- ಸಲ್ಮಾನ್ ರಶ್ದಿಯವರು 1981ರಲ್ಲಿ ಅವರ ಎರಡನೇ ಕಾದಂಬರಿಯಾದ “ಮಿಡ್ನೈಟ್ಸ್ ಚಿಲ್ಡ್ರನ್” ಮೂಲಕ ಗಮನ ಸೆಳೆದರು. ಇದು ಅಂತಾರಾಷ್ಟ್ರೀಯ ಪ್ರಶಂಸೆ ಮತ್ತು ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
- ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿರುವ ಸಲ್ಮಾನ್ ರಶ್ದಿ ಕಳೆದ 20 ವರ್ಷಗಳಿಂದ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ.
- ಸಲ್ಮಾನ್ ರಶ್ದಿ ಅವರು ತಮ್ಮ 1988ರ ಪುಸ್ತಕ ದಿ ಸೈಟಾನಿಕ್ ವರ್ಸಸ್‌ಗಾಗಿ ದಶಕಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಈ ಕಾದಂಬರಿಯನ್ನು ಕೆಲವು ಧರ್ಮಗುರುಗಳು ಪ್ರವಾದಿ ಮೊಹಮ್ಮದ್‌ಗೆ ತೋರಿದ ಅಗೌರವವೆಂದು ಪರಿಗಣಿಸಿದ್ದಾರೆ.