ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ನಿನ್ನೆ ರಾತ್ರಿ ಕೆಳಗಿಳಿದ ಬೆನ್ನಲ್ಲೇ ದೇಶಕ್ಕೆ ಬೇರೆ ಪ್ರಧಾನಿಯನ್ನು ನೇಮಕ ಮಾಡುವ ಪ್ರಕ್ರಿಯೆ ಚುರುಕುಗೊಂಡಿದೆ. ಪ್ರತಿಪ್ರಕ್ಷಗಳೆಲ್ಲ ಸೇರಿ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದ ನಾಯಕ ಶೆಹಬಾಜ್ ಶರೀಫ್ರನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಿವೆ. ಇತ್ತ ಇಮ್ರಾನ್ ಖಾನ್ರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಾರ್ಟಿ, ಶಾ ಮೊಹಮ್ಮದ್ ಖುರೇಶಿ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ. ಸದ್ಯ ಪ್ರಧಾನಿ ಹುದ್ದೆಯ ರೇಸ್ನಲ್ಲಿ ಶೆಹಬಾಜ್ ಶರೀಫ್ ಮತ್ತು ಖುರೇಷಿ ಇದ್ದು, ನಾಳೆಯಷ್ಟರಲ್ಲಿ ನೂತನ ಪಿಎಂ ಆಯ್ಕೆ ಚುನಾವಣೆ ನಡೆಯಲಿದೆ. ಶೆಹಬಾಜ್ ಶರೀಫ್ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ (ಮೂರು ಸಲ ಪ್ರಧಾನಿಯಾದವರು) ನವಾಜ್ ಶರೀಫ್ರ ತಮ್ಮ. ಪಾಕಿಸ್ತಾನದ ಮುಂದಿನ ಪ್ರಧಾನಮಂತ್ರಿ ಇವರೇ ಎಂದೇ ಹೇಳಲಾಗುತ್ತಿದೆ.
ಪ್ರತಿಪಕ್ಷಗಳೆಲ್ಲ ಸೇರಿ ತಮ್ಮನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಿದ ಬಳಿಕ ಟ್ವೀಟ್ ಮಾಡಿದ ಶೆಹಬಾಜ್ ಶರೀಫ್, ನಾನು ನಾಗರಿಕ ಸಮಾಜಕ್ಕೆ, ಮಾಧ್ಯಮದವರಿಗೆ, ವಕೀಲರಿಗೆ, ನನ್ನ ಸಹೋದರ ನವಾಜ್ ಶರೀಫ್ ಸೇರಿ ಎಲ್ಲರಿಗೂ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಸಂವಿಧಾನಕ್ಕೆ ಬದ್ಧವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. ಇನ್ನು ನವಾಜ್ ಶರೀಫ್ ಪಾಕಿಸ್ತಾನದಲ್ಲಿ ಮೂರು ಸಲ ಪ್ರಧಾನಿಯಾದರೂ ಕೊನೆಗೆ ಸುತ್ತಿಕೊಂಡಿದ್ದ ಭ್ರಷ್ಟಾಚಾರ ಆರೋಪ. ಅವರನ್ನು 2017ರಲ್ಲಿ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಲಾಯಿತು. ಜೈಲಿಗೂ ಸೇರಿದ್ದರು. ಸದ್ಯ ಅವರು ಲಂಡನ್ನಲ್ಲಿ ಆಶ್ರಯ ಪಡೆದಿದ್ದಾರೆ.
ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈ ಶೆಹಬಾಜ್ ಶರೀಫ್. ಇವರ ನೇತೃತ್ವದಲ್ಲಿಯೇ ಪ್ರತಿಪಕ್ಷಗಳು ವಿವಿಧ ತಂತ್ರ ರೂಪಿಸಿದ್ದು. ಹೀಗಾಗಿ ಎಲ್ಲ ವಿಪಕ್ಷಗಳೂ ಜಂಟಿಯಾಗಿ ಶರೀಫ್ ಅವರೇ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಂಡಿವೆ. ಹಾಗೇ, ಶರೀಫ್ ಪ್ರಧಾನಿಯಾದರೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಾಲ್ ಬುಟ್ಟೋ ಜರ್ದಾರಿ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರಾಗಿ ನೇಮಕಗೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದ್ದಾಗಿ ಪಿಟಿಐ ತಿಳಿಸಿದೆ.
ಖುರೇಶಿ ನಾಮ ನಿರ್ದೇಶನ
ಇತ್ತ ಇಮ್ರಾನ್ ಖಾನ್ ಪಕ್ಷವಾದ ಪಾಕಿಸ್ತಾನ್ ತೆಹ್ರೀನ್ ಇ ಇನ್ಸಾಫ್ ಮೊಹಮ್ಮದ್ ಖುರೇಶಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿದೆ. ಇವರು ಇಮ್ರಾನ್ ಖಾನ್ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರಾಗಿದ್ದರು. ನಿನ್ನೆ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಸದನದಿಂದ ಹೊರನಡೆದಿದ್ದು. ಅವರ ಈ ನಡೆಯನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬುಟ್ಟೋ ಟೀಕಿಸಿದ್ದಾರೆ.
ಇದನ್ನೂ ಓದಿ: Srinagar Encounter: ಶ್ರೀನಗರದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ ಇಬ್ಬರು ಪಾಕಿಸ್ತಾನಿ ಉಗ್ರರ ಎನ್ಕೌಂಟರ್