ನವದೆಹಲಿ: ಏಷ್ಯಾದ ಶ್ರೀಮಂತ ಮಹಿಳೆಯ ಪಟ್ಟದಲ್ಲಿದ್ದ ಚೀನಾದ ಯಾಂಗ್ ಹುಯಿಯಾನ್ (Yang Huiyan) ಇನ್ನು ಮುಂದೆ ಆ ಸ್ಥಾನದಲ್ಲಿ ಇರುವುದಿಲ್ಲ. ಏಕೆಂದರೆ, ಭಾರತದ ಸಾವಿತ್ರಿ ಜಿಂದಾಲ್ (Savitri Jindal) ಏಷ್ಯಾದ ಅತಿ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಯಾಂಗ್ ಅವರನ್ನು ಹಿಂದಿಕ್ಕಿದ ಭಾರತದ ಸಾವಿತ್ರಿ ಜಿಂದಾಲ್ ಏಷ್ಯಾದ ಅತಿ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.
ಲೋಹಗಳು ಮತ್ತು ವಿದ್ಯುತ್ ಉತ್ಪಾದನೆ ಸೇರಿದಂತೆ ಅನೇಕ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಜಿಂದಾಲ್ ಗ್ರೂಪ್‌ಗೆ ಸಂಬಂಧಿಸಿರುವ ಸಾವಿತ್ರಿ ಜಿಂದಾಲ್ 11.3 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. 2005ರಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದ ತನ್ನ ತಂದೆಯ ಪಾಲನ್ನು ಪಿತ್ರಾರ್ಜಿತವಾಗಿ ಪಡೆದ ಯಾಂಗ್‌ಗೆ ಇದು ಭಾರೀ ಹಿನ್ನೆಡೆಯಾಗಿದೆ. ಇವರು ಜಗತ್ತಿನ ಅತ್ಯಂತ ಕಿರಿಯ ಬಿಲಿಯನೇರ್‌ಗಳಲ್ಲಿ ಒಬ್ಬರೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದ ಇವರು ಏಷ್ಯಾದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದರು. ಆದರೀಗ ಅವರು ಆ ಪಟ್ಟದಿಂದ ಕೆಳಗಿಳಿದಿದ್ದಾರೆ.
72 ವರ್ಷದ ಸಾವಿತ್ರಿ ಜಿಂದಾಲ್ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದು, ಇದೀಗ ಏಷ್ಯಾ ಖಂಡದ ಅತಿ ಶ್ರೀಮಂತ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ಸಾವಿತ್ರಿ ಜಿಂದಾಲ್ ಅವರ ಪತಿ ಓಪಿ ಜಿಂದಾಲ್ ಅವರು 2005ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಅದಾಗಿ ಕೆಲವು ಸಮಯದ ನಂತರ ಸಾವಿತ್ರ ಅವರು ಜಿಂದಾಲ್ ಗ್ರೂಪ್‌ನ ಅಧ್ಯಕ್ಷರಾದರು. ಈ ಜಿಂದಾಲ್ ಕಂಪನಿಯು ಭಾರತದಲ್ಲಿ ಉಕ್ಕನ್ನು ಉತ್ಪಾದಿಸುವ 3ನೇ ಅತಿದೊಡ್ಡ ಸಂಸ್ಥೆಯಾಗಿದೆ.
ಇದನ್ನೂ ಓದಿ: Gautam Adani: ವಿಶ್ವದ ಟಾಪ್-5 ಶ್ರೀಮಂತರ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಅದಾನಿ
ಇತ್ತೀಚಿನ ವರ್ಷಗಳಲ್ಲಿ ಜಿಂದಾಲ್ ಸಂಸ್ಥೆಯ ನಿವ್ವಳ ಮೌಲ್ಯವು ವಿಪರೀತವಾಗಿ ಏರಿಳಿತವಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ಅಂದರೆ ಏಪ್ರಿಲ್ 2020ರಲ್ಲಿ 3.2 ಶತಕೋಟಿ ರೂ.ಗೆ ಕುಸಿದಿತ್ತು. ನಂತರ ಏಪ್ರಿಲ್ 2022ರಲ್ಲಿ 15.6 ಶತಕೋಟಿಗೆ ತಲುಪಿತು. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದ ಸರಕುಗಳ ಬೆಲೆಗಳು ಗಗನಕ್ಕೇರಿತು.
