ಲಂಡನ್: ಆಘಾತಕಾರಿ ವಿದ್ಯಮಾನವೊಂದರಲ್ಲಿ ಗ್ಯಾಂಬಿಯಾದಿಂದ (Gambia) ಬ್ರಿಟನ್ಗೆ (Britain) ಬಂದ ವಿಮಾನವೊಂದರ ಚಕ್ರದ ಸಂಧಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ (Dead Body) ಪತ್ತೆಯಾಗಿದೆ. ವ್ಯಕ್ತಿಯ ಗುರುತುಪತ್ತೆ ಈಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಿಮಿಸಿದೆ. ಗ್ಯಾಂಬಿಯಾ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ರಾಜಧಾನಿ ಬಂಜುಲ್ನಿಂದ (Banjul) ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ (Gatwick airport) ತೆರಳಿದ್ದ ಟಿಯುಐ ಏರ್ವೇಸ್ನ ವಿಮಾನದ ಚಕ್ರದ ಸಂಧಿಯಲ್ಲಿ ಅಪರಿಚಿತ ಕಪ್ಪು ವರ್ಣೀಯ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
‘ಬ್ರಿಟನ್ನ ಸಸೆಕ್ಸ್ ಮೆಟ್ರೋಪಾಲಿಟನ್ ಪೊಲೀಸರಿಂದ ನಮಗೆ ತೀವ್ರ ದುಃಖಕರವಾದ ಮತ್ತು ಆಘಾತಕರವಾದ ಮಾಹಿತಿ ದೊರೆತಿದೆ. ಟಿಯುಐ ಏರ್ವೇಸ್ನ ವಿಮಾನದ ಚಕ್ರದ ಸಂಧಿಯಲ್ಲಿ ಡಿಸೆಂಬರ್ 5ರಂದು ವ್ಯಕ್ತಿಯ ಮೃತದೇಹ ಪತ್ತೆಯಾಗಿರುವುದಾಗಿ ಅವರು ತಿಳಿಸಿದ್ದಾರೆ’ ಎಂದು ಗ್ಯಾಂಬಿಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಮೃತ ವ್ಯಕ್ತಿ ಕಪ್ಪು ವರ್ಣೀಯನಾಗಿದ್ದು, ಚಕ್ರದ ಸಂಧಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅದರ ಜತೆ ಗುರುತಿನ ಯಾವುದೇ ದಾಖಲೆಗಳಾಗಲೀ, ಹೆಸರು, ವಯಸ್ಸು, ರಾಷ್ಟ್ರೀಯತೆ ಇತ್ಯಾದಿ ವಿವರಗಳನ್ನು ತಿಳಿಯುವುದಕ್ಕೆ ಸಂಬಂಧಿಸಿದ ಯಾವುದೇ ಕುರುಹು ಇರಲಿಲ್ಲ. ಮೃತ ವ್ಯಕ್ತಿ ಗ್ಯಾಂಬಿಯಾ ಪ್ರಜೆಯೇ ಅಥವಾ ಬೇರೆ ದೇಶದವರೇ ಎಂಬ ವಿಚಾರದಲ್ಲಿ ಸ್ಪಷ್ಟತೆ ಇಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನಿಯನ್ ಮಹಿಳೆಯರನ್ನು ಅತ್ಯಾಚಾರ ಮಾಡುವಂತೆ ರಷ್ಯಾದ ಯೋಧನಿಗೆ ಹೇಳಿದ ಪತ್ನಿಗೆ ಜೈಲು, ವಾಂಟೆಡ್ ಲಿಸ್ಟ್ಗೆ ಸೇರ್ಪಡೆ
ಅಪರಿಚಿತ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗ್ಯಾಂಬಿಯಾ ಅಧಿಕಾರಿಗಳು ಬ್ರಿಟಿಷ್ ಪೊಲೀಸರ ಜತೆ ಸಂಪರ್ಕದಲ್ಲಿದ್ದಾರೆ. ಗುರುತು ಪತ್ತೆಗಾಗಿ ಮೃತದೇಹದ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಗ್ಯಾಂಬಿಯಾ ಸರ್ಕಾರದ ವಕ್ತಾರ ಎಬ್ರಿಮಾ ಜಿ. ಸಂಕರೆ ತಿಳಿಸಿದ್ದಾರೆ. ಬ್ರಿಟನ್ ಪೊಲೀಸರ ಜತೆ ಸಂಪರ್ಕದಲ್ಲಿರುವುದರೊಂದಿಗೆ ಗ್ಯಾಂಬಿಯಾ ಪೊಲೀಸರೂ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ದುರದೃಷ್ಟಕರ ಘಟನೆ ಬಗ್ಗೆ ಸಾರ್ವಜನಿಕರಿಗೆ ಶೀಘ್ರದಲ್ಲೇ ವಿವರಗಳನ್ನು ಒದಗಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಆಫ್ರಿಕಾ ದೇಶಗಳಿಂದ ಯುರೋಪ್ ದೇಶಗಳಿಗೆ ಬಂದ ವಿಮಾನಗಳಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆಗಳು ಈ ಹಿಂದೆಯೂ ವರದಿಯಾಗಿದ್ದವು. ಈ ವರ್ಷದ ಆರಂಭದಲ್ಲಿ ಕೀನ್ಯಾದಿಂದ ಆ್ಯಮ್ಸಟರ್ಡ್ಯಾಂಗೆ ಬಂದ ಸರಕು ಸಾಗಣೆ ವಿಮಾನದ ಮುಂಭಾಗದ ಚಕ್ರದ ಸಂಧಿಯಲ್ಲಿ ಮೃತದೇಹ ಪತ್ತೆಯಾಗಿತ್ತು. 2019ರಲ್ಲಿಯೂ ಇಂಥದ್ದೇ ಪ್ರಕರಣವೊಂದು ವರದಿಯಾಗಿತ್ತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Sat, 24 December 22