ಯಾರು ಈ ಸಾವಿತ್ರಿ ಜಿಂದಾಲ್?:
ಸಾವಿತ್ರಿ ಜಿಂದಾಲ್ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದು, ಅವರ ನಿವ್ವಳ ಮೌಲ್ಯವು ಕೇವಲ ಎರಡು ವರ್ಷಗಳಲ್ಲಿ ಸುಮಾರು 12 ಶತಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಜಗತ್ತಿನ ಬಿಲಿಯನೇರ್ ಪಟ್ಟಿಯಲ್ಲಿ ಜಿಂದಾಲ್ ಗ್ರೂಪ್‌ನ ಸಾವಿತ್ರಿ ಜಿಂದಾಲ್ 91ನೇ ಸ್ಥಾನದಲ್ಲಿದ್ದಾರೆ. ಇನ್ನೊಂದು ವಿಶೇಷವೆಂದರೆ ಸಾವಿತ್ರಿ ಜಿಂದಾಲ್ ಕಾಲೇಜು ಶಿಕ್ಷಣ ಪಡೆದವರಲ್ಲ. ಶೈಕ್ಷಣಿಕ ಕಲಿಕೆಗೆ ಅವರಿಗೆ ಅವಕಾಶ ಸಿಗಲೇ ಇಲ್ಲ. ಆದರೂ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ 13 ಮಹಿಳಾ ಬಿಲಿಯನೇರ್‌ಗಳಲ್ಲಿ ಒಬ್ಬರು ಎಂಬ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಕೃಷಿಯತ್ತ ದಾಪುಗಾಲು ಹಾಕುತ್ತಿರುವ ಅಮೆರಿಕದ ಅತಿಶ್ರೀಮಂತ ಉದ್ಯಮಿಗಳು
ಸಾವಿತ್ರಿ ಅವರ ಪತಿ ಓಪಿ ಜಿಂದಾಲ್ ನಿಧನದ ಬಳಿಕ ಸಾವಿತ್ರಿ ಜಿಂದಾಲ್ ಅನಿವಾರ್ಯವಾಗಿ ಗಂಡನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು. ಜಿಂದಾಲ್ ಸಾವಿನಿಂದ ಸಾವಿತ್ರಿಯವರ ಜೀವನಕ್ಕೆ ಹೊಸ ತಿರುವು ಸಿಕ್ಕಿತು. ಅದುವರೆಗೂ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದ ಅವರು ಕಂಪನಿಯ ಜವಾಬ್ದಾರಿ ವಹಿಸಿಕೊಳ್ಳಬೇಕಾಯಿತು. ಎಲ್ಲರೂ ನಿವೃತ್ತಿ ಪಡೆಯುವ ವಯಸ್ಸಿನಲ್ಲಿ ಸಾವಿತ್ರಿ ಜಿಂದಾಲ್ ಬೃಹತ್ ಕಂಪನಿಯ ಉಸ್ತುವಾರಿ ವಹಿಸಿಕೊಂಡರು.
ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್, ಯುಎಸ್‌ವಿ ಪ್ರೈವೇಟ್ ಲಿಮಿಟೆಡ್‌ನ ಲೀನಾ ತಿವಾರಿ ಮತ್ತು ಕಿರಣ್ ಮಜುಂದಾರ್ ಶಾ ಅವರು ಕೂಡ ಭಾರತದ ಬಿಲಿಯನೇರ್ ಮಹಿಳೆಯರ ಪಟ್ಟಿಯಲ್ಲಿ ಸೇರಿದ್ದಾರೆ.
Published On - 2:49 pm, Sat, 30 July 22